ಅನಾಥವಾದ ಕೊಟ್ಟೂರು ಕೆರೆ

| Published : Apr 19 2025, 12:36 AM IST

ಸಾರಾಂಶ

ಪುರಾತನ ಇತಿಹಾಸ ಹೊಂದಿರುವ ಕೊಟ್ಟೂರಿನ ಕೆರೆ ಇದೀಗ ಸೂಕ್ತ ನಿರ್ವಹಣೆ, ಅಭಿವೃದ್ಧಿ ಕಾಣದೆ ಅಧಿಕಾರಿಗಳ ತೀವ್ರ ನಿರ್ಲಕ್ಷಕ್ಕೆ ಒಳಗಾಗಿ ಅನಾಥವಾಗಿ ಬಣಗುಡುತ್ತಿದೆ.

ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ । ಇತ್ತ ತಲೆ ಹಾಕದ ಜನಪ್ರತಿನಿಧಿಗಳು

ಜಿ. ಸೋಮಶೇಖರ

ಕನ್ನಡಪ್ರಭ ವಾರ್ತೆ ಕೊಟ್ಟೂರು

ಪುರಾತನ ಇತಿಹಾಸ ಹೊಂದಿರುವ ಕೊಟ್ಟೂರಿನ ಕೆರೆ ಇದೀಗ ಸೂಕ್ತ ನಿರ್ವಹಣೆ, ಅಭಿವೃದ್ಧಿ ಕಾಣದೆ ಅಧಿಕಾರಿಗಳ ತೀವ್ರ ನಿರ್ಲಕ್ಷಕ್ಕೆ ಒಳಗಾಗಿ ಅನಾಥವಾಗಿ ಬಣಗುಡುತ್ತಿದೆ. 4 ಸಾವಿರ ಎಕರೆಗೆ ನೀರಾವರಿ ಆಗುವಷ್ಟು ನೀರನ್ನು ತನ್ನ ಒಡಲಲ್ಲಿ ಇರಿಸಿಕೊಳ್ಳುವ ಸಾಮರ್ಥ್ಯ ಈ ಕೆರೆ ಹೊಂದಿದೆ.

1890ರಲ್ಲಿ ಪುನಶ್ಚೇತನಗೊಂಡಿದ್ದು ಬಿಟ್ಟರೆ ಮತ್ತೆ ಅಭಿವೃದ್ಧಿಯನ್ನೇ ಕಂಡಿಲ್ಲ. 852 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ, 1.6 ಕಿ.ಮೀ. ಪ್ರದೇಶದಲ್ಲಿದೆ. ಇದೀಗ ಮಳೆಗಾಲ ಆರಂಭವಾಗುವ ಮುನ್ನ ಕೆರೆಯನ್ನು ಗಿಡ- ಕಂಟಿಗಳಿಂದ ಮುಕ್ತಗೊಳಿಸುವ ವಾರ್ಷಿಕ ಕಾರ್ಯಕ್ರಮವನ್ನು ಸಹ ಸಣ್ಣ ನೀರಾವರಿ ಇಲಾಖೆ ಕಳೆದ ಮೂರು ವರ್ಷಗಳಿಂದ ಮಾಡದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.

ತಾಲೂಕಿನ ಸುತ್ತಮುತ್ತಲ 20 ಹಳ್ಳಿಗಳಿಗೆ ಈ ಕೆರೆ ಆಸರೆಯಾಗಿದೆ. ಅಲ್ಲದೆ 10 ಸಾವಿರ ಬೋರ್ ವೆಲ್ ಗಳಿಗೆ ಅಂತರ್ಜಲ ಪುನಶ್ಚೇತನಗೊಳ್ಳಲು ಈ ಕೆರೆ ಕಾರಣವಾಗಿದೆ. ಇಷ್ಟೆಲ್ಲ ಉಪಯೋಗ ಇದ್ದರೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆಯ ಅಭಿವೃದ್ಧಿಗೊಳಿಸುವ ಯಾವುದೇ ಯೋಜನೆ ಹಾಕಿಕೊಂಡಿಲ್ಲ. ಕೊಟ್ಟೂರು ಕೆರೆಯ ಹೆಸರಿನಲ್ಲಿ 2 ವರ್ಷದ ಹಿಂದೆ ₹2.5 ಕೋಟಿ ಅನುದಾನ ಸಣ್ಣ ನೀರಾವರಿ ಇಲಾಖೆಗೆ ಬಂದಿತ್ತು. ಇಂತಹ ಅನುದಾನವನ್ನು ಬಳಸಿಕೊಂಡು ಕೆರೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡದ ಕಾರಣಕ್ಕಾಗಿ ಬಹುದಿನಗಳವರೆಗೆ ಅನುದಾನ ಇಲಾಖೆಯಲ್ಲಿ ಖಾಲಿ ಇರುವುದನ್ನು ಮನಗಂಡು ಸರ್ಕಾರ ಈ ಅನುದಾನವನ್ನು ಹಿಂದಕ್ಕೆ ಪಡೆದಿತ್ತು.

ಕೆರೆಯ ಸುತ್ತಮುತ್ತ ಪ್ಲಾಸ್ಟಿಕ್ ಕಸದ ರಾಶಿ ಹೇರಳವಾಗಿ ಸಂಗ್ರಹಗೊಂಡಿದ್ದು, ಕೆರೆ ಒಳಗೆ ಕಲುಷಿತ ನೀರು ಸೇರಿಕೊಂಡು ಬರುವುದನ್ನು ತಡೆಹಿಡಿಯುವ ಯಾವುದೇ ಕಾರ್ಯ ಇಲ್ಲವೇ ಇಲ್ಲ. ಕೆರೆಯ ವಾತವಾರಣ ಅಕ್ಷರಶಃ ಸ್ವಚ್ಛತೆ ಮರೀಚಿಕೆಯಾಗಿದೆ. ಮುಂಗಾರು ಮಳೆ ಆರಂಭವಾಗುವ ಪೂರ್ವದಲ್ಲಿ ಕೆರೆಯನ್ನು ಗಿಡ- ಕಂಟಿಗಳಿಂದ ನಿರ್ಮೂಲನೆಗೊಳಿಸುವ ಕಾರ್ಯ ಆರಂಭಿಸಬೇಕಿದೆ. ಆದರೆ ಇಲಾಖೆಯವರು ಇದುವರೆಗೂ ಈ ಕೆರೆಯತ್ತ ಎಡತಾಕಿಲ್ಲ.

ಕೆರೆಯ ಎರಡು ಭಾಗಗಳಲ್ಲಿ ತೂಬುಗಳು ಸಂಪೂರ್ಣ ಹಾಳಾಗಿವೆ. ಅವುಗಳ ದುರಸ್ತಿಯೂ ಮಾಡಿಲ್ಲ. ಇದರಿಂದ ಕೆರೆಯ ಏರಿ ಬಿರುಕು ಬಿಟ್ಟಿದ್ದು ಅದಕ್ಕೆ ಸೂಕ್ತ ಕಲ್ಲು-ಮಣ್ಣು ತುಂಬಿ ಗಟ್ಟಿಗೊಳಿಸುವ ಕೆಲಸ ತುರ್ತು ಮಾಡಬೇಕಿದೆ. ಇಲ್ಲವಾದರೆ ನಮ್ಮೂರ ಕೆರೆಗೆ ಉಳಿಗಾಲವೇ ಇಲ್ಲವೇನು ಎನ್ನುವ ಅನಾಥ ಪ್ರಜ್ಞೆ ಸ್ಥಳೀಯರನ್ನು ಕಾಡುತ್ತಿದೆ.

ಕೆರೆಯಲ್ಲಿ ಆಗಾಗ ದೊಡ್ಡ ಪ್ರಮಾಣದ ನೀರು ಸಂಗ್ರಹಗೊಳ್ಳುತ್ತದೆ. ಇದನ್ನು ಸರ್ಮಪಕವಾಗಿ ಬಳಸಿಕೊಳ್ಳುವ ಕನಿಷ್ಠ ಯೋಜನೆ ಇಲ್ಲವಾಗಿದೆ. ಕೆರೆಯತ್ತ ಹಳೆಯ ಬಟ್ಟೆಗಳನ್ನು ಕೆಲವರು ಎಸೆಯುತ್ತಿದ್ದು, ಒಟ್ಟಾರೆಯಾಗಿ ಕೊಟ್ಟೂರು ಕೆರೆ ಅನಾಥ ಪ್ರಜ್ಞೆಗೆ ಒಳಗಾಗಿದೆ. ಈ ಸಂಬಂಧ ಅಧಿಕಾರಿಗಳನ್ನು ಎಚ್ಚರಿಸಬೇಕಾದ ಜನಪ್ರತಿನಿಧಿಗಳು ಸಹ ಅಷ್ಟಾಗಿ ಇತ್ತ ಗಮನ ಹರಿಸದೆ ಇರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಇಂಬು ಕೊಡುವಂತೆ ಆಗಿದೆ.