ಭಟ್ಕಳ: ಆಟೋಕ್ಕೆ ಅಳವಡಿಸಿದ್ದ ಪ್ಯಾಲೆಸ್ತಿನ್‌ ಧ್ವಜದ ಸ್ಟಿಕ್ಕರ್‌ ಪೊಲೀಸ್ ಇಲಾಖೆಯಿಂದ ತೆರವು

| Published : Sep 19 2024, 01:58 AM IST / Updated: Sep 19 2024, 12:56 PM IST

ಭಟ್ಕಳ: ಆಟೋಕ್ಕೆ ಅಳವಡಿಸಿದ್ದ ಪ್ಯಾಲೆಸ್ತಿನ್‌ ಧ್ವಜದ ಸ್ಟಿಕ್ಕರ್‌ ಪೊಲೀಸ್ ಇಲಾಖೆಯಿಂದ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಕಾಗೇರಿ ಅವರು ತಕ್ಷಣವೇ ಪೊಲೀಸ್ ಅಧಿಕಾರಿಗಳಿಗೆ ಪ್ಯಾಲೆಸ್ತಿನ್ ಬಾವುಟದ ಸ್ಟಿಕ್ಕರ್‌ ಇರುವ ರಿಕ್ಷಾ ಗುರುತಿಸಿ ಬಾವುಟ ತೆರವುಗೊಳಿಸಲು ಸೂಚಿಸಿದ್ದರು. ತಕ್ಷಣ ಕಾರ್ಯಪ್ರವೃತ್ತವಾದ ಪೊಲೀಸ್ ಇಲಾಖೆ ಕೂಡಲೇ ರಿಕ್ಷಾವನ್ನು ಗುರುತಿಸಿ ಪ್ಯಾಲೆಸ್ತಿನ್ ಬಾವುಟದ ಸ್ಟಿಕ್ಕರ್‌ ತೆರವುಗೊಳಿಸಿದ್ದಾರೆ.

ಭಟ್ಕಳ: ಇಲ್ಲಿನ ಪ್ಯಾಸೆಂಜರ್ ರಿಕ್ಷಾವೊಂದಕ್ಕೆ ಹಾಕಲಾಗಿದ್ದ ಪ್ಯಾಲೆಸ್ತಿನ್ ಧ್ವಜದ ಸ್ಟಿಕ್ಕರ್‌ ಅನ್ನು ಸಂಸದರ ಸೂಚನೆಯ ಮೇರೆಗೆ ಪೊಲೀಸರು ತೆರವುಗೊಳಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.

ಸಂಸದ ವಿಶ್ವೇಶ್ವರ ಹಗಡೆ ಕಾಗೇರಿ ಅವರು ನಮ್ಮ ದೇಶದಲ್ಲಿ ಬೇರೆ ದೇಶದ ಧ್ವಜಗಳನ್ನು ಹಾರಿಸಲು ಯಾರಿಗೂ ಅಧಿಕಾರ ಇಲ್ಲ. ನಮ್ಮ ದೇಶ ನಮ್ಮ ಧ್ವಜ ಎಂದು ಹೇಳಿ ಅಟೋವೊಂದರ ಮೇಲೆ ಇರುವ ಪ್ಯಾಲೆಸ್ತಿನ್ ಬಾವುಟ ಹಾರಿಸಿದರೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತೆರವುಗೊಳಿಸಬೇಕು ಎಂದು ಸೂಚಿಸಿದ್ದರು. 

ಬುಧವಾರ ಸದಸ್ಯತ್ವ ಅಭಿಯಾನದ ಪ್ರಚಾರದ ಅಂಗವಾಗಿ ಭಟ್ಕಳಕ್ಕೆ ಆಗಮಿಸಿದ್ದ ಸಂಸದರು ಪ್ರವಾಸಿ ಬಂಗಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆಯ ಸಮಯದಲ್ಲಿ ರಾಜ್ಯದ ಕೆಲವೆಡೆ ಪ್ಯಾಲೆಸ್ತಿನ್ ಬಾವುಟ ಹಿಡಿದು ಓಡಾಡಿದ ಬಗ್ಗೆ ಉಲ್ಲೇಖಿಸಿ ಖಂಡನೆ ವ್ಯಕ್ತಪಡಿಸಿದಾಗ, ಪತ್ರಕರ್ತರೊಬ್ಬರು ಭಟ್ಕಳದಲ್ಲೂ ರಿಕ್ಷಾವೊಂದರ ಹಿಂಭಾಗದಲ್ಲಿ ಪ್ಯಾಲೆಸ್ತಿನ್ ಬಾವುಟದ ಸ್ಟಿಕ್ಕರ್ ಅಂಟಿಸಿ ಓಡಿಸುತ್ತಿರುವುದನ್ನು ಸಂಸದರ ಗಮನಕ್ಕೆ ತಂದಿದ್ದರು.

 ತಕ್ಷಣವೇ ಪೊಲೀಸ್ ಅಧಿಕಾರಿಗಳಿಗೆ ಪ್ಯಾಲೆಸ್ತಿನ್ ಬಾವುಟದ ಸ್ಟಿಕ್ಕರ್‌ ಇರುವ ರಿಕ್ಷಾ ಗುರುತಿಸಿ ಬಾವುಟ ತೆರವುಗೊಳಿಸಲು ಸೂಚಿಸಿದ್ದರು. ತಕ್ಷಣ ಕಾರ್ಯಪ್ರವೃತ್ತವಾದ ಪೊಲೀಸ್ ಇಲಾಖೆ ಕೂಡಲೇ ರಿಕ್ಷಾವನ್ನು ಗುರುತಿಸಿ ಪ್ಯಾಲೆಸ್ತಿನ್ ಬಾವುಟದ ಸ್ಟಿಕ್ಕರ್‌ ತೆರವುಗೊಳಿಸಿದ್ದಾರೆ. ಕಳೆದ ಹಲವಾರು ದಿನಗಳಿಂದ ರಿಕ್ಷಾದಲ್ಲಿ ಪ್ಯಾಲೆಸ್ತಿನ್ ಬಾವುಟದ ಸ್ಟಿಕ್ಕರ್‌ ಹಚ್ಚಿಕೊಂಡು ಓಡಾಡುತ್ತಿದ್ದರೂ ತೆರವುಗೊಳಿಸಲು ಪೊಲೀಸರು ಮುಂದಾಗಿರಲಿಲ್ಲ. ಆದರೆ ಸಂಸದರಿಂದ ಸೂಚನೆ ಬಂದಾಗ ಮಾತ್ರ ಪೊಲೀಸರು ಕಾರ್ಯಪ್ರವೃತ್ತಾರಾಗಿ ಪ್ಯಾಲೆಸ್ತಿನ ಧ್ವಜದ ಹಚ್ಚಿರುವ ಆಟೋ ಪತ್ತೆ ಹಚ್ಚಿದ್ದಾರೆ.

ನೌಕಾನೆಲೆ ಸಿಬ್ಬಂದಿಯಿಂದ ಮೀನುಗಾರರ ಮೇಲೆ ದೌರ್ಜನ್ಯ: ಆರೋಪ

ಕಾರವಾರ: ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ನಲ್ಲಿದ್ದ ಬಲೆಗಳನ್ನು ಕತ್ತರಿಸಿ ನೌಕಾನೆಲೆ ಸಿಬ್ಬಂದಿ ದೌರ್ಜನ್ಯ ನಡೆಸಿದ್ದಾರೆ ಎಂದು ಮೀನುಗಾರರು ಆರೋಪಿಸಿದ್ದಾರೆ.

ತಾಲೂಕಿನ ಅರಗಾ ಬಳಿ ಅರಬ್ಬೀ ಸಮುದ್ರದಲ್ಲಿ ದಾಮೋದರ ತಾಂಡೇಲ ಅವರಿಗೆ ಸೇರಿದ ವೀರ ಗಣಪತಿ ಹೆಸರಿನ ಬೋಟು ಮುದಗಾ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ನೌಕಾನೆಲೆ ಬಳಿ ಮೀನುಗಾರಿಕೆ ನಡೆಸಿದ್ದಕ್ಕೆ ನೌಕಾನೆಲೆ ಸಿಬ್ಬಂದಿ ಬಲೆ ಕತ್ತರಿಸಿ ಲಕ್ಷಾಂತರ ರು. ಹಾನಿ ಮಾಡಿರುವುದಾಗಿ ಮೀನುಗಾರರು ನೌಕಾನೆಲೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆಗಾಗ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಮೀನುಗಾರರ ಸಮಸ್ಯೆಯನ್ನು ಯಾರೂ ಪರಿಹರಿಸುತ್ತಿಲ್ಲ ಎಂದು ಮೀನುಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.