ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ ಹೆಣ್ಣನ್ನು ಪೌರಾಣಿಕ ಕಾಲದಿಂದಲೂ ದ್ವಿತೀಯ ದರ್ಜೆಯಾಗಿ ಕಾಣುತ್ತ ಬರಲಾಗಿದೆ. ಅಂತಹ ಸಂಕಟದಲ್ಲಿ ಹೆಣ್ಣು ಪುರುಷ ಪ್ರಧಾನ ಸಮಾಜದಲ್ಲಿ ಅನುಭವಿಸಿದ ನೋವು, ಶೋಷಣೆ ಕಲ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಖ್ಯಾತ ಕವಯತ್ರಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪ ಹೇಳಿದರು.
ನಗರದ ಎವಿಕೆ ಮಹಿಳಾ ಕಾಲೇಜು ಮತ್ತು ಬೇರು-ಚಿಗುರು ವೇದಿಕೆ ಸಹಯೋಗದೊಂದಿಗೆ ಆಯೋಜನೆ ಮಾಡಿದ್ದ "ಕನ್ನಡ ಸಾಹಿತ್ಯ: ಮಹಿಳಾ ಸಂವೇದನೆ " ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪರಂಪರೆಯ ಒಳಗೆ ಒಂದಲ್ಲ ಒಂದು ಕಾರಣದಿಂದ ಹೆಣ್ಣನ್ನು ದೈಹಿಕ ರಚನೆಯಲ್ಲಿ ನೋಡುತ್ತಾ ಬರಲಾಗಿದೆ. ಅವಳನ್ನು ಪುರುಷ ಪ್ರಧಾನ ಸಮಾಜ ಲೈಂಗಿಕ ಸರಕಾಗಿ ಬಳಸಿಕೊಂಡದ್ದು ವಿಷಾದನೀಯ ಸಂಗತಿ. ಹಾಗೆಂದ ಮಾತ್ರಕ್ಕೆ ಎಲ್ಲಾ ಪುರುಷರು ಕೆಟ್ಟವರಲ್ಲ, ಒಳ್ಳವರಲ್ಲ. ಅದೇ ರೀತಿ ಎಲ್ಲಾ ಹೆಣ್ಣು ಮಕ್ಕಳು ಒಳ್ಳವರಲ್ಲ ಮತ್ತು ಕೆಟ್ಟವರಲ್ಲ ಎಂದು ಹೇಳಿದರು.ಕನ್ನಡದ ಪ್ರಾಚೀನ ಕಾಲಘಟ್ಟದ ಸಾಹಿತ್ಯದಿಂದ ಇಂದಿನ ಹೊಸ ತಲೆಮಾರಿನ ಬರಹಗಾರರ ವರೆಗೂ ಹೆಣ್ತನದ ಆಂತರಿಕ ಸಂವೇದನೆಯನ್ನು ಇಟ್ಟುಕೊಂಡು ಬರೆದಿರುವುದು ನೋಡುತ್ತೇವೆ. ಪರಂಪರೆಯ ಒಳಗೆ ಅನೇಕ ಕವಿಗಳು ಆಯ ಘಟ್ಟಕ್ಕೆ ಸಾಹಿತ್ಯ ಕೃತಿಗಳಲ್ಲಿ ಭಿನ್ನ ಭಿನ್ನ ಮಾದರಿಯಲ್ಲಿ, ಭಿನ್ನ ಭಿನ್ನ ನೋಟದಲ್ಲಿ ಚಿತ್ರಿಸಿರುವುದು ನೋಡುತ್ತೇವೆ ಎಂದರು.ಕಾಲೇಜಿನ ಪ್ರಾಚಾರ್ಯೆ ಪ್ರೊ.ಕಮಲಾ ಸೊಪ್ಪಿನ್ ಪ್ರಬಂಧ ಮಂಡನೆಯ ಹೊತ್ತಿಗೆಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಧರ್ಮದ ಕಾರಣದಿಂದ ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ. ಅಂತಹದ್ದರ ನಡುವೆ ನಾವು ಜಾಗೃತವಾಗಬೇಕಿದೆ. ಅಷ್ಟೇ ಅಲ್ಲದೆ ನಾವು ಸಾಹಿತ್ಯ ಕೃತಿಗಳನ್ನು ಹೆಚ್ಚು ಹೆಚ್ಚು ಓದುವ ಮೂಲಕ ನಾವು ಸಮ ಸಮಾಜ ಕಟ್ಟಬೇಕಿದೆ ಎಂದರು.ಡಾ.ಕರಿಯಪ್ಪ ಮಾಳಗಿ ಮಾತನಾಡಿ, ಸಾಹಿತ್ಯ ಎಂದರೆ ಸಂಭ್ರಮ, ಸಾಹಿತ್ಯ ಓದುವುದೇ ಸಂಭ್ರಮ, ಸಾಹಿತ್ಯ ವಿಚಾರ ಕುರಿತು ವಿಚಾರ ಕೇಳುವುದೇ ಸಂಭ್ರಮ. ಆ ನಿಟ್ಟಿನಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಜಿ.ಎಸ್.ಸುಶೀಲಾ ಆರ್.ರಾವ್ ಮಾತನಾಡಿದರು. ಮೊದಲ ಗೋಷ್ಠಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಹಿರಿಯಡ್ಕ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್ ಶಟ್ಟಿ ಅವರು ಪ್ರಾಚೀನ ಕನ್ನಡ ಸಾಹಿತ್ಯ: ಮಹಿಳಾ ಸಂವೇದನೆ ಕುರಿತು ವಿಚಾರ ಮಂಡಿಸಿದರು.ಎರಡನೇ ಗೋಷ್ಠಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ.ಶುಭ ಮರವಂತೆ ಅವರು ವಚನ-ಷಟ್ಪದಿ-ಸಾಂಗತ್ಯ ಕಾವ್ಯಗಳು : ಮಹಿಳಾ ಸಂವೇದನೆ ಕುರಿತು ವಿಚಾರ ಮಂಡಿಸಿದರು.ಮೂರನೇ ಗೋಷ್ಠಿಯಲ್ಲಿ ಖ್ಯಾತ ವಿಮರ್ಶಕಿ ಪ್ರೊ.ತಾರಿಣಿ ಶುಭದಾಯಿನಿ ಅವರು ಕೀರ್ತನೆ ಮತ್ತು ತತ್ವಪದ ಸಾಹಿತ್ಯ: ಮಹಿಳಾ ಸಂವೇದನೆ ಕುರಿತು ವಿಚಾರ ಮಂಡಿಸಿದರು.ಬಳಿಕ ನಾಡಿನ ಅನೇಕ ಸಂಶೋಧನಾ ವಿದ್ಯಾರ್ಥಿಗಳು, ಅಧ್ಯಾಪಕರು ತಮ್ಮ ಪ್ರಬಂಧ ಮಂಡಿಸಿದರು.ಜಿ.ಟಿ.ದೀಪಾ ಮತ್ತು ತಂಡದವರು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಣಧೀರ ಸ್ವಾಗತಿಸಿದರು. ಬೇರು-ಚಿಗುರು ವೇದಿಕೆಯ ಕಾರ್ಯದರ್ಶಿ ಡಿ.ಅಂಜಿನಪ್ಪ ಪ್ರಾಸ್ತಾವಿಕ ನುಡಿಗಳಾಡಿದರು. ಎ.ಎಂ.ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ನಾಗೇಶಪ್ಪ ವಂದಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಕವಿತಾ ಆರ್.ಜಿ. ಡಾ. ಲೋಹಿತ್.ಎಚ್.ಎಂ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))