ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಸರ್ವಜ್ಞರು ತಮ್ಮ ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಸಾರಿದರು ಎಂದು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು.ಅವರು ಗುರುವಾರ ನಗರದ ಕಡಿಯಾಳಿಯ ಯು.ಕಮಲಬಾಯಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟ ಉಡುಪಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ವಜ್ಞರ ವಚನಗಳು ಅರ್ಥಪೂರ್ಣವಾಗಿದ್ದು, ಪ್ರತಿಯೊಬ್ಬರು ಅವರ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು, ಸಮಾಜದಲ್ಲಿನ ಮೂಢನಂಬಿಕೆ, ಜಾತಿ ವ್ಯವಸ್ಥೆ, ಡಾಂಬಿಕ ಭಕ್ತಿಯನ್ನು ಅವರು ಖಂಡಿಸಿದರು.ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ದೇಶದ ಏಳಿಗೆಯಲ್ಲಿ ದಾರ್ಶನಿಕರು, ಸಾಹಿತಿಗಳು ಹಾಗೂ ಕವಿಗಳ ಸೇವೆ ಅಪಾರವಾಗಿದ್ದು, ಅವರ ಸಾಧನೆಗಳನ್ನು ತಿಳಿದುಕೊಂಡು ಅವರ ಧ್ಯೇಯೋದ್ದೇಶಗಳನ್ನು ನಮ್ಮ ಜೀವನದಲ್ಲಿ ಅನುಸರಿಸಬೇಕು. ಸಮಾಜಕ್ಕೆ ನಾಡಿಗೆ ಉತ್ತಮ ಕೊಡುಗೆ ನೀಡುವಲ್ಲಿ ಅವರು ನೀಡುವ ಪ್ರೇರಣೆ ನಮ್ಮ ಬದುಕಿನ ಸಾಧನೆಗೆ ಹೊಸ ಮುನ್ನುಡಿಯಾಗಲಿ ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶೇಖರ ಕುಲಾಲ್ ಉಪನ್ಯಾಸ ನೀಡಿ, ತ್ರಿಪದಿಯ ಬ್ರಹ್ಮ ಎಂದು ಕರೆಯಲ್ಪಡುವ ಸರ್ವಜ್ಙರು, ತ್ರಿಪದಿಗಳ ಮೂಲಕ ಬದುಕಿನ ಮೌಲ್ಯಗಳನ್ನು ಸರಳವಾಗಿ ಜನರಿಗೆ ಬೋಧಿಸಿದರು. ಸಮಾಜದಲ್ಲಿನ ಜಾತಿ ಪದ್ಧತಿಯನ್ನು ವಿರೋಧಿಸಿದ ಅವರು, ತಮ್ಮ ವಚನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದರ ಜೊತೆಗೆ ದಾನಗಳ ಮಹತ್ವವನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಶ್ರಮಿಸಿದರು ಎಂದು ಹೇಳಿದರು.ಕುಲಾಲ ಸಂಘ ಅಧ್ಯಕ್ಷ ಕಾಳು ಕುಲಾಲ್, ಕವಿ ಸರ್ವಜ್ಙರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಗಣಪತಿ, ಸರ್ಕಾರದ ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ತೇಜಸ್ ವಿ. ಬಂಗೇರ ನಿರೂಪಿಸಿದರು. ಕಡಿಯಾಳಿ ಯು. ಕಮಲಬಾಯಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸುದರ್ಶನ್ ನಾಯಕ್ ವಂದಿಸಿದರು.