ಸಾರಾಂಶ
ಅಪಘಾತ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಪುಂಡರ ಗುಂಪೊಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದೆ.
ಕನ್ನಡಪ್ರಭ ವಾರ್ತೆ ಆನೇಕಲ್
ಅಪಘಾತ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಪುಂಡರ ಗುಂಪೊಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಇಂಡ್ಲವಾಡಿ ಕ್ರಾಸ್ ಬಳಿ ನಡೆದಿದೆ.ಶುಕ್ರವಾರ ರಾತ್ರಿ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಭೈರವೇಶ್ವರ ಪ್ರಾವಿಜನ್ ಅಂಗಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಶಬ್ಧಕ್ಕೆ ಬೆಚ್ಚಿ ಬಿದ್ದ ಅಂಗಡಿ ಮಾಲೀಕ ಶಿವು ಸಾವರಿಸಿಕೊಂಡು ಹೊರಗೆ ಬಂದು ನೋಡಿದಾಗ ಕಾರು ತನ್ನ ಅಂಗಡಿಗೆ ಗುದ್ದಿ ನಿಂತಿತ್ತು.
ಗಾಬರಿಗೊಂಡ ಶಿವು ಪ್ರಶ್ನೆ ಮಾಡಿದ್ದಕ್ಕೆ ಕೋಪಗೊಂಡ ದುರುಳರು ಮಾರಕಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇದೇ ಕಾರಣವನ್ನು ದೊಡ್ಡದು ಮಾಡಿದ ಕಾರು ಚಾಲಕ ಕ್ಯಾತೆ ತೆಗೆದು, ನಂತರ ಫೋನ್ ಮಾಡಿ ಹುಡುಗರನ್ನು ಕರೆಸಿದ್ದಾನೆ. ಬಂದ ಬಂದಂತೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹುಡುಗರು, ಅಂಗಡಿಯಿಂದ ಶಿವು ಅವರನ್ನು ಹೊರಗೆಳೆದು ಮನಸೋ ಇಚ್ಚೆ ಥಳಿಸಿ ಮಾರಕಾಸ್ತ್ರಗಳಿಂದಲೂ ತಲೆ, ಕೈ ಇತರೆಡೆ ಹಲ್ಲೆ ನಡೆಸಿದ್ದಾರೆ. ಶಿವು ಅವರನ್ನು ನೆರೆ ಹೊರೆಯವರು ಆನೇಕಲ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಆನೇಕಲ್ ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಆನೇಕಲ್‌ನಲ್ಲಿ ಪುಡಿ ರೌಡಿಗಳ ಅಟ್ಟಹಾಸ ನಿಲ್ಲುತ್ತಿಲ್ಲ ಎಂದು ಭಯ ಭೀತರಾಗಿರುವ ಜನ, ಪೊಲೀಸರು ರೌಡಿಗಳಿಂದ ಜನರಿಗೆ ಮುಕ್ತಿ ಕೊಡಿಸುವರೇ ಎಂದು ಪ್ರಶ್ನಿಸುತ್ತಿದ್ದಾರೆ.