ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಕಬಿನಿ ಮತ್ತು ಕೆಆರ್.ಎಸ್. ಜಲಾಶಯಗಳಲ್ಲಿ ನೀರಿನ ಹೊರ ಹರಿವು ಹೆಚ್ಚಾದ ಹಿನ್ನೆಲೆ ಪಟ್ಟಣದಲ್ಲಿ ಹರಿಯುವ ಕಾವೇರಿ, ಕಪಿಲಾ ನದಿಗಳು ಮೈದುಂಬಿ ಹರಿಯುತ್ತಿವೆ.ಪ್ರವಾಹ ಹೆಚ್ಚಾದ ಹಿನ್ನೆಲೆ ಪಟ್ಟಣದಲ್ಲಿರುವ ಕಾವೇರಿ, ಕಪಿಲಾ ಸೇತುವೆಗಳ ಮನಮೋಹಕವಾಗಿ ಕಂಡು ಬರುತ್ತಿದ್ದು, ಎರಡು ನದಿಗಳಲ್ಲೂ ನೀರು ಹೆಚ್ಚಾದ ಹಿನ್ನೆಲೆ ಕೆಲವು ಕಡೆ ಪ್ರವಾಹದ ಭೀತಿ ಎದುರಾಗಿದೆ. ಕಾವೇರಿ -ಕಪಿಲಾ ನದಿಗಳ ಸಂಗಮ ಸ್ಥಳವಾದ ನಡುಹೊಳೆ ಬಸವೇಶ್ವರ ಮೂರ್ತಿ ಸಂಪೂರ್ಣ ಮುಳುಗಡೆಯಾಗಿದ್ದು, ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಬಳಿಯ ಸ್ನಾನಘಟ್ಟ ಬಹುತೇಕ ನೀರಿನಿಂದ ಅವೃತವಾಗಿದೆ. ಹೊಸ ಸೇತುವೆ ಬಳಿ ನಿರ್ಮಿಸಿದ್ದ ತಡೆಗೋಡೆಗಳು ಪ್ರವಾಹದ ನೀರಿನಿಂದ ಮುಚ್ಚಿ ಹೋಗಿದೆ.
ಹಲವೆಡೆ ಗದ್ದೆಗಳಿಗೆ ನೀರುಕಾವೇರಿ, ಕಪಿಲಾ ನದಿಗಳಲ್ಲಿ ನೀರು ಹೆಚ್ಚಾದ ಹಿನ್ನೆಲೆಯಲ್ಲಿ ಸೋಸಲೆ, ಹಳೇ ತಿರುಮಕೂಡಲು ಮತ್ತು ಹುಣಸೂರು ಗ್ರಾಮದ ಕೆಲವು ಜಮೀನುಗಳಿಗೆ ನೀರು ನುಗ್ಗಿದ್ದು, ರೈತರ ಹಾಕಿದ್ದ ಭತ್ತದ ಬಿತ್ತನೆ ಬೀಜ ನಾಶವಾಗಿದೆ. ಪಟ್ಟಣದ ಶ್ರೀನಿವಾಸ್ ಕಲ್ಯಾಣ ಮಂಟಪವನ್ನು ಪ್ರವಾಹದ ನೀರು ಒತ್ತರಿಸಿಕೊಂಡಿದ್ದು, ಮತ್ತಷ್ಟು ನೀರು ಹರಿದು ಬಂದಲ್ಲಿ ಪ್ರಮುಖ ರಸ್ತೆಗಳು ಅವರಿಸುವ ಆತಂಕವಿದೆ.
-------ಕಾವೇರಿ, ಕಪಿಲಾ ನದಿಗಳಲ್ಲಿ ಹೊರಹರಿವು ಹೆಚ್ಚಾದ ಹಿನ್ನೆಲೆ ಜಿಲ್ಲಾಡಳಿತದ ನಿರ್ದೇಶದ ಮೇರೆಗೆ ತಾಲೂಕಿನದ್ಯಾoತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲವು ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕಬಿನಿ ಮತ್ತು ಕೆ.ಆರ್.ಎಸ್. ಜಲಾಶಯಗಳಿಂದ ಮತ್ತಷ್ಟು ಹೊರಹರಿವು ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ತಾಲೂಕು ಆಡಳಿತ ತಗ್ಗುಪ್ರದೇಶಗಳು ಮತ್ತು ನದಿಪಾತ್ರದ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
-ಟಿ.ಜಿ. ಸುರೇಶ್ ಆಚಾರ್, ತಹಸೀಲ್ದಾರ್, ಟಿ. ನರಸೀಪುರ