ಭಗವಂತನ ಅನುಗ್ರಹದಿಂದ ಜ್ಞಾನದ ದಾರಿ ಸುಲಭ: ಸ್ವರ್ಣವಲ್ಲೀ

| Published : Aug 21 2025, 02:00 AM IST

ಸಾರಾಂಶ

ಈ ಸಂಸಾರ ಬಂಧನವನ್ನು ಬಿಡಿಸುವವನು ಭಗವಂತ ನರಸಿಂಹ.

ಶಿರಸಿ: ಭಗವಂತನ ಅನುಗ್ರಹದಿಂದ ಜ್ಞಾನದ ದಾರಿ ಸುಲಭ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಶ್ರೀ ನುಡಿದರು.

ಅವರು ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ತೋಟದ ಸೀಮೆಯ ಶಿಷ್ಯರಿಂದ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ನರಸಿಂಹ ಎಂಬ ಶಬ್ದಕ್ಕೆ ವಿಶೇಷವಾದ ಅರ್ಥವಿದೆ. ನರಸಿಂಹತಾಪಿನೀ ಉಪನಿಷತ್ತಿನಲ್ಲಿ ನರಸಿಂಹ ಎಂಬ ಶಬ್ದಕ್ಕೆ ನಮ್ಮ ಬಂಧನವನ್ನು ಹೋಗಲಾಡಿಸುವನು ಎಂಬ ಅರ್ಥವನ್ನು ಮಾಡಿದ್ದಾರೆ. ನಮಗೆಲ್ಲ ಈ ಸಂಸಾರ ಎಂಬ ಬಂಧನ ಇದೆ. ಈ ಸಂಸಾರ ಬಂಧನವನ್ನು ಬಿಡಿಸುವವನು ಭಗವಂತ ನರಸಿಂಹ. ನಾವೆಲ್ಲರೂ ಹುಟ್ಟುತ್ತೇವೆ, ಸಾಯುತ್ತೇವೆ ಹೀಗೆ ಮತ್ತೆ ಮತ್ತೆ ಆಗುತ್ತಲೇ ಇರುತ್ತವೆ. ಇವೆ ಸಂಸಾರ ಬಂಧನ. ಈ ಹುಟ್ಟು ಸಾವು ಎಂಬ ಚಕ್ರವನ್ನು ಬಿಡಿಸಿಕೊಡುವವನು ನೃಸಿಂಹ. ಅದೇ ಅವನು ಕೊಡುವ ಬಿಡುಗಡೆ ಎಂದ ಶ್ರೀಗಳು, ನಮ್ಮ ಎಲ್ಲ ಧರ್ಮದ ಚಿಂತನೆಗೆ ಅತ್ಯಂತ ಮೂಲಭೂತವಾದ ಅಂಶವಾದ ಬಂಧನ ಮತ್ತು ಬಿಡುಗಡೆಯ ಬಗ್ಗೆ ವಿವರಿಸಿದರು.

ಸಂಸಾರ ಬಂಧನವು ಅನೇಕ ಸುತ್ತುಗಳಿಂದ ಸುತ್ತಿಕೊಂಡು ನಮ್ಮನ್ನು ಬಂಧಿಸಿಟ್ಟಿದೆ. ಸುಲಭವಾಗಿ ಬಿಡಿಸಿಕೊಳ್ಳಲು ಬರುವ ಹಾಗೆ ಇಲ್ಲ. ಅತ್ಯಂತ ಒಳಗೆ ನಮಗೆ ಇರುವ ಬಂಧನಗಳು - ಸತ್ವ, ರಜಸ್ಸು, ತಮಸ್ಸು. ಈ ಮೂರು ಗುಣಗಳುಳ್ಳ ಆ ಪ್ರಕೃತಿಯು ಅತ್ಯಂತ ಒಳಗೆ, ಮೂಲದಲ್ಲಿ ಸುತ್ತುಹಾಕಿದೆ. ನಮ್ಮ ಮನಸ್ಸು ನಮ್ಮನ್ನು ಕಟ್ಟಿಹಾಕಿದೆ ಎಂದರು.

ಪರಮಾತ್ಮನ ಮತ್ತು ನನ್ನ ಸಂಬಂಧದ ಸಾಕ್ಷಾತ್ಕಾರವೇ ಜ್ಞಾನ. ಪರಮಾತ್ಮನಿಗೂ ನನಗೂ ಇರುವ ಒಂದು ಅದ್ಬುತವಾದ ಸಂಬಂಧ ಇದೆ. ಇದನ್ನು ಅರಿತುಕೊಳ್ಳಬೇಕು. ಅದು ಅನೇಕ ಆವರಣಗಳ ಮೂಲಕ ಮುಚ್ಚಿಕೊಂಡಿದೆ. ತಲೆಯ ಮೇಲೆ ತುಂಬ ಭಾರ ಹೊತ್ತುಕೊಂಡು ಹೋಗುವಾಗ ಅನೇಕ ವೇದನೆಗಳು ಆಗುತ್ತವೆ. ಅದನ್ನು ಒಂದು ಕಡೆ ಇಳಿಸಿದರೆ ನಂತರ ಅವನು ಸುಖವನ್ನು ಅನುಭವಿಸುತ್ತಾನೆ. ಹಾಗೆಯೇ ನಾವು ಕಟ್ಟಿಕೊಂಡಿರುವ ಎಲ್ಲ ಸುತ್ತುಗಳನ್ನು ಕಳಚಿಕೊಂಡರೆ ಇದೇ ರೀತಿಯ ಅನುಭವಗಳು ಆಗುತ್ತವೆ. ಇಂತಹ ಸುಖವನ್ನು ಪಡೆಯಲು ನಾವು ಪ್ರಯತ್ನಿಸಬೇಕು. ಪರಮಾತ್ಮನ ಮತ್ತು ನಮ್ಮ ನಡುವಿನ ಹತ್ತಿರದ ಸಂಬಂಧದ ಅವಿರ್ಭಾವ. ಇದನ್ನು ನರಸಿಂಹ ದೇವರು ಉಂಟುಮಾಡುತ್ತಾನೆ. ಹಾಗೆಯೇ ಗುರುಗಳು ಅವಿದ್ಯೆಯನ್ನು ನಾಶಮಾಡಿ ವಿದ್ಯೆಯನ್ನು ಕೊಟ್ಟು ಪರಮಾತ್ಮನ ಅನುಭವಕ್ಕೆ ದಾರಿ ತೋರಿಸುತ್ತಾರೆ. ಜ್ಞಾನದ ಬೆಳಕನ್ನು ನೀಡುವ ಸಾಮರ್ಥ್ಯ ಇರುವುದರಿಂದ ಅದಕ್ಕಾಗಿ ಗುರು ಎಂದು ಕರೆಯುತ್ತಾರೆ ಎಂದರು.

ಈ ವೇಳೆ ತೋಟದ ಸೀಮೆಯ ಕೇಶವ ಹೆಗಡೆ, ಮಹಾಬಲೇಶ್ವರ ಹೆಗಡೆ, ಅನಂತ ಭಟ್, ನಾರಾಯಣ ಹೆಗಡೆ ಇತರರು ಇದ್ದರು. ಮಕ್ಕಳಿಗೆ

ಪ್ರತಿಭಾ ಪುರಸ್ಕಾರ ನಡೆಯಿತು. ಮಾತೆಯರು ಕುಂಕುಮಾರ್ಚನೆ ಸ್ತೋತ್ರ, ಭಗವದ್ಗೀತಾ ಪಠಣ, ಮಹನೀಯರು ಗಾಯತ್ರೀ ಜಪ ಮಾಡಿದರು.