ಮರಳು ದೋಚುವವರ ವಿರುದ್ಧ ನಿರಂತರ ಯುದ್ಧ

| Published : Apr 18 2025, 12:46 AM IST

ಸಾರಾಂಶ

ಜಿಲ್ಲೆಯಲ್ಲಿ ಕಗಿಣಾ, ಕಮಲಾವತಿ, ಭೀಮಾ ಸೇರಿದಂತೆ ನದಿ ತೀರದಲ್ಲಿನ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ನಿರಂತರ ಕ್ರಮ ಕೈಗೊಳ್ಳುತ್ತಿದೆ. ಮರಳು ಸಾಗಾಣಿಕೆಯಲ್ಲಿ ಸರ್ಕಾರಕ್ಕೆ ರಾಯಧನ ವಂಚನೆ, ಮರಳು ಕಳವು ಪ್ರಕರಣಗಳನ್ನು ಹಾಕುವ ಮೂಲಕ ಕಳ್ಳರನ್ನು ಬಗ್ಗುಬಡಿಯುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಲ್ಲಿ ಕಗಿಣಾ, ಕಮಲಾವತಿ, ಭೀಮಾ ಸೇರಿದಂತೆ ನದಿ ತೀರದಲ್ಲಿನ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ನಿರಂತರ ಕ್ರಮ ಕೈಗೊಳ್ಳುತ್ತಿದೆ. ಮರಳು ಸಾಗಾಣಿಕೆಯಲ್ಲಿ ಸರ್ಕಾರಕ್ಕೆ ರಾಯಧನ ವಂಚನೆ, ಮರಳು ಕಳವು ಪ್ರಕರಣಗಳನ್ನು ಹಾಕುವ ಮೂಲಕ ಕಳ್ಳರನ್ನು ಬಗ್ಗುಬಡಿಯುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮರಳು ಅಕ್ರಮದಲ್ಲಿ ಪೊಲೀಸ್‌ ಇಲಾಖೆಗೆ ನೇರವಾಗಿ ಕೇಸ್‌ ಹಾಕಲು ಬರೋದಿಲ್ಲವಾದರೂ ನಾವು ಮರಳು ಕಳವು ಹಾಗೂ ರಾಯಧನ ವಂಚನೆಯನ್ನು ಗಮನದಲ್ಲಿಟ್ಟುಕೊಂಡು ಕೇಸ್‌ ಹಾಕುತ್ತಿದ್ದೇವೆ. ಈ ವಿಚಾರಗಳಲ್ಲಿ ನಾವು ಕೇಸ್‌ ಹಾಕಬುಹುದೇ ವಿನಹಃ ಗಣಿಗಾರಿಕೆ, ತೂಕದ ವಿಚಾರದಲ್ಲಿ ನಮ್ಮ ನಿಯಂತ್ರಣದ ಪಾತ್ರವೇನೂ ಇಲ್ಲವೆಂದು ಸ್ಪಷ್ಟಪಡಿಸಿದರು.

ಆದಾಗ್ಯೂ ಅತಿಯಾದ ಬಾರದ ಸರಕು ಸಾಗಾಣೆ ಎಂದು ನಾವು ಪ್ರಕರಣಗಳನ್ನು ಆರ್‌ಟಿಓಗೆ ಒಪ್ಪಿಸುತ್ತೇವೆ. ಇಂತಹ ಅನೇಕ ಪ್ರಕರಣಗಳನ್ನು ಚಿತ್ತಾಪುರ ವ್ಯಾಪ್ತಿಯಿಂದ ಅದಾಗಲೇ ಆರ್‌ಟಿಓಗೆ ಶಿಫಾರಸು ಮಾಡಿದ್ದೇವೆ ಎಂದರು.ಚಿತ್ತಾಪುರದ ಮಾಡಬೂಳ ಠಾಣೆ ವ್ಯಾಪ್ತಿಯೊಂದರಲ್ಲೇ ಈ ವರ್ಷದಲ್ಲಿ ತೂಕ ಮೀರಿ ಮರಳು ಸಾಗಾಟ ಮಾಡಿರುವ 14 ಪ್ರಕರಣ ಇದುವರೆಗೂ ದಾಖಲಾಗಿವೆ. ಇದಲ್ಲದೆ ಚಿಂಚೋಳಿ, ಅಫಜಲ್ಪುರ ಸೇರಿದಂತೆ ಹಲವೆಡೆ ಇಂತಹ ಪ್ರಕರಣ ದಾಖಲಾಗಿವೆ. ಇವನ್ನೆಲ್ಲ ನಾವು ಆರ್‌ಟಿಓಗೆ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಿದ್ದೇವೆಂದು ಎಸ್ಪಿಯವರು ಹೇಳಿದರು.

ಮರಳು ಗಾರಕೆ ಅಕ್ರಮ ತಡೆಯುವಲ್ಲಿ ನಮ್ಮ ಇಲಾಖೆ ಸದಾಕಾಲ ನಿಗಾ ಇಡುತ್ತಿದೆ. ಇಲ್ಲಿ ಯಾರಿಗೂ ಮುಲಾಜಿನಿಂದ ಬಿಟ್ಟಂತಹ ಉದಾಹರಮೆ ಇಲ್ಲ. ಜನ ತಮ್ಮ ಹೊಲಗಳಲ್ಲಿ ಅಕ್ರಮ ಮರಳುಗಾರಿಕೆ ಸಾಗಿದೆ ಎಂಬ ದೂರಿದ್ದಲ್ಲಿ ಗಣಿ ಇಲಾಖೆ ಮೂಲಕ ಸರ್ವೇಗೆ ಕ್ರಮಕ್ಕೆ ಮುಂದಾಗಲಿ. ಅಲ್ಲಿಂದ ವರದಿ ಬಂದು ಅಕ್ರಮ ನಡೆದಿದ್ದೇ ಆದಲ್ಲಿ ಪೊಲೀಸ್‌ ಇಲಾಖೆ ಅಗತ್ಯ ಕಾನೂನು ಕ್ರಮ ಜರುಗಿಸಲು ಸದಾಕಾಲ ಸಿದ್ಧವಿದೆ ಎಂದು ಹೇಳಿದರು.

ಇದುವರೆಗೂ ಎಷ್ಟು ಪ್ರಕರಣ ದಾಖಲು: ಚಿತ್ತಾಪುರ, ಮಾಡಬೂಳ, ಶಹಾಬಾದ್‌ ಹಾಗೂ ವಾಡಿ ವ್ಯಾಪ್ತಿಯ ಶಹಾಬಾದ್‌ ಎಸ್‌ಡಿಪಿಓ ವ್ಯಾಪ್ತಿಯಲ್ಲಿ ಕಲೆದ 3 ವರ್ಷಗಳಲ್ಲಿ 124 ಪ್ರಕರಣ, ಚಿಂಚೋಳಿ, ಕುರುಕುಂಟಾ, ಮಳಖೇಡ, ಮಿರಿಯಾಣ, ಮುಧೋಳ, ರಟಕಲ್‌, ಸೇಡಂ, ಸುಲೇಪೇಟ್ ವ್ಯಾಪ್ತಿಯ ಚಿಂಚೋಳಿ ಎಸ್‌ಡಿಪಿಓ ವ್ಯಾಪ್ತಿಯಲ್ಲಿ 69, ಜೇವರಗಿ, ಕಮಲಾಪುರ, ಮಹಾಗಾಂವ್‌, ನಂಲೋಗಿ ಹಾಗೂ ಯಡ್ರಾಮಿ ಸೇರಿದಂತಿರುವ ಗ್ರಾಮೀಣ ಎಸ್‌ಡಿಪಿಓ ವ್ಯಾಪ್ತಿಯಲ್ಲಿ 45, ಅಫಜಲ್ಪುರ, ಆಳಂದ, ದೇವಲ್‌ ಗಾಣಗಾಪುರ ಸೇರಿದಂತಿರುವ ಆಳಂದ ಎಸ್‌ಡಿಪಿಓ ವ್ಯಾಪ್ತಿಯಲ್ಲಿ ಅತೀ ಹೆಚ್ಚು 398 ಪ್ರಕರಣ ದಾಖಲಾಗಿವೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ್‌, ಸಿಪಿಐಗಳಾದ ಜಗದೇವಪ್ಪ ಪಾಳಾ, ಚಂದ್ರಶೇಖರ ತಿಗಡಿ ಸೇರಿದಂತೆ ಹಲವು ಪೊಲೀಸ್‌ ಇನ್ಸಪೆಕ್ಟರ್‌ಗಳು ಹಾಜರಿದ್ದರು.