ಸಾರಾಂಶ
ಹಾನಗಲ್ಲ: ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ ಹಾನಗಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ೧೦ ಸಾವಿರ ಮತಗಳು ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಬಿದ್ದಿದ್ದು, ಎಲ್ಲಿ ಎಡವಿದ್ದೇವೆ ಎನ್ನುವುದನ್ನು ಅರಿತು, ತಪ್ಪು ತಿದ್ದಿಕೊಂಡು ಬರುವ ಜಿಪಂ, ತಾಪಂ ಚುನಾವಣೆ ಹೊತ್ತಿಗೆ ಮತ್ತೆ ಪಕ್ಷದ ಶಕ್ತಿ, ಸಾಮರ್ಥ್ಯ ನಿರೂಪಿಸಲು ಮುಖಂಡರು, ಕಾರ್ಯಕರ್ತರ ಜೊತೆಗೂಡಿ ಶ್ರಮಿಸುವುದಾಗಿ ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಮಂಗಳವಾರ ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ವಾರ್ಷಿಕ ಕನಿಷ್ಠ ೪೦ ಸಾವಿರ ರು.ಗಳ ಆರ್ಥಿಕ ಶಕ್ತಿ ತುಂಬಿ, ಜನರ ಸಂಕಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ ೧೫ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ೯ ಸ್ಥಾನಗಳಲ್ಲಷ್ಟೇ ಗೆಲುವು ಸಾಧ್ಯವಾಗಿದೆ. ಭಾರಿ ಜಿದ್ದಾಜಿದ್ದಿಯ ಕ್ಷೇತ್ರವಾಗಿದ್ದ ಹಾವೇರಿ-ಗದಗ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಗೆಲುವಿಗೆ ಕಳೆದ ಎರಡು ತಿಂಗಳಿಂದ ಎಲ್ಲ ಮುಖಂಡರು, ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಿ, ಹುಮ್ಮಸ್ಸಿನಿಂದ ಶ್ರಮ ವಹಿಸಿದ್ದರು. ಆದರೂ ಕೂಡ ಸ್ವಲ್ಪ ಮತಗಳ ಅಂತರದಿಂದ ಸೋಲೊಪ್ಪಿಕೊಳ್ಳಬೇಕಾಯಿತು. ಆತ್ಮಾವಲೋಕನ ಮಾಡಿಕೊಂಡು ಮತ್ತೆ ಸಂಘಟನೆ ಗಟ್ಟಿಗೊಳಿಸುವಲ್ಲಿ ನಿರತವಾಗುವುದಾಗಿ ಶ್ರೀನಿವಾಸ ಮಾನೆ ಹೇಳಿದರು.ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿದ್ದ ಬಿಜೆಪಿಯೂ ಚುನಾವಣೆಯಲ್ಲಿ ಮುಗ್ಗರಿಸಿದ್ದು, ಕನಿಷ್ಠ ೧೦೦ ಸ್ಥಾನಗಳಲ್ಲಿ ಸೋತಿದೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಅನೇಕ ಪಕ್ಷಗಳ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದೆ. ೧೦ ವರ್ಷಗಳ ಆಡಳಿತ ಬರೀ ಟ್ರೇಲರ್ ಎಂದು ಹೇಳಿದ್ದ ಬಿಜೆಪಿ ಇನ್ನಾದರೂ ಅಭಿವೃದ್ಧಿಗೆ ಗಮನ ಹರಿಸಲಿ. ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ಕೊಲೆ ಪ್ರಕರಣಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದನ್ನು ನಿಲ್ಲಿಸಿ, ಕಠಿಣ ಕಾನೂನು ರೂಪಿಸಲಿ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ರಾಜ್ಯದ ಸಂಸದರ ಆದಿಯಾಗಿ ಎಲ್ಲ ಸಂಸದರೂ ಧ್ವನಿ ಎತ್ತಲಿ ಎಂದು ಒತ್ತಾಯಿಸಿದ ಶ್ರೀನಿವಾಸ ಮಾನೆ ಅವರು ರಾಹುಲ್ ಗಾಂಧಿ ನಾಯಕತ್ವದಲ್ಲಿ ಇಂಡಿಯಾ ಒಕ್ಕೂಟ ಉತ್ತಮ ಸಾಧನೆ ತೋರಿದೆ. ಕೇವಲ ೪೦-೫೦ ಸ್ಥಾನಗಳಲ್ಲಿ ಸರ್ಕಾರ ರಚಿಸುವ ಅವಕಾಶ ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.ಮನೆಗಳಿಗೆ ಮಾಲಿಕತ್ವ, ಅಭಿವೃದ್ಧಿಗೆ ಅನುದಾನ:ತಾಲೂಕಿನಲ್ಲಿ ೧೩,೬೦೦ ಕುಟುಂಬಗಳಿಗೆ ಮನೆಗಳ ಮಾಲಿಕತ್ವ ಕೊಡುವ ಪ್ರಕ್ರಿಯೆ ವೇಗವಾಗಿ ನಡೆದಿದ್ದು, ಒಂದು ವರ್ಷದ ಒಳಗೆ ಈ ಕಾರ್ಯ ಮುಗಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ಶಾಸಕ ಮಾನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯಿಂದ ತಾಲೂಕಿನ ಒಟ್ಟು ೪೩ ರಸ್ತೆಗಳ ನಿರ್ಮಾಣ ಮತ್ತು ಸುಧಾರಣೆಗೆ ೧೫ ಕೋಟಿ, ಲೋಕೋಪಯೋಗಿ ಇಲಾಖೆಯಿಂದ ೫ ಕಾಮಗಾರಿಗಳಿಗೆ ೧೦ ಕೋಟಿ ಅನುದಾನ ಬಿಡುಗಡೆಯಾಗಿದೆ. ಅಲ್ಪಸಂಖ್ಯಾತರ ಕಾಲೋನಿಗಳ ಸುಧಾರಣೆಯ ೧೩ ಕಾಮಗಾರಿಗಳಿಗೆ ೫ ಕೋಟಿ, ೬ ಗ್ರಾಮಗಳಿಗೆ ನೀರು ಪೂರೈಸುವ ೨೦ ಕೋಟಿ ವೆಚ್ಚದ ಕೂಡಲ ಬಹುಗ್ರಾಮ ನದಿ ನೀರು ಸರಬರಾಜು ಯೋಜನೆ, ೯ ಗ್ರಾಮಗಳಿಗೆ ನೀರು ಪೂರೈಸುವ ೮.೬೨ ಕೋಟಿ ವೆಚ್ಚದ ಕೂಸನೂರು ಬಹುಗ್ರಾಮ ನದಿ ನೀರು ಸರಬರಾಜು ಯೋಜನೆಗೆ ಅನುಮತಿ ಸಿಕ್ಕಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡ ಯೋಜನೆಯಡಿ ವಿವಿಧ ಇಲಾಖೆಗಳಿಂದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ೩ ಕೋಟಿ ಬಿಡುಗಡೆಯಾಗಿದೆ. ಇವೆಲ್ಲ ಕಾಮಗಾರಿಗಳೂ ಶೀಘ್ರ ಚಾಲನೆ ಪಡೆಯಲಿವೆ. ಬಾಳಂಬೀಡ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆಗಳೂ ಪೂರ್ಣಗೊಂಡಿದ್ದು, ಶೀಘ್ರ ಲೋಕಾರ್ಪಣೆಗೊಳ್ಳಲಿವೆ ಎಂದು ವಿವರಿಸಿದ ಶ್ರೀನಿವಾಸ ಮಾನೆ, ರಾಜ್ಯದಲ್ಲಿ ಇನ್ನೂ ೪ ವರ್ಷ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲಿದ್ದು, ಕೊಟ್ಟ ಮಾತಿನಂತೆ ನಡೆದು ಅಭಿವೃದ್ಧಿ ಕಡೆಗೆ ಗಮನ ನೀಡಲಾಗುವುದು ಎಂದು ಭರವಸೆ ನೀಡಿದರು.