ಸಾರಾಂಶ
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಬಾಳೆಹೊನ್ನೂರು ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶ ಹಾಗೂ ಹೋಬಳಿ ವಿವಿಧೆಡೆ ಸೋಮವಾರ ರಾತ್ರಿ ಬಳಿಕ ಪುಷ್ಯ ಮಳೆ ಅಬ್ಬರ ಹೆಚ್ಚಾಗಿದ್ದು, ಮಂಗಳವಾರ ಬೆಳಗ್ಗಿನ ವೇಳೆಗೆ ಜನಜೀವನ ಅಸ್ತವ್ಯಸ್ತಗೊಳಿಸಿದೆ.ಸೋಮವಾರ ರಾತ್ರಿ 9 ಗಂಟೆ ಬಳಿಕ ಬಿರುಸುಗೊಂಡ ಮಳೆ ಮಂಗಳವಾರ ಮುಂಜಾನೆ ವೇಳೆಗೆ ಪ್ರವಾಹ ಪರಿಸ್ಥಿತಿ ಉಂಟು ಮಾಡಿದೆ. ವಿವಿಧ ಪ್ರದೇಶಗಳು ಜಲಾವೃತಗೊಂಡಿದ್ದು, ಕುದುರೆಮುಖ-ಕಳಸ ವ್ಯಾಪ್ತಿ ರಾತ್ರಿಯಿಡಿ ಮಳೆಯಿಂದ ಒಮ್ಮಿಂದೊಮ್ಮೆಲೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಬಾಳೆಹೊನ್ನೂರಿನಿಂದ ಕಳಸ-ಹೊರನಾಡು, ಕೊಟ್ಟಿಗೆಹಾರ ಸಂಪರ್ಕ ಕಡಿತಗೊಂಡಿದ್ದು, ಮಾಗುಂಡಿ ಸಮೀಪದ ತೆಪ್ಪದಗಂಡಿ ಮುಖ್ಯರಸ್ತೆ, ಮಹಲ್ಗೋಡು ಸೇತುವೆ ಮೇಲೆ ಭದ್ರಾನದಿ ಪ್ರವಾಹ ಬಂದು ಸಂಪರ್ಕ ಕಡಿತಗೊಂಡಿದೆ.
ಬಾಳೆಹೊನ್ನೂರಿನಿಂದ ಹುಯಿಗೆರೆ ಸಂಪರ್ಕಿಸುವ ಎಲೆಕಲ್ಲು ರಸ್ತೆ ಮೇಲೆಯೂ ಭದ್ರಾನದಿ ನೀರು ಬಂದಿದ್ದು, ಸಂಚಾರ ಬಂದ್ ಆಗಿದೆ. ಹುಯಿಗೆರೆ-ಮಾಗುಂಡಿ ನಡುವಿನ ಹುಲಿಗೆಹಳ್ಳ ಹೊಳೆಯೂ ತುಂಬಿ ಹರಿದ ಪರಿಣಾಮ ಆ ರಸ್ತೆಯು ಬಂದ್ ಆಗಿದೆ. ಬಾಳೆಹೊನ್ನೂರಿನಿಂದ ಎನ್.ಆರ್.ಪುರ-ಶಿವಮೊಗ್ಗ ಸಂಪರ್ಕ ಕಲ್ಪಿಸುವ ವಾಟುಕೊಡಿಗೆ-ಸೀಕೆ ಬಳಿ ಮುಖ್ಯರಸ್ತೆಗೆ ನೀರು ಬಂದಿದ್ದು ಸಂಚಾರ ಕಡಿತಗೊಂಡಿದೆ. ಪಟ್ಟಣದ ಭದ್ರಾ ಎಸ್ಟೇಟ್ ಒಳಗಿನ ಕೂಲಿಲೈನ್‌ಗಳಿಗೆ ತೆರಳುವ ರಸ್ತೆ ಮೇಲೆಯೂ ನೀರು ಬಂದಿದ್ದು ಜನರು ಎಸ್ಟೇಟಿನಿಂದ ಹೊರ ಬರದಂತಾಗಿದೆ.ಬಿ.ಕಣಬೂರು, ಬನ್ನೂರು, ಮಾಗುಂಡಿ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 16 ಮನೆಗಳಿಗೆ ಮಂಗಳವಾರ ಮುಂಜಾನೆ ನಾಲ್ಕು ಗಂಟೆ ವೇಳೆಗೆ ಭದ್ರಾನದಿ ಪ್ರವಾಹ ನುಗ್ಗಿದ್ದು, ಮಹಲ್ಗೋಡು, ಹೊಳೆಬಾಗಿಲು, ಜಕ್ಕಣಕ್ಕಿ, ಬಾಳೆಹೊನ್ನೂರು ಪಟ್ಟಣ ಭಾಗದ ಎಲ್ಲಾ 16 ಕುಟುಂಬಸ್ಥರು ರಾತ್ರೋರಾತ್ರಿ ತಮ್ಮ ಮನೆ ಸಾಮಾನು ಸರಂಜಾಮು ಗಂಟುಮೂಟೆ ಕಟ್ಟಿಕೊಂಡು ಸಂಬಂಧಿಕರ ಮನೆ, ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಪಟ್ಟಣದ ಡೋಬಿಹಳ್ಳದ ದಡದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಕ್ಕೆ ನೀರು ನುಗ್ಗಿದ್ದು, ಅಂಗಡಿಯೊಳಗಿದ್ದ ಔಷಧಿ ಸಂಪೂರ್ಣವಾಗಿ ಪ್ರವಾಹದ ನೀರಿಗೆ ಆಹುತಿಯಾಗಿದೆ. ಅಕ್ಕಪಕ್ಕದಲ್ಲಿನ ಹೋಟೆಲ್, ಅಂಗಡಿಗೂ ನೀರು ನುಗ್ಗಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ರೋಟರಿ ವೃತ್ತದ ಸಮೀಪದಲ್ಲಿ ಖಾಸಗಿಯವರ ಜಮೀನಿನಲ್ಲಿರುವ ಮನೆ ಹಾಗೂ ಗೋಡಾನ್‌ಗೆ ನೀರು ನುಗ್ಗಿದ್ದು, ಗೋಡಾನ್‌ನಲ್ಲಿದ್ದ ₹1 ಲಕ್ಷಕ್ಕೂ ಅಧಿಕ ಮೌಲ್ಯದ ರಸಗೊಬ್ಬರದ ಮೂಟೆಗಳು ನೀರಿನಲ್ಲಿ ಕರಗಿ ಹೋಗಿದೆ. ಇಲ್ಲಿನ ಮನೆಯಲ್ಲಿದ್ದ ಜನ, ಜಾನುವಾರುಗಳನ್ನು ಪ್ರವಾಹದಿಂದ ರಕ್ಷಿಸಲಾಗಿದೆ. ಇಲ್ಲಿಗೆ ಸಮೀಪದಲ್ಲಿಯೇ ಭದ್ರಾನದಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗೆ ತಂದಿದ್ದ ಜನರೇಟರ್ ಸೇರಿ ವಿವಿಧ ಪರಿಕರಗಳು ನೀರಿನಲ್ಲಿ ಮುಳುಗಿದ್ದವು.ಪಟ್ಟಣದ ಮೀನು ಮಾರ್ಕೆಟ್ ಸಮೀಪದಲ್ಲಿರುವ ಸಂತೆ ಮಾರುಕಟ್ಟೆ ಸಂಕೀರ್ಣವು ಮುಕ್ಕಾಲು ಭಾಗ ಮುಳುಗಿದ್ದು, ಮೇಲ್ಚಾವಣಿ ಮಾತ್ರ ಗೋಚರವಾಗುತಿತ್ತು. ಪ್ರವಾಹದ ಅಬ್ಬರಕ್ಕೆ ಬಾಳೆಹೊನ್ನೂರು ಪಟ್ಟಣ, ಬನ್ನೂರು, ಮಾಗುಂಡಿ, ಮಹಲ್ಗೋಡು, ಜಕ್ಕಣಕ್ಕಿ, ಬೈರೇಗುಡ್ಡ ಮುಂತಾದ ಕಡೆಗಳಲ್ಲಿ ನೂರಾರು ಎಕರೆ ಅಡಕೆ, ಕಾಫಿ ತೋಟ, ಗದ್ದೆಗಳು ನೀರಿನಿಂದ ಜಲಾವೃತವಾಗಿತ್ತು.
ನದಿ ನೀರು ಹೆಚ್ಚಾಗಿರುವುದನ್ನು ಹಾಗೂ ಪ್ರವಾಹ ಪೀಡಿತ ಪ್ರದೇಶಗಳನ್ನು ಜನರು ತಂಡೋಪತಂಡವಾಗಿ ಬಂದು ವೀಕ್ಷಿಸುವುದು ಕಂಡುಬಂತು. ಭದ್ರಾನದಿಯಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ನೀರಿನ ಹರಿವು 10 ಮೀಟರ್ ಎತ್ತರದಲ್ಲಿದ್ದು, ಇದು ಈ ವರ್ಷದಲ್ಲಿ ದಾಖಲೆಯ ಹರಿವಾಗಿದೆ ಎಂದು ನೀರಿನ ಮಾಪಕಕಾರ ಸಂದೇಶ್ ತಿಳಿಸಿದ್ದಾರೆ.ಇಲ್ಲಿನ ಮೆಸ್ಕಾಂ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾದ ಪರಿಣಾಮ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಗುಂಡಿ ಫೀಡರ್‌ನ ಮಾಗುಂಡಿ ಗ್ರಾಪಂ ಹಾಗೂ ಬನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ, ಗಡಿಗೇಶ್ವರ ಫೀಡರ್‌ನ ಬಾಳೆ ಗ್ರಾಪಂ, ಆಡುವಳ್ಳಿ ಗ್ರಾಪಂ, ಬಿ.ಕಣಬೂರು ಗ್ರಾಪಂ ಹಾಗೂ ಕಾನೂರು ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಮೆಸ್ಕಾಂ ಜೆಇ ಗಣೇಶ್ ತಿಳಿಸಿದ್ದಾರೆ.
ಸಮೀಪದ ಖಾಂಡ್ಯ ಹೋಬಳಿಯಲ್ಲಿಯೂ ಮಳೆಯ ಅಬ್ಬರ ಮುಂದುವರೆದಿದ್ದು, ಇತಿಹಾಸ ಪ್ರಸಿದ್ಧ ಖಾಂಡ್ಯ ಮಾರ್ಕಾಂಡೇಶ್ವರ ಸಮೀಪದಲ್ಲಿ ಹರಿಯುವ ಭದ್ರಾನದಿ ಅಪಾಯದಂಚಿನಲ್ಲಿ ಹರಿಯುತ್ತಿದೆ. ದೇವಸ್ಥಾನದ ಸಮೀಪದ ನದಿ ದಂಡೆಯಲ್ಲಿನ ಅಸ್ಥಿವಿಸರ್ಜನೆ ಮಂಟಪ ನೀರಿನಿಂದ ಜಲಾವೃತವಾಗಿದೆ. ಭದ್ರಾನದಿ ಸನಿಹದ ಆನೆಬಿದ್ದ ಹಳ್ಳವು ಅಪಾಯಮಟ್ಟ ಮೀರಿ ಹರಿಯುತ್ತಿದೆ.