ನಿಲ್ಲದ ನೆರೆ, ಹಿನ್ನೀರು ಗ್ರಾಮಗಳ ಜನರ ವ್ಯಥೆ

| Published : Oct 25 2025, 01:00 AM IST

ಸಾರಾಂಶ

ವಿವಿ ಸಾಗರ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಹಿನ್ನೀರು ಭಾಗದ ಜನರ ವ್ಯಥೆ ಹೇಳ ತೀರದಾಗಿದೆ.

ಕನ್ನಡಪ್ರಭ ವಾರ್ತೆ ಹೊಸದುರ್ಗ

ವಿವಿ ಸಾಗರ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಹಿನ್ನೀರು ಭಾಗದ ಜನರ ವ್ಯಥೆ ಹೇಳ ತೀರದಾಗಿದೆ.

ಈಗಾಗಲೇ ಡ್ಯಾಮ್‌ನಿಂದ ನೀರನ್ನು ಹೊರ ಬಿಡಲಾಗುತ್ತಿದ್ದರೂ ಶೇಖರಣೆಯ ಪ್ರಮಾಣ ಕಡಿಮೆಯಾಗುತ್ತಿಲ್ಲ. ನೀರಾವರಿ ಇಲಾಖೆ ಅಂದಾಜಿನ ಪ್ರಕಾರ 7,000 ಕ್ಯೂಸೆಕ್ಸ್ ಹೊರ ಬಿಡಲಾಗುತ್ತಿದೆಯಾದರು 12ಸಾವಿರ ಕ್ಯೂಸೆಕ್ಸ್ ಒಳ ಹರಿವು ಇದೆ ಎನ್ನಲಾಗುತ್ತಿದೆ.

ಜಿಲ್ಲಾಧಿಕಾರಿ ಭೇಟಿ: ಜಲಾಶಯದ ಹಿನ್ನೀರಿನ ಗ್ರಾಮಗಳ ವಸತಿ ಪ್ರದೇಶಕ್ಕೆ ಹಾಗೂ ಕೃಷಿ ಭೂಮಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಅತ್ತಿಮಗ್ಗೆ, ಪೂಜಾರಹಟ್ಟಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ವೆಂಕಟೇಶ್ ಹಾಗೂ ಶಾಸಕ ಬಿಜಿ ಗೋವಿಂದಪ್ಪ ಗುರುವಾರ ಸಂಜೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ಈಗಾಗಲೇ ಹಿನ್ನೀರಿನ ಪ್ರದೇಶದಲ್ಲಿ ಈ ಹಿಂದೆಯೇ ಆಗಿರುವ ಹಾನಿಯ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಪ್ರಸ್ತುತ ಈ ವರ್ಷವೂ ಪುನಃ ಹಾನಿ ಉಂಟಾಗಿದ್ದು, ಪುನಃ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಜಲಾಶಯದ ನೀರಿನಿಂದ ಮನೆಗಳಿಗೆ ಹಾನಿಯಾಗಿ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಈಗಾಗಲೇ ಬೇರೆ ಕಡೆ ನಿವೇಶನ ನೀಡಲಾಗಿದೆ. ತಾತ್ಕಾಲಿಕವಾಗಿ ಅವರಿಗೆ ಅಡುಗೆ ಮಾಡಲು ಬೇಕಾದ ಪಾತ್ರೆ ಹಾಗೂ ದಿನಸಿ ಸಾಮಾನುಗಳನ್ನು ಕೊಡಿಸಲಾಗಿದ್ದು, ತಾತ್ಕಾಲಿಕವಾಗಿ ಶೆಡ್ಡುಗಳನ್ನು ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಳ್ಳಲಾಗಿದೆ ಎಂದರು.

ಅ.26ರಂದು ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ: ಅಕ್ಟೋಬರ್ 26ರಂದು ಭಾನುವಾರ ಜಲಾಶಯದ ಹಿನ್ನೀರಿನ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಎಂದು ಶಾಸಕ ಬಿಜೆಪಿ ಗೋವಿಂದಪ್ಪ ತಿಳಿಸಿದರು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಮಾತನಾಡಿದ್ದು, ನವಂಬರ್ 6 ರಂದು ನಡೆಯಲಿರುವ

ಮುಖ್ಯಮಂತ್ರಿಗಳ ಸಭೆಯಲ್ಲಿ ನೀರಿನ ಭಾಗದ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೆ ಮನವಿ ಮಾಡಲಾಗುವುದು ಎಂದರು.

ಅನುಮತಿ ಪಡೆದು ನೀರು ಬಿಡುಗಡೆ: ಜಲಾಶಯದಲ್ಲಿ ನೀರು ಸಂಗ್ರಹಣೆ ಹೆಚ್ಚಾಗುತ್ತಿದ್ದಂತೆ ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಜಲಾಶಯದಿಂದ ನೀರು ಬಿಡಲಾಗಿದೆ. ಇಲ್ಲಿ ಯಾರು ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಶಾಸಕ ಬಿಜೆ ಗೋವಿಂದಪ್ಪ ತಿಳಿಸಿದರು.

ರೈತ ಮುಖಂಡರು ಕೇವಲ ತಮ್ಮ ನೇರಕ್ಕೆ ಮಾತನಾಡದೆ ಹಿನ್ನೀರಿನ ನೀರಿನ ಭಾಗದ ರೈತರ ಸಂಕಷ್ಟವನ್ನು ಗಮನಿಸಬೇಕು ಇಲ್ಲಿರುವವರು ಮನುಷ್ಯರು ಎಂಬುದನ್ನು ಮರೆಯಬಾರದು ಎಂದು ದೂರು ನೀಡಿರುವ ರೈತ ಮುಖಂಡರಿಗೆ ತಿರುಗೇಟು ನೀಡಿದರು.