ರಾಜಕೀಯ ಅಸ್ತಿತ್ವಕ್ಕೆ ಶೋಷಿತ ವರ್ಗ ಒಗ್ಗಟ್ಟಾಗಬೇಕು

| Published : Oct 16 2024, 12:40 AM IST

ಸಾರಾಂಶ

ರಾಜಕೀಯ ಅಸ್ತಿತ್ವ, ಅಧಿಕಾರ ಪಡೆಯಲು ಶೋಷಿತ ವರ್ಗಗಳಾದ ಮುಸಲ್ಮಾನರು, ದಲಿತರು ಸೇರಿದಂತೆ ಇತರೆ ಎಲ್ಲಾ ತಳ ಸಮುದಾಯಗಳು ಸಂಘಟಿತರಾಗಬೇಕು ಎಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ರಾಜಕೀಯ ಅಸ್ತಿತ್ವ, ಅಧಿಕಾರ ಪಡೆಯಲು ಶೋಷಿತ ವರ್ಗಗಳಾದ ಮುಸಲ್ಮಾನರು, ದಲಿತರು ಸೇರಿದಂತೆ ಇತರೆ ಎಲ್ಲಾ ತಳ ಸಮುದಾಯಗಳು ಸಂಘಟಿತರಾಗಬೇಕು ಎಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದರು.

ಪಟ್ಟಣದಲ್ಲಿ ಎಸ್‌ಡಿಪಿಐ ಶಾಖೆ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ತಳ ಸಮುದಾಯ ಒಗ್ಗಟ್ಟಾಗಿ ರಾಜಕೀಯ ಅಸ್ತಿತ್ವ, ಅಧಿಕಾರ ಪಡೆಯುವುದು ಬೇರೆಯವರಿಗೆ ಇಷ್ಟವಿಲ್ಲ. ಯಾವುದೇ ಚಳವಳಿಗಳು ಯಶಸ್ವಿಯಾಗಲು ತ್ಯಾಗ ಬಲಿದಾನ ಆಗಬೇಕಿದೆ ಎಂದರು.

ಈ ದೇಶದ ಸಂವಿಧಾನವನ್ನು ಉಳಿಸಲು, ಸಂವಿಧಾನದ ಯಥಾವತ್ತು ಕಾನೂನು ಜಾರಿಗೊಳಿಸುವುದಕ್ಕೆ, ಎಲ್ಲರ ಸಮಾನತೆ ಕಾಪಾಡಲು ನಮ್ಮ ಪಕ್ಷ ಸದಾ ಸಿದ್ಧವಿದೆ. ಈ ಕಚೇರಿ ಉದ್ಘಾಟನೆ ಮೂಲಕ ಹೊಸದುರ್ಗದ ನಮ್ಮ ನಾಯಕರಿಗೆ ಒಂದು ಸಂದೇಶವನ್ನು ಕೊಡುತ್ತೇನೆ. ಅದು ಹಸಿವು ಮುಕ್ತ ಹಾಗೂ ಭಯಮುಕ್ತ ಸಮಾಜವನ್ನು ಕಟ್ಟುವುದು ನಮ್ಮ ಗುರಿಯಾಗಿದೆ. ಸಮ ಸಮಾಜದ ನಿರ್ಮಾಣ, ಬಾಬಾ ಸಾಹೇಬರ ಕನಸನ್ನು ನನಸು ಮಾಡುವುದು ನಮ್ಮ ಪಕ್ಷದ ಸಿದ್ಧಾಂತ ಎಂದು ತಿಳಿಸಿದರು.ಎಸ್‌ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಮಾತನಾಡಿ, ಈ ಕಚೇರಿ ಎಲ್ಲ ನೊಂದವರ ಕಷ್ಟಗಳ ನಿರ್ವಹಿಸುವ ಕಚೇರಿಯಾಗಿದೆ. ಮಹಮದ್ ಪ್ರವಾದಿ ದೇಶದ ಶಾಂತಿ ಬಯಸುವ ವ್ಯಕ್ತಿಯಾಗಿದ್ದರು. ಬಸವಣ್ಣ ಎಲ್ಲರ ಸಮಾನತೆಯನ್ನು ಬಯಸಿದ್ದರು. ಎಸ್ ಡಿ ಪಿ ಮಾಡುತ್ತಿರುವ ಕಾರ್ಯ ಸಮಾಜದ ಆತ್ಮ ಸಂತೋಷಕ್ಕಾಗಿ ಎಂದರು.

ನಾವು ಯಾರಿಗೂ ಹೆದರಿಕೊಂಡು ಬದುಕುವ ಅವಶ್ಯಕತೆ ಇಲ್ಲ. ನಮಗೆ ಸಂವಿಧಾನವಿದೆ. ಸಂವಿಧಾನಕ್ಕೆ ನಾವು ಗೌರವ ಕೊಡುತ್ತೇವೆ. ಕಾನೂನು ನಮ್ಮನ್ನು ತಡೆಯುವುದಕ್ಕೆ ಅಲ್ಲ ನಮ್ಮನ್ನು ರಕ್ಷಣೆ ಮಾಡುವುದಕ್ಕೆ ಎಂದು ನುಡಿದರು.

ಈ ವೇಳೆ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಬಾಳೇಕಾಯಿ ಶ್ರೀನಿವಾಸ್‌ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.