ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಜನರು ಏನೆಲ್ಲಾ ಗೌರವ, ಅಧಿಕಾರ ಕೊಡಬೇಕಿತ್ತೋ ಎಲ್ಲವನ್ನೂ ಕೊಟ್ಟಾಗಿದೆ. ಕಾಂಗ್ರೆಸ್ ಪಕ್ಷದ ಸ್ಥಳೀಯ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು)ರಿಗೆ ರಾಜಕೀಯವಾಗಿ ಶಕ್ತಿ ಕೊಟ್ಟರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ಮಣ್ಣಹಳ್ಳಿ, ಚಿಣ್ಯ, ಹೊಣಕೆರೆ, ಬ್ರಹ್ಮದೇವರಹಳ್ಳಿ, ಕಾಂತಾಪುರ ಹಾಗೂ ಬೋಗಾದಿ ಗ್ರಾಪಂ ಕೇಂದ್ರ ಸ್ಥಾನಗಳಲ್ಲಿ ಸೋಮವಾರ ತಡ ರಾತ್ರಿವರೆಗೂ ಪ್ರಚಾರ ನಡೆಸಿ ಮಾತನಾಡಿ, ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆದ್ದರೆ ಕೇವಲ ಸಂಸದರಾಗಬಹುದು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ ಸರ್ಕಾರದ ಜೊತೆಗೂಡಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು ಎಂದರು.
ಕುಮಾರಸ್ವಾಮಿ ದೊಡ್ಡವರು. ಅವರು ರಾಜ್ಯ ನಾಯಕರಾಗಿರುವುದರಿಂದ ಜನಸಾಮಾನ್ಯರೊಂದಿಗೆ ಬೆರೆಯಲು ಕಷ್ಟವಾಗುತ್ತದೆ. ಅದೇ ಸ್ಟಾರ್ ಚಂದ್ರು ಗೆದ್ದರೆ ಪ್ರತಿನಿತ್ಯ ಜನಸಾಮಾನ್ಯರ ಕೈಗೆ ಸಿಗುತ್ತಾರೆ ಎಂದರು.ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ಇದೇ ತಾಲೂಕಿನ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿರುವ ನನಗೆ ಜಿಲ್ಲೆಯ ರೈತರ ಕಷ್ಟ ಏನೆಂಬುದು ಗೊತ್ತಿದೆ. ಚಿಕ್ಕ ವಯಸ್ಸಿನಲ್ಲಿ ನಾನೂ ಸಹ ಜಮೀನು ಉಳುಮೆ ಮಾಡಿದ್ದೇನೆ. ನಾನೂ ಕೂಡ ಒಬ್ಬ ರೈತ. ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಒದಗಿಸಲು ದುಡಿಯುವ ಕೈಗಳಿಗೆ ಕೆಲಸುವ ಕನಸು ನನ್ನದಾಗಿದೆ. ಚುನಾವಣೆಯಲ್ಲಿ ನನಗೆ ಆಶೀರ್ವದಿಸಬೇಕೆಂದು ಮತಯಾಚಿಸಿದರು.
ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ ಮಾತನಾಡಿದರು. ಬ್ರಹ್ಮದೇವರಹಳ್ಳಿ ಗ್ರಾಪಂ ವ್ಯಾಪ್ತಿಯ ಮಂಜುನಾಥಗೌಡ, ಡಿ.ನಾಗೇಶ್, ರವಿಕುಮಾರ್, ದೇವರಾಜು, ಪ್ರಕಾಶ್, ಹೊಸೂರು ಶಶಿ ಸೇರಿದಂತೆ ಹಲವು ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.ತಾಲೂಕಿನ ಚಿಣ್ಯ ವೃತ್ತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು, ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಮಾಜಿ ಎಂಎಲ್ಸಿ ಅಪ್ಪಾಜಿಗೌಡ ಅವರಿಗೆ ಕಾರ್ಯಕರ್ತರು ಬೃಹತ್ ಗಾತ್ರದ ಕಿತ್ತಳೆ ಹಣ್ಣಿನ ಹಾರ, ಹೊಣಕೆರೆ, ಬ್ರಹ್ಮದೇವರಹಳ್ಳಿ ಹಾಗೂ ಬೋಗಾದಿಯಲ್ಲಿ ದೊಡ್ಡ ಗಾತ್ರದ ಗುಲಾಬಿ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಎನ್.ಲಕ್ಷ್ಮೀಕಾಂತ್, ಸುನಿಲ್‌ಲಕ್ಷ್ಮೀಕಾಂತ್, ಚಲುವರಾಯಸ್ವಾಮಿ ಪುತ್ರ ಸಚ್ಚಿನ್, ಚಿಣ್ಯ ವೆಂಕಟೇಶ್, ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ಆರ್.ಕೃಷ್ಣೇಗೌಡ, ಹೊಣಕೆರೆ ಬಸವರಾಜು, ಪ್ರಭಣ್ಣ, ಹರೀಶ್, ಕೊಣನೂರು ಹನುಮಂತು, ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ, ಹಂದೇನಹಳ್ಳಿ ಮಹದೇವ ಇದ್ದರು.