ಹಳೆ ಡಿಸಿ ಕಚೇರಿ ಪಾರಂಪರಿಕ ಉತ್ಸವ ಇಂದಿಗೆ ವಿಸ್ತರಣೆ

| Published : Dec 02 2024, 01:15 AM IST

ಸಾರಾಂಶ

ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಈ ಹಳೆ ಕಟ್ಟಡವನ್ನೇ ಕೇಂದ್ರೀಕರಿಸಿ ಇದೇ ಮೊದಲ ಬಾರಿಗೆ ಪಾರಂಪರಿಕ ಉತ್ಸವ ಆಯೋಜಿಸಲಾಗಿದೆ. ಇದರಲ್ಲಿ ಕರಾವಳಿಯ ಸೊಗಡು, ಕಲೆ, ಸಂಸ್ಕೃತಿ, ಇತಿಹಾಸವನ್ನು ಬಿಂಬಿಸುವ ಕಲಾಕೃತಿಗಳು, ಅಪರೂಪದ ಫೋಟೊಗಳು ಇತ್ಯಾದಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬರೋಬ್ಬರಿ 170 ವರ್ಷಗಳಷ್ಟು ಹಳೆಯ, ಇನ್ನೂ ಗಟ್ಟಿಮುಟ್ಟಾಗಿರುವ, ಕಲೆಕ್ಟರ್ಸ್‌ ಆಫೀಸ್‌ ಎಂದೇ ಕರೆಯಲ್ಪಡುತ್ತಿದ್ದ ಮಂಗಳೂರಿನ ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭವಾಗಿರುವ ‘ಪಾರಂಪರಿಕ ಉತ್ಸವ’ಕ್ಕೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರ ಬೇಡಿಕೆ ಹಿನ್ನೆಲೆಯಲ್ಲಿ ಈ ಉತ್ಸವವನ್ನು ಡಿ.2ರವರೆಗೆ ವಿಸ್ತರಿಸಲಾಗಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲೇ ಇರುವ ಈ ಹಳೆಯ ಕಟ್ಟಡ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿತ್ತು. ಸ್ವಾತಂತ್ರ್ಯಾನಂತರ ಹೊಸ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣವಾಗುವವರೆಗೂ ಈ ಕಟ್ಟಡದಲ್ಲೇ ಜಿಲ್ಲಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಈ ಹಳೆಯ ಪಾರಂಪರಿಕ ಕಟ್ಟಡವನ್ನು ಖುದ್ದು ಸುತ್ತಾಡಿ ವೀಕ್ಷಿಸುವ ಅಪರೂಪದ ಅವಕಾಶ ನಾಗರಿಕರಿಗೆ ಲಭಿಸಿದೆ. ಇನ್ನೂ ಎರಡು ದಿನಗಳ ಕಾಲ ಈ ಕಟ್ಟಡದ ಅಪೂರ್ವ ಸೌಂದರ್ಯ ಕಣ್ತುಂಬಿಕೊಳ್ಳಬಹುದು.

ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಈ ಹಳೆ ಕಟ್ಟಡವನ್ನೇ ಕೇಂದ್ರೀಕರಿಸಿ ಇದೇ ಮೊದಲ ಬಾರಿಗೆ ಪಾರಂಪರಿಕ ಉತ್ಸವ ಆಯೋಜಿಸಲಾಗಿದೆ. ಇದರಲ್ಲಿ ಕರಾವಳಿಯ ಸೊಗಡು, ಕಲೆ, ಸಂಸ್ಕೃತಿ, ಇತಿಹಾಸವನ್ನು ಬಿಂಬಿಸುವ ಕಲಾಕೃತಿಗಳು, ಅಪರೂಪದ ಫೋಟೊಗಳು ಇತ್ಯಾದಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

ಈ ಅಪರೂಪದ ಕಟ್ಟಡವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿಸಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಪ್ರಥಮ. ಭಾರೀ ಗಾತ್ರದ ಗೋಡೆಗಳು, ಅಪರೂಪದ ವಿನ್ಯಾಸದ ಒಳಾಂಗಣ.. ಮೇಲಂತಸ್ತಿನ ಹಾಸು ಸಂಪೂರ್ಣ ಮರದಿಂದಲೇ ನಿರ್ಮಾಣವಾಗಿದೆ. ಅಲ್ಲದೆ, ಭಾರೀ ಗಾತ್ರದ ಮರದ ಕಂಬಗಳು, ಮರದ ಹಲಗೆಯ ಮೇಲೆ ಹಂಚಿನ ಛಾವಣಿ ಶತಮಾನಗಳು ಕಳೆದರೂ ಇನ್ನೂ ಗಟ್ಟಿಮುಟ್ಟಾಗಿಯೇ ಇದ್ದು, ಗತಕಾಲದ ವೈಭವಕ್ಕೆ ಸಾಕ್ಷಿಯಾಗಿದೆ.