ಶಿಗ್ಗಾಂವಿ: ಮುತ್ತು ಉತ್ಪತ್ತಿ ಆಯಿತು ಶಿಶುವಿಗೆ ಹಾಲೇರಿಯಿತಲೇ ಪರಾಕ್ ಇದು ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಗ್ರಾಮದ ಗೊರವಯ್ಯ ನೀಲಪ್ಪ ಮಾಕಪ್ಪನವರ ಅವರು ನುಡಿದ ಕಾರ್ಣಿಕ ನುಡಿ.ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಮಾ. ೧ರಿಂದ ಮಾ. ೨೨ರ ವರೆಗೆ ನಾಲ್ಕು ಭಾನುವಾರ ಮೈಲಾರಲಿಂಗೇಶ್ವರ ದೇವರಿಗೆ ಹಣ್ಣು ಕಾಯಿ ಸಮರ್ಪಣೆ ಮಾಡಿ ಪಲ್ಲಕ್ಕಿ ಉತ್ಸವ ಡೋಣಿ ತುಂಬಿಸುವ ಕಾರ್ಯಕ್ರಮ ನಡೆಯುತ್ತದೆ.ಕೊನೆಯ ವಾರ ಮಾ. ೨೭ರಂದು ರಾಮನವಮಿಯ ದಿನ ಮುಂಜಾನೆ ೯ ಗಂಟೆಗೆ ಭಕ್ತಾದಿಗಳಿಂದ ಹಣ್ಣು ತುಪ್ಪ ಡೋಣಿ ತುಂಬಿಸುವುದು ನಂತರ ಪಲ್ಲಕ್ಕಿ ಉತ್ಸವ ಡೊಳ್ಳಿನ ಮಜಲು ಭಜನೆ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮದ ದೇವರುಗಳಿಗೆ ಅಭಿಷೇಕ ಉಡಿ ತುಂಬಿದ ನಂತರ ೧೨.೩೦ ಗಂಟೆಗೆ ಗ್ರಾಮದ ವೀರಭದ್ರಗೌಡ ಪಾಟೀಲ ಅವರ ಮನೆಯ ಆವರಣದಲ್ಲಿ ಗೊರವಯ್ಯ ನೀಲಪ್ಪ ಮಾಕಪ್ಪನವರ ಬಿಲ್ಲನ್ನು ಏರಿ ಮುತ್ತು ಉತ್ಪತ್ತಿ ಆಯಿತು. ಶಿಶುವಿಗೆ ಹಾಲೇರಿಯಿತಲೇ ಪರಾಕ್ ಎಂಬ ಕಾರ್ಣಿಕ ನುಡಿದಾಗ ಭಕ್ತರು ಏಳು ಕೋಟಿ ಏಳು ಕೋಟಿ ಚಾಂಗ ಮಲೋ ಎಂದು ನುಡಿದರು.ಈ ವರ್ಷ ಮಳೆ ಬೆಳೆ ಚೆನ್ನಾಗಿ ಆಗಿ ಎಲ್ಲರಿಗೂ ಒಳ್ಳೆಯದಾಗುವುದು ಎಂಬುದು ಕಾರ್ಣಿಕದ ತಾತ್ಪರ್ಯ ಎಂದು ನೆರೆದ ಭಕ್ತ ಸಮೂಹ ವಿಮರ್ಶೆ ಮಾಡಿದರು. ನಂತರ ಮೈಲಾರಲಿಂಗೇಶ್ವರ ದೇವಸ್ಥಾನದ ಎದುರಿಗೆ ಗ್ರಾಮದ ಗೊರವಯ್ಯರಾದ ಮಾಲತೇಶ ಓಲೇಕಾರ ಮಂಜುನಾಥ ಭೀಮನವರ ದೇವೇಂದ್ರಪ್ಪ ಕಾಳಿ ಅಣ್ಣಯ್ಯ ಪೂಜಾರ ಶಿವುಕುಮಾರ ಸುಣಗಾರ ನಿಂಗಪ್ಪ ಕಾಳಿ ಅವರು ಕಬ್ಬಿಣದ ಸರಪಳಿಗಳನ್ನು ಹರೆಯುದರ ಮೂಲಕ ಸರಪಳಿ ಪವಾಡ ನಡೆಸಿದರು. ನಂತರ ಮಹಾಪ್ರಸಾದ ಜರುಗಿತು. ಈ ಸಂದರ್ಭದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಧರ್ಮಣ್ಣ ಕಿವುಡನವರ, ಸದಸ್ಯರಾದ ಶಿವಪ್ಪ ಸಂಜೀವಣ್ಣವರ, ಹೇಮಂತ ಮೋದಿ, ಪ್ರತೀಕ ಮೋದಿ, ಡಾ. ಶರೀಫ ಮಾಕಪ್ಪನವರ, ರುದ್ರಗೌಡ ಪಾಟೀಲ, ಮಲ್ಲಿಕಾರ್ಜುನ ಅಗಸರ, ರುದ್ರಪ್ಪ ಕಾಳಿ, ಮಂಜುನಾಥ ಪೂಜಾರ, ಮಾಲತೇಶ ಕುಲಕರ್ಣಿ, ಶಿವುಪುತ್ರಯ್ಯ ಪೂಜಾರ ಹಾಗೂ ಸುತ್ತ ಮುತ್ತಲಿನ ಗ್ರಾಮದ ಭಕ್ತಾದಿಗಳು ಇದ್ದರು.