ಬದುಕಿ ಬಾಳಬೇಕಿದ್ದ ನಮ್ಮ ಮನೆ ಮಕ್ಕಳು ಕಾಲ್ತುಳಿತಕ್ಕೆ ಬಲಿಯಾಗಿದ್ದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಈ ದುರ್ಘಟನೆಯಿಂದ ಬೆಂಗಳೂರು ಮತ್ತು ಕರ್ನಾಟಕದ ಘನತೆಗೆ ಧಕ್ಕೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗದ್ಗದಿತರಾದರು.

ಬೆಂಗಳೂರು : ಬದುಕಿ ಬಾಳಬೇಕಿದ್ದ ನಮ್ಮ ಮನೆ ಮಕ್ಕಳು ಕಾಲ್ತುಳಿತಕ್ಕೆ ಬಲಿಯಾಗಿದ್ದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಈ ದುರ್ಘಟನೆಯಿಂದ ಬೆಂಗಳೂರು ಮತ್ತು ಕರ್ನಾಟಕದ ಘನತೆಗೆ ಧಕ್ಕೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗದ್ಗದಿತರಾದರು.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಿಂದ 11 ಮಂದಿ ಸಾವಿನ ಕುರಿತು ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ಕಣ್ಣೀರುಗರೆದ ಡಿ.ಕೆ.ಶಿವಕುಮಾರ್‌, ಬಾಳಿ ಬದುಕಬೇಕಾಗಿದ್ದ 14-15 ವರ್ಷದ ಮಕ್ಕಳು ಸಾವಿಗೀಡಾಗಿದ್ದಾರೆ. ಅದನ್ನು ಕಣ್ಣಾರೆ ನೋಡಿದ್ದೇನೆ. ಯಾವುದೇ ಕುಟುಂಬಕ್ಕೂ ಸಾವು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಕುಟುಂಬದಲ್ಲೇ ದುರ್ಘಟನೆ ನಡೆದಿದೆ ಎಂದು ನಾನು ಭಾವಿಸಿದ್ದೇವೆ. ಈ ನೋವು ತಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ನಗರ ಪೊಲೀಸ್‌ ಆಯುಕ್ತರು ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು 10 ನಿಮಿಷಗಳಲ್ಲಿ ಮುಗಿಸುವಂತೆ ಸೂಚಿಸಿದ್ದರು. ಹೀಗಾಗಿ ನಾನು ಕ್ರೀಡಾಂಗಣಕ್ಕೆ ತೆರಳಿ ಆರ್‌ಸಿಬಿ ತಂಡದೊಂದಿಗೆ ಮಾತನಾಡಿ ಕಾರ್ಯಕ್ರಮ ಮೊಟಕುಗೊಳಿಸುವಂತೆ ಮಾಡಲಾಯಿತು ಎಂದು ಹೇಳಿದರು.

ಕೆಎಸ್‌ಸಿಎ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಿತ್ತು. ಅಷ್ಟು ಜನ ಕ್ರೀಡಾಂಗಣದ ಬಳಿ ಸೇರಿದ್ದರು. ಹೀಗಾಗಿ ನನ್ನ ಕಾರಿನಲ್ಲಿ ಅವರನ್ನು ಕರೆದುಕೊಂಡು ಹೋಗಬೇಕಾಯಿತು. ಕ್ರೀಡಾಂಗಣಕ್ಕೆ ಹೋಗುವಾಗ ಈ ರೀತಿಯ ದುರ್ಘಟನೆ ನಡೆದಿದೆ ಎಂದು ಮಾಧ್ಯಮದವರು ತಿಳಿಸಿದರು. ನಂತರ ಪೊಲೀಸ್‌ ಆಯುಕ್ತರು ಮಾಹಿತಿ ನೀಡಿದರು ಎಂದು ವಿವರಿಸಿದರು.

ಹೆಣದ ಮೇಲೆ ರಾಜಕೀಯ:

ವಿರೋಧ ಪಕ್ಷಗಳ ಟೀಕೆ ಕುರಿತಂತೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಈ ವಿಚಾರದಲ್ಲಿ ನಾನು ರಾಜ್ಯದ ಜನರಿಗೆ ಉತ್ತರಿಸಬೇಕು. ಅದನ್ನು ಬಿಟ್ಟು ಬಿಜೆಪಿ ನಾಯಕರ ಹೇಳಿಕೆಗೆ ಉತ್ತರಿಸುವ ಅಗತ್ಯವಿಲ್ಲ. ಅವರ ಹೇಳಿಕೆಗಳು ಅಸಂಬದ್ಧವಾಗಿವೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಹೀಗೆ ರಾಜಕೀಯ ಮಾಡುವುದರಲ್ಲಿ ಅವರು ಮಾಸ್ಟರ್‌ ಮೈಂಡ್‌ಗಳು. ಅವರ ಆಡಳಿತಾವಧಿಯಲ್ಲಿ ಏನೆಲ್ಲ ಆಗಿದೆ ಎಂದು ನಾನೂ ಪಟ್ಟಿ ನೀಡಬಹುದು ಎಂದರು.

ಅಧಿವೇಶನದಲ್ಲಿ ಈ ವಿಚಾರ ಚರ್ಚೆ ಮಾಡಿದರೆ ಅಲ್ಲೂ ಉತ್ತರಿಸುತ್ತೇನೆ. ಈ ಹಿಂದೆ ಡಾ.ರಾಜ್‌ಕುಮಾರ್‌ ಸಾವಿನ ಸಂದರ್ಭದಲ್ಲಿ ಏನೆಲ್ಲ ಆಯಿತು ಎಂಬುದನ್ನು ನಾನು ಮಾತನಾಡಲು ಬಯಸುವುದಿಲ್ಲ. ಅಂತಹ ನೀಚ ರಾಜಕಾರಣವನ್ನು ಮಾಡಲು ನನಗೆ ಇಷ್ಟವಿಲ್ಲ. ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಗೆ ಹೆಣದ ಮೇಲೆ ರಾಜಕೀಯ ಮಾಡುವುದೇ ಅಜೆಂಡಾ ಆಗಿದೆ ಎಂದು ತಿಳಿಸಿದರು.

ಈ ಸಾವಿಗೆ ನೀವೆ ಹೊಣೆ ಎಂದು ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್‌, ಕುಮಾರಸ್ವಾಮಿಗೆ ನಾನು ಮುಂದೆ ಉತ್ತರಿಸುತ್ತೇನೆ. ಬುಧವಾರ ಬೆಳಗ್ಗೆ ನಾನು ಕನಕಪುರದಲ್ಲಿದ್ದೆ. ಪೊಲೀಸ್‌ ಅಧಿಕಾರಿಗಳು ಮೆರವಣಿಗೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಹೀಗಾಗಿ ನಾನು ಬೆಂಗಳೂರಿಗೆ ಬಂದೆ. ನಂತರ ಉಳಿದ ವ್ಯವಸ್ಥೆ ಮಾಡಿದೆವು. ಜನ ಹೆಚ್ಚಾಗಿ ಬರುವುದನ್ನು ಗಮನಿಸಿ ಮೆಟ್ರೋ ರೈಲು ಸೇವೆಯನ್ನೂ ಸ್ಥಗಿತಗೊಳಿಸಿದ್ದೆವು ಎಂದರು.