ಬಡತನ, ಅಜ್ಞಾನ ಅಳಿಸಲು ಜ್ಞಾನದೀಪ ಹಚ್ಚಿದ ಬೆತ್ತದಜ್ಜ

| Published : Aug 21 2025, 01:00 AM IST

ಬಡತನ, ಅಜ್ಞಾನ ಅಳಿಸಲು ಜ್ಞಾನದೀಪ ಹಚ್ಚಿದ ಬೆತ್ತದಜ್ಜ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗೈಕ್ಯ ಶ್ರೀ ಗುರು ಅನ್ನದಾನ ಮಹಾಶಿವಯೋಗಿಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಸಾದ ನಿಲಯಗಳನ್ನು ಸ್ಥಾಪಿಸಿದ್ದರು. ಸ್ವಾತಂತ್ರ್ಯ ಬಳಿಕ ರಾಜ್ಯದಲ್ಲಿ ಶ್ರೀಮಠದ 12 ಪ್ರಸಾದ ನಿಲಯಗಳಿವೆ. 60 ದಶಕದಲ್ಲಿ ಸಾವಿರಾರು ಮಕ್ಕಳು ಉಚಿತ ಶಿಕ್ಷಣದ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಹಾಲಕೆರೆ ಶ್ರೀ ಅನ್ನದಾನೀಶ್ವರ ಸಂಸ್ಥಾನ ಮಠದ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ನುಡಿದಿದ್ದಾರೆ.

- ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಆಶೀರ್ವಚನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಲಿಂಗೈಕ್ಯ ಶ್ರೀ ಗುರು ಅನ್ನದಾನ ಮಹಾಶಿವಯೋಗಿಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಸಾದ ನಿಲಯಗಳನ್ನು ಸ್ಥಾಪಿಸಿದ್ದರು. ಸ್ವಾತಂತ್ರ್ಯ ಬಳಿಕ ರಾಜ್ಯದಲ್ಲಿ ಶ್ರೀಮಠದ 12 ಪ್ರಸಾದ ನಿಲಯಗಳಿವೆ. 60 ದಶಕದಲ್ಲಿ ಸಾವಿರಾರು ಮಕ್ಕಳು ಉಚಿತ ಶಿಕ್ಷಣದ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಹಾಲಕೆರೆ ಶ್ರೀ ಅನ್ನದಾನೀಶ್ವರ ಸಂಸ್ಥಾನ ಮಠದ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ನುಡಿದರು.

ಇಲ್ಲಿನ ದೇವರಾಜ ಅರಸು ಬಡಾವಣೆಯ ಅನ್ನದಾನೀಶ್ವರ ಶಾಖಾಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಲಿಂ. ಶ್ರೀಗುರು ಅನ್ನದಾನ ಮಹಾ ಶಿವಯೋಗಿಗಳ 49ನೇ ಹಾಗೂ ಲಿಂ. ಡಾ.ಅಭಿನವ ಅನ್ನದಾನ ಸ್ವಾಮಿಗಳ 4ನೇ ವರ್ಷದ ಪುಣ್ಯಾರಾಧನೆ, 283ನೇ ಶಿವಾನುಭವ ಸಂಪದ 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿದ್ದ ಬಡತನ, ದಾರಿದ್ರ್ಯ ಅಜ್ಞಾನ ಓಡಿಸಲು ಬೆತ್ತದಜ್ಜ ಅವರು ಜ್ಞಾನದೀಪ ಹಚ್ಚಿದರು. ಸರ್ಕಾರದ ಅನುದಾನ ಇಲ್ಲದ ಕಾಲದಲ್ಲೇ ಶಾಲಾ- ಕಾಲೇಜುಗಳನ್ನು ನಿರ್ವಹಿಸಿದರು. ಯಾರಲ್ಲೂ ಭಿಕ್ಷೆ ಬೇಡಲಿಲ್ಲ. ಅವರು ಓಡಾಡಿದರೂ ಭಕ್ತರಿಂದ ಸಾವಿರಾರು ಚೀಲ ಅಕ್ಕಿ, ಜೋಳ ಬರುತ್ತಿದ್ದವು ಎಂದರು.

ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿ, ಮುಂದಿನ ವರ್ಷದಲ್ಲಿ ದಾವಣಗೆರೆಯಲ್ಲಿ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನ್ನದಾನ ಶಿವಯೋಗಿಗಳ ಕಲ್ಯಾಣ ಮಂಟಪ ಉದ್ಘಾಟನೆ ಆಗಲಿದೆ ಎಂದರು.

ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಅಥಣಿ ಎಸ್. ವೀರಣ್ಣ ಮಾತನಾಡಿ, ಹಿರಿಯ ಶ್ರೀಗಳು ನಾಟಕ ಕಂಪನಿ ಕಾರ್ಯಕ್ರಮ ಉದ್ಘಾಟನೆಗೆ ಬಂದಾಗ ದಾವಣಗೆರೆಗೆ ಶಾಖಾಮಠದ ಯೋಗ ಒಲಿಯಿತು. ಇಲ್ಲಿ ಉದ್ದೇಶಿತ ಕಲ್ಯಾಣ ಮಂಟಪಕ್ಕೆ ಇನ್ನೂ ₹2 ಕೋಟಿ ಅಗತ್ಯವಿದೆ. ಎಸ್‌.ಎಸ್‌., ಎಸ್ಸೆಸ್ಸೆಂ ಅವರ ಬಳಿ ಅನುದಾನ, ದೇಣಿಗೆ ಪಡೆಯುವ ಪ್ರಯತ್ನ ನಡೆಸಲಾಗುವುದು ಎಂದರು.

ಕಲ್ಲೂರಿನ ಉಪನ್ಯಾಸಕ ಮಹಾಂತೇಶ ಶಾಸ್ತ್ರಿ ಉಪನ್ಯಾಸ ನೀಡಿದರು. ಹಿರಿಯ ಪತ್ರಕರ್ತ ಎಂ.ಬಿ. ನವೀನ್, ದೂಡಾ ಸದಸ್ಯೆ ವಾಣಿ ಬಕ್ಕೇಶ್, ಬಕ್ಕೇಶ್, ಎಸ್.ಜಿ.ಉಳುವಯ್ಯ, ನಾಗೂರು ಆದಪ್ಪ ಹುಚನೂರು, ಎಸ್.ನಾಗರಾಜ ಮಳಗಿ ಯರಗಲ್ ಹಾಗೂ ಎ.ವಿ. ರಮೇಶ್ ಅವರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನಿಲ್ ವೀರಪ್ಪ ಭಾವಿ, ಎನ್.ಅಡಿವೆಪ್ಪ, ಅಮರಯ್ಯ, ಎನ್.ಎ.ಗಿರೀಶ್, ಎಸ್.ಓಂಕಾರಪ್ಪ ಇದ್ದರು.

- - -

(ಕೋಟ್‌) ಮುಂದಿನ 2 ವರ್ಷದಲ್ಲಿ ಲಿಂ. ಅನ್ನದಾನ ಶಿವಯೋಗಿಗಳ 50ನೇ ಪುಣ್ಯಾರಾಧನೆ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ. ಒಂದೆಡೆ ದೊಡ್ಡ ಕಾರ್ಯಕ್ರಮ ಮಾಡದೇ ಬಾದಾಮಿ, ಕೂಡಲಸಂಗಮ ಹಾಗೂ ಹಾಲಕೆರೆ ಭಾಗದ 150 ಹಳ್ಳಿಗಳಲ್ಲಿ ಸಂಚಾರಿ ಬಸವ ಪುರಾಣ ಆಯೋಜಿಸಲಾಗುವುದು.

- ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ, ಶ್ರೀ ಅನ್ನದಾನೀಶ್ವರ ಮಠ

- - --18ಕೆಡಿವಿಜಿ31:

ದಾವಣಗೆರೆಯಲ್ಲಿ ಲಿಂ. ಶ್ರೀ ಗುರು ಅನ್ನದಾನ ಮಹಾ ಶಿವಯೋಗಿಗಳ, ಲಿಂ. ಡಾ. ಅಭಿನವ ಅನ್ನದಾನ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು. ವಿವಿಧ ಗಣ್ಯರು ಇದ್ದರು.