ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ನಡೆಯುತ್ತಿದ್ದ ಹೋರಾಟ ತೀವ್ರ ಹಿಂಸಾಚಾರ ಸ್ವರೂಪ ಪಡೆದುಕೊಂಡಿತು. ಹೋರಾಟದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರು ಕೂಡಲ ಶ್ರೀಗಳ ಘೋಷಣೆಯಂತೆ ಏಕಾಏಕಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಮುತ್ತಿಗೆ ಯತ್ನ ತಪ್ಪಿಸಲು ಭದ್ರತೆಗೆ ನಿಯೋಜನೆಗೊಂಡಿದ್ದ ಸಾವಿರಾರು ಪೊಲೀಸರು ಕೂಡ ಹೋರಾಟಗಾರರ ಮೇಲೆ ಲಾಠಿ ಜಾರ್ಜ್ ಮಾಡಿದರು. ಇದರಿಂದ ತೀವ್ರವಾಗಿ ಕೆರಳಿದ ಪಂಚಮಸಾಲಿ ಸಮುದಾಯದ ಹೋರಾಟಗಾರರು ಪೊಲೀಸರತ್ತಲೇ ಚಪ್ಪಲಿ, ಕಲ್ಲು ತೂರಾಟ ನಡೆಸಿದರು. ಪೊಲೀಸರ ಜೀಪು, ವಾಹನಗಳ ಮೇಲೂ ದಾಳಿ ನಡೆಸಿದರು. ಇದರಿಂದ 20ಕ್ಕೂ ಅಧಿಕ ಪೊಲೀಸರು, ಹೋರಾಟಗಾರರು ಗಾಯಗೊಂಡರು. ಮಾತ್ರವಲ್ಲ, ಪೊಲೀಸರ ಕೆಲವು ವಾಹನಗಳು ಕೂಡ ಜಖಂಗೊಂಡವು.ಹೋರಾಟವು ಹಿಂಸಾಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಪೊಲೀಸರು ಎಚ್ಚೆತ್ತುಕೊಂಡರು. ಅಲ್ಲದೆ, ಇದೆ ವೇಳೆ ಸುವರ್ಣಸೌಧದ ಸುತ್ತಲೂ ಇರುವ ಕಾಂಪೌಂಡ್ ಜಿಗಿದು ಮುನ್ನುಗ್ಗಲು ಕೆಲವು ಹೋರಾಟಗಾರರು ಯತ್ನಿಸಿದಾಗ ಪೊಲೀಸರ ಅವರನ್ನು ಹಿಡಿದೆಳೆದು ತಂದು ವಶಕ್ಕೆ ಪಡೆದುಕೊಂಡರು. ಈ ವೇಳೆ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನತೆ ಪಡೆದುಕೊಂಡಿತು.ಇದೆ ವೇಳೆ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳನ್ನು ಕೂಡ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋದರು. ಅಲ್ಲದೆ, ಸುವರ್ಣಸೌಧದ ಎದುರಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ನಡೆಸುತ್ತಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಪ್ರಮುಖ ನಾಯಕರನ್ನು ಪೊಲೀಸರು ತಮ್ಮ ವಾಹನದಲ್ಲಿ ಹತ್ತಿಸಿಕೊಂಡು ಬೇರೆ ಕಡೆ ಕರೆದೊಯ್ದರು.ಆನಂತರವೂ ಹೋರಾಟ ತಣ್ಣಗಾಗಲಿಲ್ಲ. ಸಮಾಜದ ವಕೀಲರು, ರಾಜಕಾರಣಿಗಳು, ನಾಯಕರು, ಕಾರ್ಯಕರ್ತರು ಹೋರಾಟವನ್ನು ಮುಂದುವರಿಸಿದರು. ಆಗಲೂ ಪೊಲೀಸರು ಅವರ ಬಳಿ ಬಂದು ಲಾಠಿ ಪ್ರಹಾರ ನಡೆಸಿ ಜನಸಮೂಹವನ್ನು ಚದುರಿಸಿದರು. ಆಗ ಮತ್ತೆ ಹೋರಾಟಗಾರರು ಕಲ್ಲು ತೂರುತ್ತಾ ಪೊಲೀಸರ ಬಳಿ ಬಂದರು. ಆಗ ಪಂಚಮಸಾಲಿ ಮುಖಂಡರು ಯಾರೂ ಕಲ್ಲು ತೂರದಂತೆ ಮನವಿ ಮಾಡಿದರು.ಶಾಂತವಾಗಿದ್ದ ಹೋರಾಟ ತೀವ್ರ ಸ್ವರೂಪ ಪಡೆದಿದ್ದು ಹೇಗೆ?:
ಸುವರ್ಣ ವಿಧಾನಸೌಧದ ಎದುರುಗಡೆ ಇರುವ ಕೊಂಡಸಕೊಪ್ಪ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು ಒಪ್ಪಿಕೊಂಡಿದ್ದರು. ಅದರಂತೆ ಬೆಳಗ್ಗೆ 10.30ರ ಸುಮಾರಿಗೆ 2ಎ ಮೀಸಲಾತಿಗಾಗಿ ಹೋರಾಟ ಆರಂಭಗೊಂಡಿತು. ಈ ವೇಳೆ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ಈರಣ್ಣ ಕಡಾಡಿ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಮಹೇಶ ಕುಮಟಳ್ಳಿ, ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಪ್ರಮುಖ ನಾಯಕರು ಕೂಡ ಹೋರಾಟದ ಸ್ಥಳಕ್ಕೆ ಆಗಮಿಸಿದರು.ಇದೆ ವೇಳೆ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳ ಮನವೊಲಿಸುವ ಸಂಬಂಧ ಸರ್ಕಾರದ ಪರವಾಗಿ ಪಂಚಮಸಾಲಿ ಹೋರಾಟದ ವೇದಿಕೆಗೆ ಸಚಿವ ಎಚ್.ಸಿ.ಮಹಾದೇವಪ್ಪ ಆಗಮಿಸಿದರು. ನಂತರ ಅವರು, ಶಾಂತಿಯುತ ಹೋರಾಟಕ್ಕೆ ಅಡ್ಡಿಪಡಿಸುವ ಪ್ರಶ್ನೆಯೇ ಇಲ್ಲ. ಕೋರ್ಟ್ ವ್ಯಾಜ್ಯದ ಕುರಿತ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಅವರು ಸಿದ್ಧ ಎಂದು ಹೇಳಿದ್ದಾರೆ. ಮೀಸಲಾತಿ ವಿಚಾರ ಕುರಿತು ನಾಡಿದ್ದು ಸದನದಲ್ಲಿ ಚರ್ಚೆ ಮಾಡುತ್ತೇವೆ. ಕಾನೂನು, ಸಂವಿಧಾನ ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡುತ್ತೇವೆ. ನಿಮ್ಮ ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇವರ ಜತೆಗೆ ವೆಂಕಟೇಶ, ಲಕ್ಷ್ಮೀ ಹೆಬ್ಬಾಳಕರ, ಡಿ.ಸುಧಾಕರ ಅವರು ಕೂಡ ಆಗಮಿಸಿದ್ದರು.ಆದರೆ, ಇದಕ್ಕೆ ಒಪ್ಪದ ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋರಾಟದ ವೇದಿಕೆಗೆ ಆಗಮಿಸುವಂತೆ ಪಟ್ಟು ಹಿಡಿದರು. ಇಲ್ಲವಾದರೆ ನಾವೇ ಸುವರ್ಣಸೌಧಕ್ಕೆ ಹೋಗುತ್ತೇವೆ ಎಂದು ಹೇಳಿದರು. ಇದೆ ವೇಳೆ ಸಾವಿರಾರು ಸಂಖ್ಯಯಲ್ಲಿ ಸೇರಿದ್ದ ಅಪಾರ ಜನಸ್ತೋಮ ಕೂಡ ಶಿಳ್ಳೆ, ಕೇಕೇ ಹಾಕಿತು. ನಂತರ ಶ್ರೀಗಳು ಸೌಧಕ್ಕೆ ಹೋಗೋಣ ನಡೆಯಿರಿ ಎಂದು ಕರೆ ನೀಡಿಯೇ ಬಿಟ್ಟರು. ಇದರಿಂದ ಅಲ್ಲಿ ನೆರೆದಿದ್ದವರು ಪ್ರತಿಭಟನಾಕಾರರು ಸುವರ್ಣಸೌಧ ದತ್ತ ತೆರಳಲು ಮುಂದಾದರು.ಹರ..ಹರ.. ಮಹಾದೇವ.... ಜೈ ಪಂಚಮಸಾಲಿ ...ಎಂಬ ಘೋಷಣೆಗಳೊಂದಿಗೆ ನಾ ಮುಂದು, ತಾ ಮುಂದು ಎಂಬಂತೆ ದಾರಿ, ಹೊಲ, ಸಿಕ್ಕ ಸಿಕ್ಕ ಜಾಗದಲ್ಲಿ ಹೋಗಿ ರಾಷ್ಟ್ರೀಯ ಹೆದ್ದಾರಿ ಕಡೆಗೆ ಒಮ್ಮೆಲೆ ಸಾವಿರಾರು ಜನರು ಆಗಮಿಸಿದರು. ಮಾತ್ರವಲ್ಲ, ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಮುನ್ನುಗ್ಗಲು ಆರಂಭಿಸಿದರು.ಇದರಿಂದ ವಿಚಲಿತರಾದ ಪೊಲೀಸರು ತಕ್ಷಣವೇ ಸಾವಿರಾರು ಜನ ಹೋರಾಟಗಾರರನ್ನು ನಿಯಂತ್ರಣ ಮಾಡುವುದೇ ದೊಡ್ಡ ಸವಾಲಾಯಿತು. ಆಗ ಅವರನ್ನು ತಡೆಯಲು ಬಂದ ಪೊಲೀಸರನ್ನು ಕೂಡ ಜನಸಮೂಹ ತಳ್ಳಿ ಮುನ್ನುಗ್ಗಲು ಯತ್ನಿಸಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಮಾಡಿದರು. ಈ ವೇಳೆ ಜನರು ದಿಕ್ಕಾಪಾಲಾಗಿ ಓಡಿ ಹೋದರು. ಮಾತ್ರವಲ್ಲ, ಪೊಲೀಸರ ಮೇಲೆ ಕಲ್ಲು, ಚಪ್ಪಲಿ ತೂರಲು ಆರಂಭಿಸಿದರು. ಆಗ ಲಾಠಿ ಪ್ರಹಾರ ಮತ್ತಷ್ಟು ತೀವ್ರಗೊಂಡಿತು.ಇದೆ ವೇಳೆ ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಸಂಸದ ಈರಣ್ಣ ಕಡಾಡಿ ಅವರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಆಗ ಪೊಲೀಸರು ಅವರನ್ನು ಕೂಡ ವಶಕ್ಕೆ ಪಡೆದುಕೊಂಡು ಬೇರೆ ಜಾಗಕ್ಕೆ ಕರೆದುಕೊಂಡು ಹೋದರು.ಆದರೆ, ಇತ್ತ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ನಡೆಸಿದ್ದರಿಂದ ಹಲವಾರು ಜನರು ಗಾಯಗೊಂಡರು. ಕೆಲವು ಮಹಿಳಾ ಹೋರಾಟಗಾರರ ಮೇಲೆಯೂ ಲಾಠಿ ಪ್ರಹಾರ ನಡೆದಿದೆ. ನಂತರ ಗಾಯಗೊಂಡ ಪೊಲೀಸರು ಹಾಗೂ ಹೋರಾಟಗಾರರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು.ಹೆದ್ದಾರಿ ಬಂದ್, ಸಂಚಾರ ಅಸ್ತವ್ಯಸ್ತ:ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಅಕ್ಷರಶಃ ಇದೊಂದು ರಣರಂಗವಾಗಿತ್ತು. ಮಾತ್ರವಲ್ಲ, ಸರಿಸುಮಾರು ಒಂದು ಗಂಟೆ ಕಾಲ ಸಂಚಾರ ಸಂಪೂರ್ಣ ನಿಷೇಧಗೊಂಡಿತ್ತು. ಇದರಿಂದ ಅಂದಾಜು 10 ಕಿಮೀವರೆಗೂ ವಾಹನಗಳು ನಿಂತಿದ್ದವು. ಮಾತ್ರವಲ್ಲ, ವಾಹನ ಸವಾರರು ತೀವ್ರ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ನಂತರ ಪ್ರತಿಭಟನಾಕಾರರನ್ನು ಚದುರಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ಪಂಚಮಸಾಲಿ ಸಮಾಜದ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ಸರಿಯಲ್ಲ. ಅಮಾಯಕರ ಮೇಲೆ ದೌರ್ಜನ್ಯ ಮಾಡಿದ್ದಾರೆ. ಇದು ಬ್ರಿಟಿಷ ಸರ್ಕಾರ, ಪೊಲೀಸರ ಮೂಲಕ ಹೋರಾಟ ಹತ್ತಿಕ್ಕಲಾಗಿದೆ. ಸರ್ಕಾರ ಕೂಡಲೇ ಕ್ಷಮೆ ಕೇಳಬೇಕು. ನಮ್ಮ ಹೋರಾಟದ ಶಕ್ತಿ ಕುಂದಿಸಲು ಯಾರಿಂದಲೂ ಸಾಧ್ಯವಿಲ್ಲ.- ಬಸವಜಯ ಮೃತ್ಯುಂಜಯ ಸ್ವಾಮೀಜಿ,
ಕೂಡಲಸಂಗಮ ಪೀಠ.ಹೋರಾಟ ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರದಲ್ಲಿರುವ ನಮ್ಮದೇ ಸಮಾಜದ ಕೆಲ ಕಿಡಿಗೇಡಿಗಳು ಮಾಡಿಸಿದ ಕೆಲಸವಿದು. ಮುಂದಿನ ಹೋರಾಟದ ಬಗ್ಗೆ ಸ್ವಾಮೀಜಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ.
- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕರು.ಕಾಂಗ್ರೆಸ್ ಆಡಳಿತವನ್ನು ಸಮುದಾಯ ನೆನಪಿಟ್ಟುಕೊಳ್ಳುತ್ತದೆ. ಅದಕ್ಕೆ ತಕ್ಕ ಶಾಸ್ತಿ ಕಲಿಸುತ್ತದೆ. ಲಿಂಗಾಯತ ಪಂಚಮಸಾಲಿ ಸಮುದಾಯದ ಪರವಾಗಿ ನನ್ನ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ. ಬೇರೆ ಸಮಾಜಕ್ಕೆ ಮೀಸಲಾತಿ ಇದೆ. ಆದರೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಏಕೆ ಮೀಸಲಾತಿ ಇಲ್ಲ ಎಂದು ಕೇಳುತ್ತಿದ್ದೇವೆ.
- ಅರವಿಂದ ಬೆಲ್ಲದ್, ಶಾಸಕ