ತ್ರಿಪದಿಗಳಲ್ಲಿ ಸತ್ಯ ನುಡಿ ಸಾರಿದ ಕವಿ ಸರ್ವಜ್ಞ: ಸೋಮಲಿಂಗ ಗೆಣ್ಣೂರ

| Published : Feb 21 2025, 12:49 AM IST

ತ್ರಿಪದಿಗಳಲ್ಲಿ ಸತ್ಯ ನುಡಿ ಸಾರಿದ ಕವಿ ಸರ್ವಜ್ಞ: ಸೋಮಲಿಂಗ ಗೆಣ್ಣೂರ
Share this Article
  • FB
  • TW
  • Linkdin
  • Email

ಸಾರಾಂಶ

ನೇರ-ನಿಷ್ಠುರ, ಆದರ್ಶ ವಿಚಾರಗಳನ್ನು ಹಾಗೂ ಸತ್ಯ ನುಡಿಗಳನ್ನು ತ್ರಿಪದಿಗಳ ಮೂಲಕ ಸಾರಿ, ಜನಮಾನಸದಲ್ಲಿ ನೆಲೆನಿಂತ ಕವಿ ಸರ್ವಜ್ಞ

ಕನ್ನಡಪ್ರಭ ವಾರ್ತೆ ವಿಜಯಪುರ

ನೇರ-ನಿಷ್ಠುರ, ಆದರ್ಶ ವಿಚಾರಗಳನ್ನು ಹಾಗೂ ಸತ್ಯ ನುಡಿಗಳನ್ನು ತ್ರಿಪದಿಗಳ ಮೂಲಕ ಸಾರಿ, ಜನಮಾನಸದಲ್ಲಿ ನೆಲೆನಿಂತ ಕವಿ ಸರ್ವಜ್ಞ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂಡದ್ದನ್ನು, ಅನುಭವಿಸಿದ್ದನ್ನು ಕೇವಲ ಮೂರು ಸಾಲುಗಳಲ್ಲಿ ಸರಳ ಹಾಗೂ ಸುಂದರವಾಗಿ ಒಳಿತು ಕೆಡಕುಗಳ ಸಂದೇಶವನ್ನು ತ್ರಿಪದಿಗಳಲ್ಲಿ ಸರ್ವಜ್ಞರು ಈ ಲೋಕಕ್ಕೆ ಸಾರಿದರು. ಸಕಲ ಸಂಪತ್ತಿನಲ್ಲಿ ವಿದ್ಯೆಯೇ ಶ್ರೇಷ್ಠ ಸಂಪತ್ತು. ವಿದ್ಯೆ ಎಂಬ ಸಂಪತ್ತನ್ನು ದಾರ್ಶನಿಕರ, ವಚನಕಾರರ ಸಾರ ಇಂದಿನ ಯುವ ಜನಾಂಗ ಅರಿತುಕೊಳ್ಳಬೇಕು. ಇಂತಹ ಸತ್ಪುರುಷರು ಸಾರಿದ ಸಂದೇಶ ಅವರ ನುಡಿಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳಿಸಬಹುದೆಂದರು.

ಸರ್ವಜ್ಞ ತಮ್ಮ ತ್ರಿಪದಿಗಳ ಮೂಲಕ ಅತ್ಯಂತ ಸರಳವಾಗಿ ಜನರಾಡುವ ಭಾಷೆಯಲ್ಲಿ ಕಟ್ಟಿಕೊಟ್ಟು ಜನಮಾನಸದಲ್ಲಿ ಮನೆ-ಮನಗಳಲ್ಲಿ ಜನಜನಿತರಾಗಿದ್ದಾರೆ. ತ್ರಿಪದಿಗಳಲ್ಲಿ ತತ್ವಾದರ್ಶದ ಕಾಣಬಹುದಾಗಿದೆ. ಅವರ ವಚನಗಳ ಸಾರವನ್ನು ಅರಿತುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಸರ್ವಜ್ಞರು ಕೃಷಿ, ಕುಟುಂಬ, ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಮೂರೇ ಸಾಲಿನಲ್ಲಿ ಸಂದೇಶ ಕೊಡುವ ತ್ರಿಪದಿಗಳನ್ನು ರಚಿಸಿ ಈ ನಾಡಿಗೆ ಮಹತ್ವಪೂರ್ಣವಾದ ಕೊಡುಗೆ ಕೊಟ್ಟಿದ್ದಾರೆ. ತ್ರಿಪದಿಗಳು ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಸರ್ವರೊಳಗೊಂದು ನುಡಿಯ ಕಲಿತು ವಿದ್ಯೆಯ ಪರ್ವತವೇ ಆದವರು ಸರ್ವಜ್ಞ ಎಂದು ಹೇಳಿದರು.

ಉಪನ್ಯಾಸಕರಾದ ಪೂಜಾ ಕೆ.ಎಸ್. ಮಾತನಾಡಿ, ಸರ್ವಜ್ಞರ ತ್ರಿಪದಿಗಳು ಕೇವಲ ಒಂದೇ ಕ್ಷೇತ್ರಕ್ಕೆ ಸಿಮೀತವಾಗಿರದೇ ಸಮಾಜದ ಎಲ್ಲ ಬಗೆಯ ತೊಡಕುಗಳನ್ನು ದಿನ ಬಳಕೆ ನುಡಿಗಳ ಮೂಲಕ ಜನರಿಗೆ ತಿಳಿಸಿದ್ದಾರೆ. ಮೌಢ್ಯತೆ ತೊರೆದು, ಕಾಯಕ ಚಿತ್ತರಾಗಿ ಕರ್ಮ ಮಾಡಲು ಸರ್ವಜ್ಞ ತ್ರಿಪದಿ ಮೂಲಕ ತಿಳಿಸಿದ್ದಾರೆ. ಮಾತಿನಿಂದಾಗುವ ಕೆಡಕುಗಳ ಸಂದೇಶವನ್ನು ಸಂತ ಕವಿ ಸರ್ವಜ್ಞರು ಜಗಕ್ಕೆ ಸಾರಿದ ಅವರು, ವಿಜ್ಞಾನ, ತಂತ್ರಜ್ಞಾನದ ಯುಗದಲ್ಲೂ ಕೃಷಿಯ ಬಗ್ಗೆ ಸರ್ವಜ್ಞರ ತ್ರಿಪದಿಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಹಾಗೂ ನಿವೃತ್ತ ಡಿವೈಎಸ್‌ಪಿ ಸೋಮಲಿಂಗ ಕುಂಬಾರ ಮಾತನಾಡಿದರು. ತಹಸೀಲ್ದಾರ್‌ ಪ್ರಶಾಂತ ಚನಗೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೆರವಣಿಗೆಗೆ ಚಾಲನೆ:

ಸಂತ ಕವಿ ಸರ್ವಜ್ಞರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಅವರು ನಗರದ ಶ್ರೀ ಸಿದ್ದೇಶ್ವರ ದೇಸ್ಥಾನದ ಆವರಣದಲ್ಲಿ ಚಾಲನೆ ನೀಡಿದರು. ಮೆರವಣಿಗೆಯು ಗಾಂಧಿ ವೃತ್ತ, ಡಾ.ಅಂಬೇಡ್ಕರ್‌ ವೃತ್ತ, ಕನಕದಾಸ ವೃತ್ತ ಮಾರ್ಗವಾಗಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರಕ್ಕೆ ತಲುಪಿ ಸಮಾವೇಶಗೊಂಡಿತು.

ಈ ವೇಳೆ ಅಧಿಕಾರಿಗಳಾದ ಎ.ಬಿ.ಅಲ್ಲಾಪುರ, ಸಂತೋಷ ಭೋವಿ, ಸದಾನಂದ ಕುಂಬಾರ, ಅರವಿಂದ ಕುಂಬಾರ, ಮುಖಂಡರಾದ ದೇವೇಂದ್ರ ಮೀರೆಕರ, ಗಿರೀಶ ಕುಲಕರ್ಣಿ, ಭೀಮರಾಯ ಜಿಗಜಿಣಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.