ಶೂನ್ಯ ಸಾಧನೆಯ ವೇದನೆ, ರೋಧನೆಯ ಸಮಾವೇಶ

| Published : May 20 2025, 01:28 AM IST

ಸಾರಾಂಶ

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅ‍ವರು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಸಮಾವೇಶ ವಿರುದ್ಧ ಪೊಸ್ಟರ್‌ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯ ಕಾಂಗ್ರೆಸ್ ಸರ್ಕಾರ ಹೊಸಪೇಟೆಯಲ್ಲಿ ಮಂಗಳವಾರ ನಡೆಸುತ್ತಿರುವುದು ಎರಡು ವರ್ಷಗಳ ಸಾಧನೆಯ ಸಮಾವೇಶವಲ್ಲ ಅದು ಶೂನ್ಯ ಸಾಧನೆ ಹಾಗೂ ವೇದನೆ, ರೋಧನೆ ಸಮಾವೇಶ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸಾಮಾನ್ಯ ಜನರು ಅಗತ್ಯ ವಸ್ತುಗಳ ಬೆಲೆ ಏರಿಕೆ, ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿ, ಮಿತಿ ಮೀರಿದ ಭಷ್ಟಾಚಾರ, ಗ್ಯಾರಂಟಿಗಳ ವಿಫಲತೆ, ಗಡಿಯಲ್ಲಿ ಯುದ್ಧದಂತಹ ಪರಿಸ್ಥಿತಿ ಮುಂದುವರಿದಿರುವಾಗ ರಾಜ್ಯ ಸರ್ಕಾರ ಯಾವ ಪುರಷಾರ್ಥಕ್ಕೆ ಸಮಾವೇಶ ಮಾಡುತ್ತಿದೆ. 2 ವರ್ಷಗಳ ಸರ್ಕಾರದ ಸಾಧನೆ ಏನು, ಯಾವುದಾದರೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯವಾಗಿದೆಯೇ, ಗುತ್ತಿಗೆದಾರರಿಗೆ ಬಿಲ್ ಪಾವತಿಯಗಿಲ್ಲ. ಕಮಿಷನ್ ಮೊತ್ತ ಶೇ.60ಕ್ಕೆ ಏರಿಕೆಯಾಗಿದೆ ಎಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ ಎಂದರು.

3 ಬಾರಿ ಬೆಲೆ ಹೆಚ್ಚಳ:

ಒಂದು ಕುಟುಂಬಕ್ಕೆ 2 ಸಾವಿರ ಕೊಟ್ಟು ಸಾವಿರದವರೆಗೆ ಲೂಟಿ ಮಾಡಲಾಗುತ್ತಿದೆ. ಹಾಲಿನಿಂದ ಹಿಡಿದು, ಅಲ್ಕೋಹಾಲ್‌ವರೆಗೆ ಬೆಲೆಯನ್ನು ಮೂರು ಬಾರಿ ಹೆಚ್ಚಿಸಲಾಗಿದೆ, ಈ ಸರ್ಕಾರದಿಂದ ಜನರಿಗೆ ವೇದನೆ, ರೋಧನೆ ಹೆಚ್ಚಾಗಿದಿಯೇ ಹೊರತು ನೆಮ್ಮದಿ ಸಿಕ್ಕದೆಯೇ? ಜನ ಸರ್ಕಾರದ ವಿರುದ್ಧ ರೋಸಿ ಹೋಗಿದ್ದಾರೆ ಎಂದರು. ಚುನಾವಣೆ ವೇಳೆ ನೂರಾರು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ನಂತರ ಎಲ್ಲ ಮರೆತು ಕೇವಲ 5 ಗ್ಯಾರಂಟಿಗಳನ್ನು ಕೊಟ್ಟಿದ್ದನ್ನೇ ಕಳೆದ ೨ ವರ್ಷದಿಂದ ಡಂಗೂರ ಬಾರಿಸುತ್ತಾ ಬಂದಿದ್ದಾರೆ. ಅವು ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬೇರೆ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ವಾಲ್ಮೀಕಿ ಹಗರಣ ಮುಂತಾದವು ಸಾಧನೆಗಳೇ?, ಪರಿಶಿಷ್ಟ ಜಾತಿ ಅಭಿವೃದ್ಧಿಗೆ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆಗಳಿಗೆ ಹಣ ಬಳಸಿದ್ದು ಸಾಧನೆಯೇ ಎಂದು ಪ್ರಶ್ನಿಸಿದರು. ಪೆಟ್ರೋಲ್-ಡಿಸೇಲ್ ಮೇಲಿನ ರಾಜ್ಯದ ಸುಂಕ ಹೆಚ್ಚಳ, ಬ್ರಾಂಡ್ ಬೆಂಗಳೂರು, ಗ್ರೇಟರ್ ಬೆಂಗಳೂರು ಬರಿ ಘೋಷಣೆಗಳಾದವೇ ಹೊರತು ಯಾವದು ಜಾರಿಯಾಗದೇ, ಮಳೆ ಬಂದರೆ ಬೆಂಗಳೂರು ಮುಳುಗುತ್ತಿದೆ ಎಂದರು.

ಎಸ್ಸಿ, ಎಸ್ಟಿಗೆ 42 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದೇವೆ ಎಂದು ಹೇಳಿ, ವಿವಿಧ ಇಲಾಖೆಗಳ ಮೂಲಕ ನೀರಾವರಿ, ರಸ್ತೆ ದುರಸ್ತಿ, ಸೇತುವೆ ರೀಪೇರಿ ಇದರಿಂದ ದಲಿತರಿಗೇನು ಲಾಭ ಇದು ದಲಿತ ವರ್ಗಕ್ಕೆ ಮಾಡಿದ ವಂಚನೆ, ಸಚಿವ ಮಹದೇವಪ್ಪ ಅವರೇ, ಸಂಸದರೇ ಈ ಜಿಲ್ಲೆಯ ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗೆ ಎಷ್ಟು ಹಣ ಬಂದಿದೆ ಎಂದು ಹೇಳುವಿರಾ ಖರ್ಗೆ ಕುಟುಂಬಕ್ಕೆ ಶಾಲಾ ಕಾಂಪೌಂಡ್‌ಗೆ 9.20 ಕೋಟಿ ಕೊಟ್ಟಿದ್ದೀರಲ್ಲಾ, ಇದು ಎಐಸಿಸಿ ಅಧ್ಯಕ್ಷರಿಗೆ ಹೆದರಿಕೊಂಡು ನೀಡಿರುವುದೇ, ದೊಡ್ಡ ದೊಡ್ಡ ಮಾತನಾಡುವ ಪ್ರಿಯಾಂಕ ಖರ್ಗೆಗೆ, ಗೊತ್ತಿಲ್ಲವೇ, ನಾವು ಆರೋಪ ಮಾಡಿದ ಮೇಲೆ ಸರ್ಕಾರ ಕೊಟ್ಟಿದ್ದ ಕೋಟಿಗಟ್ಟಲೆ ಬೆಲೆ ಬಾಳುವ 5 ಎಕ್ಕರೆ ಜಮೀನು ಹಿಂದಿರುಗಿಸಿದ್ದು ಎಂದರು.

ರಾಜ್ಯ ದಿವಾಳಿ ಅಂಚಿನಲ್ಲಿ:

ರಾಜ್ಯ ಇಂದು ಆರ್ಥಿಕ ದಿವಾಳಿ, ಶೂನ್ಯ ಅಭಿವೃದ್ಧಿ, ಕುಸಿದ ಕಾನೂನು ವ್ಯವಸ್ಥೆ, ಸಾಮಾಜಿಕ ನ್ಯಾಯದ ಕಗ್ಗೊಲೆ ಮತ್ತು ವ್ಯಾಪಕ ಭ್ರಷ್ಟಾಚಾರದಿಂದ ಕೂಡಿದ್ದು, ಇದು ಜನಾದೇಶಕ್ಕೆ ಮಾಡಿದ ದ್ರೋಹ ಮತ್ತು ರಾಜ್ಯಕ್ಕೆ ಮಾಡಿದ ಅಪಚಾರ ಎಂದರು. ಭಯೋತ್ಪಾದಕರ ಹಾಗೂ ಪಾಕಿಸ್ತಾನ ಪರ ನಿಲ್ಲುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ, ಎಲ್ಲ ಮುಸ್ಲೀಮರು ಕೆಟ್ಟವರಲ್ಲ, ಆದರೆ ಭಯೋತ್ಪಾದಕರಾಗಿರುವವರೆಲ್ಲ ಮುಸ್ಲೀಮರು ಎಂದರು.

ಕಳೆದ ಎರಡು ವರ್ಷಗಳಲ್ಲಿ, ಸುಮಾರು 2000 ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ, ಶೇ.60 ಕಮಿಷನ್ ಸರ್ಕಾರ ಪ್ರಾಮಾಣಿಕ ಅಧಿಕಾರಿಗಳು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತೆ ಮಾಡುತ್ತಿದೆ. ಮೂರನೇ ಬಾರಿಗೆ ಬಿಯರ್ ದರ ಹೆಚ್ಚಾಗಿದೆ. ಖಜಾನೆ ಖಾಲಿಯಾಗಿದ್ದು, ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ ಎಂದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್ ಮಹೇಶ್ ಮಾತನಾಡಿ, ಎಸ್ಸಿ, ಎಸ್ಟಿ ಸೇರಿದ 7 ಅಭಿವೃದ್ಧಿ ನಿಗಮವಳಿಗೆ ಸರಿಯಾಗಿ ಅನುದಾನವನ್ನೇ ನೀಡಿಲ್ಲ, ಇಲ್ಲಿನ ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ, ಕಾರಿನ ಬಾಡಿಗೆ ಕಟ್ಟಿಲ್ಲ, ಕಳೆದ ಒಂದು ವಾರದಿಂದ ಪತ್ರಿಕೆಗಳಿಗೆ ಅಭಿವೃದ್ಧಿ ಹೆಸರಿನಲ್ಲಿ ಕೊಟ್ಟರುವ ಜಾಹೀರಾತಿನ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದರು. ರಾಜ್ಯದ ಸುಮಾರು 13,825 ಶಾಲಾ ಕಟ್ಟಡಗಳು ದುರಸ್ತಿಗೆ ಬಂದಿವೆ. ಅವುಗಳ ದುರಸ್ತಿಗೆ 531 ಕೋಟಿ ಹಣ ಬೇಕು, ಹೆಚ್ಚುವರಿ ಕೊಠಡಿಗಳು ನಿರ್ಮಾಣವಾಗಬೇಕು, ಇದಕ್ಕೆ ಹಣ ನೀಡದ ಸರ್ಕಾರ ಯಾವ ಪುರಷಾರ್ಥಕ್ಕೆ ಸಮಾವೇಶ ಮಾಡುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ನಿರಂಜನಕುಮಾರ್ ಮಾತನಾಡಿ, ಈ ಸರ್ಕಾರದಲ್ಲಿ ಭ್ರಷ್ಟಾಚಾರ ಗ್ಯಾರಂಟಿ, ಆತ್ಮಹತ್ಯೆ ಗ್ಯಾರಂಟಿ, ಸುಳ್ಳು ಗ್ಯಾರಂಟಿ, ಅಭಿವೃದ್ದಿ ಶೂನ್ಯ ಗ್ಯಾರಂಟಿ, ಶೇ. 60 ಕಮಿಷನ್ ಗ್ಯಾರಂಟಿ ಎಂದರು. ಇದೇ ಸಂದರ್ಭದಲ್ಲಿ ಸರ್ಕಾರದ ಸಾಧನೆ ವಿರೋಧಿಸುವ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪರಮಾನಂದ, ಎಂ. ರಾಮಚಂದ್ರ, ಎಸ್. ಮಹದೇವಯ್ಯ, ನಿಜಗುಣ ರಾಜು, ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಮಹದೇವಸ್ವಾಕು, ಕಾಡಹಳ್ಳಿ ಕುಮಾರ್ ಇದ್ದರು.