ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಜಲಾಶಯ ಭರ್ತಿಯಾಗಿ ಕಾವೇರಿ ನದಿ ಉಕ್ಕಿ ಹರಿದು ರೈತರ ಸಂಕಷ್ಟಗಳಿಗೆ ಪರಿಹಾರ ನೀಡಿದ ಕಾವೇರಿ ಮಾತೆಗೆ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಪೂಜೆ ಸಲ್ಲಿಸಿ ದೃಷ್ಟಿ ತೆಗೆದರು.ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ದಕ್ಷಿಣ ಕಾವೇರಿ ಸೇತುವೆ ಮೇಲೆ ರೈತ ಪರ ಸಂಘಟನೆಗಳೊಂದಿಗೆ ವೇದಿಕೆ ಕಾರ್ಯಕರ್ತರು ಕನ್ನಡ ಬಾವುಟ, ಹಸಿರು ತೋರಣ ಕಟ್ಟಿ ಬೃಹತ್ ಹೂವಿನ ಹಾರ ಹಾಕಿ, ಹರಿಶಿನ ಕುಂಕುಮ ನದಿಗೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಶಂಕರ್ ಬಾಬು, ತಮಿಳುನಾಡು ಪ್ರತಿ ಬಾರಿಯು ಕಾವೇರಿ ನದಿ ನೀರಿಗೆ ಖ್ಯಾತೆ ತೆಗೆಯುತ್ತಿತ್ತು. ಈ ಬಾರಿ ಪ್ರಕೃತಿಯ ಸಹಕಾರದಿಂದ ಲಕ್ಷಾಂತರ ಕ್ಯುಸೆಕ್ ನೀರು ಹರಿಸುತ್ತಿದ್ದೇವೆ. ಕಾವೇರಿ ಉಕ್ಕಿ ಹರಿದರೆ ನಾವೇ ನೀರು ನೀಡುತ್ತೇವೆ. ತಾಳ್ಮೆ ಇಲ್ಲದವರು ಕರ್ನಾಟಕದ ವಿರುದ್ಧ ಸುಖಾ ಸುಮ್ಮನೆ ಖ್ಯಾತೆ ಮಾಡುವುದರ ಬದಲು, ಅನೋನ್ಯವಾಗಿರಲು ಮನವಿ ಮಾಡಿದರು.ತಮಿಳುನಾಡಿನ ರೈತರು ಕೂಡ ನಮ್ಮವರೆ, ಅವರಿಗೂ ನೀರು ಕೊಡಗಲು ಕನ್ನಡಿಗರಿಗೆ ಬೇಸರವಿಲ್ಲ. ಇಲ್ಲಿನ ಪರಿಸ್ಥಿತಿ ನೋಡಿ ನೀರು ಕೇಳಬೇಕು ಎಂದರು. ಕಾವೇರಿ ನದಿ ಪಾತ್ರದ ರೈತರು ನೆರೆ ಸಂತಸ್ತರಿಗೆ ಸರ್ಕಾರ ತಕ್ಷಣ ಸ್ಪಂದಿಸಿ ತ್ವರಿತವಾಗಿ ಪರಿಹಾರದ ವ್ಯವಸ್ಥೆ ಕಲ್ಪಿಸಬೇಕು, ಇಲ್ಲದಿದ್ದರೆ ರೈತರ ಪರ ವಾಗಿ ಹೋರಾಟಗಳ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ತಮಿಳುನಾಡಿನ ದೃಷ್ಟಿ ಕಾವೇರಿ ಮಾತೆಗೆ ತಗಲುದಂತೆ ಕುಂಬಳಕಾಯಿ ಪೂಜೆ ಸಲ್ಲಿಸಿ ದೃಷ್ಟಿ ತೆಗೆದು ಸೇತುವೆ ಮೇಲೆ ಹೊಡೆದದರು.
ನಂತರ ತುಂಬಿ ಹರಿಯುತ್ತಿರುವ ಕಾವೇರಿ ನದಿ ವೀಕ್ಷಣೆಗೆ ಬಂದ ನೂರಾರು ಮಂದಿ, ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಸಿಹಿ ನೀಡಿ ಸಂಭ್ರಮ ವ್ಯಕ್ತಪಡಿಸಿದರು.ಈ ವೇಳೆ ರೈತ ಮುಖಂಡ ಪಾಂಡು, ಎಂ. ಶೆಟ್ಟಹಳ್ಳಿ ರಾಜು, ಪ್ರಮೋದ್, ಪ್ರಶಾಂತ್ ಅಕ್ಷಯ್, ಧನುಷ್, ರಾಘವೇಂದ್ರ ಸೇರಿದಂತೆ ಇತರ ವೇದಿಕೆ ಕಾರ್ಯಕರ್ತರು ಇದ್ದರು.