ಕ್ಷೇತ್ರದ ಜನ ಎಂದೂ ನಮ್ಮ ಕೈ ಬಿಡುವುದಿಲ್ಲ: ಸುರೇಶ್

| Published : Apr 23 2024, 12:52 AM IST

ಸಾರಾಂಶ

ಕನಕಪುರ: ದೇವೇಗೌಡರ ಕುಟುಂಬದೊಂದಿಗೆ ಹಲವು ಚುನಾವಣೆಗಳಲ್ಲಿ ಹೋರಾಡಿಕೊಂಡು ಬಂದಿರುವ ನಮಗೆ ಕ್ಷೇತ್ರದ ಜನ ಎಂದೂ ಕೈ ಬಿಡುವುದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಕನಕಪುರ: ದೇವೇಗೌಡರ ಕುಟುಂಬದೊಂದಿಗೆ ಹಲವು ಚುನಾವಣೆಗಳಲ್ಲಿ ಹೋರಾಡಿಕೊಂಡು ಬಂದಿರುವ ನಮಗೆ ಕ್ಷೇತ್ರದ ಜನ ಎಂದೂ ಕೈ ಬಿಡುವುದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಕಸಬಾ ಹೋಬಳಿಯ ತುಂಗಣಿ, ಚಿಕ್ಕಮುದವಾಡಿ, ಕುರುಬರ ಹಳ್ಳಿ, ಸಾತನೂರು ಹೋಬಳಿಯ ಕಬ್ಬಾಳು, ಕಾಡಳ್ಳಿ, ಸಾತನೂರು ಉಯ್ಯಂಬಳ್ಳಿ, ಕೋಡಿಹಳ್ಳಿ ಹೋಬಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಮನಗರದಲ್ಲಿ ನಮ್ಮ ವಿರುದ್ಧ ದೇವೇಗೌಡರು, ಕುಮಾರಸ್ವಾಮಿ, ಅನಿತಕ್ಕ, ನಿಖಿಲ್ ಕುಮಾರಸ್ವಾಮಿ ಬಳಿಕ ಈಗ ಅವರ ಭಾವನವರನ್ನು ಕರೆದುಕೊಂಡು ಬಂದು ಬಿಜೆಪಿ ಚಿಹ್ನೆಯಡಿ ಚುನಾವಣೆಗೆ ನಿಲ್ಲಿಸಿರುವುದು ನೋಡಿದರೆ ಅವರಿಗೆ ಅವರ ಪಕ್ಷದ ಮೇಲೆಯೇ ನಂಬಿಕೆ ಇಲ್ಲ ಎಂಬುದು ತಿಳಿಯುತ್ತದೆ ಎಂದರು.

ಕನಕಪುರ ತಾಲೂಕು ಏನಾದರೂ ಅಭಿವೃದ್ಧಿ ಕಂಡಿದೆ ಎಂದರೆ ಅದಕ್ಕೆ ಕಾಂಗ್ರೆಸ್ ಪಕ್ಷ ಹಾಗೂ ನಾನು ಮತ್ತು ಡಿ.ಕೆ.ಶಿವಕುಮಾರ್ ಹಗಲಿರುಳು ಶ್ರಮಿಸುತ್ತಿರುವುದೇ ಕಾರಣ. ನಮ್ಮ ವಿರೋಧಿಗಳು ನಮ್ಮ ಬಗ್ಗೆ ಏನೇ ಅಪಪ್ರಚಾರ ನಡೆಸಿದರೂ ತಾಲೂಕಿನ ಜನತೆ ನಮ್ಮ ಮೇಲೆ ನಂಬಿಕೆ, ವಿಶ್ವಾಸವಿಟ್ಟಿದ್ದು ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ನೀಡಲಿದ್ದಾರೆ ಎಂದರು.

ತಾಲೂಕಿನ ಮಗನಾಗಿ, ನಿಮ್ಮ ಸಹೋದರ, ಸ್ನೇಹಿತನಾಗಿ ತಾಲೂಕಿನ ಅಭಿವೃದ್ಧಿಗೆ ಪಕ್ಷಭೇದ ಮರೆತು ಕೆಲಸ ಮಾಡಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿ ಕೆಲಸಮಾಡಿಕೊಂಡು ಬಂದಿದ್ದೇನೆ, ನಿಮ್ಮೆಲ್ಲರ ಸಹಕಾರ, ಆಶೀರ್ವಾದದಿಂದ ಡಿ.ಕೆ.ಶಿವಕುಮಾರ್ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದು ಅವರನ್ನು ಏನಾದರೂ ಮಾಡಿ ಕಟ್ಟಿಹಾಕ ಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿವೆ. ನಿಮ್ಮ ಆಶೀರ್ವಾದ ಇರುವವರೆಗೂ ಯಾರೇ ಬಂದರೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ ಎಂದರು.

ಕೆಲವರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಮನಗರ ಜಿಲ್ಲೆ ನೆನಪಾಗುತ್ತದೆ. ರಾಮನಗರ ಜಿಲ್ಲೆಗೆ ನೆಂಟರಂತೆ ಬಂದು ಹೋಗುವವರು ನಿಮ್ಮ ಕಷ್ಟ ಸುಖಕ್ಕೆ ಆಗಿದ್ದಾರೆಯೇ? ನಿಮ್ಮ ಕಷ್ಟ ಸುಖಕ್ಕೆ ಹೆಗಲುಕೊಟ್ಟು ಯಾರಾದರೂ ನಿಂತಿದ್ದರೆ ಅದು ನಾನು ಮತ್ತು ಡಿ.ಕೆ.ಶಿವಕುಮಾರ್ ಮಾತ್ರ. ಕನಕಪುರದಲ್ಲಿ ದೊಡ್ಡ ಅನ್ಯಾಯ ನಡೆಯುತ್ತಿದೆ, ಉಸಿರುಗಟ್ಟುವ ವಾತಾವರಣ ನಿರ್ಮಿಸಿದ್ದೇವೆ ಎಂಬ ರೀತಿಯಲ್ಲಿ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ನವರು ಕನಕಪುರವನ್ನು ಯಾವ ರೀತಿ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆಂಬುದನ್ನು ಇಲ್ಲಿನ ಜನ ಆಲೋಚಿಸಬೇಕು, ನಿಮ್ಮ ಮನೆಯ ಮಗ ಡಿ.ಕೆ.ಶಿವಕುಮಾರ್ ಅವರ ಏಳಿಗೆ ಹಾಗೂ ಈ ಕ್ಷೇತ್ರದ ಅಭಿವೃದ್ಧಿ ಸಹಿಸಲಾಗದೆ ಈ ರೀತಿ ಮಾಡುತ್ತಿದ್ದು ನಾವು ಯಾರಿಗೆ ಯಾವ ತೊಂದರೆ ನೀಡಿದ್ದೇವೆ ಎಂದು ಇಲ್ಲಿರುವ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರೆ ರಾಜ್ಯದ ಜನತೆಗೆ ಹೇಳಲಿ ಎಂದರು.

ತಮ್ಮ ರಾಜಕೀಯ ಹಿತಾಸಕ್ತಿಗಾಗಿ ತಾಲೂಕನ್ನು ಕೆಟ್ಟದಾಗಿ ಬಿಂಬಿಸುತ್ತಿರುವುದನ್ನು ನೀವೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಿದೆ. ತಾಲೂಕಿನ ಅಭಿವೃದ್ಧಿಗೆ ನಾವು ಅನೇಕ ಕಾರ್ಯಕ್ರಮ ಕೊಟ್ಟಿದ್ದೇವೆ, ನಮ್ಮ ಮೆಡಿಕಲ್ ಕಾಲೇಜು ಕಿತ್ತುಕೊಂಡು ಹೋದ ಹಾಗೂ ಮೇಕೆದಾಟು ಯೋಜನೆಗೆ ಅನುಮತಿ ನೀಡದ ಬಿಜೆಪಿಯವರು ಇಂದು ಯಾವ ನೈತಿಕತೆಯಿಂದ ನಿಮ್ಮ ಮತ ಕೇಳುತ್ತಿದ್ದಾರೆ. ತಾಲೂಕಿನ ಅಭಿವೃದ್ಧಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕೊಡುಗೆ ಏನು? ಡಿ.ಕೆ. ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ತರಲು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ. ನಮ್ಮ ಯೋಜನೆ ಸರಿಯಾಗಿಲ್ಲವಾದರೆ ಅವರ ಕಾರ್ಯಕರ್ತರಿಗೆ ಈ ಯೋಜನೆ ಲಾಭ ಪಡೆಯದಂತೆ ಹೇಳಲಿ ಎಂದು ಸವಾಲ್ ಹಾಕಿದ ಸುರೇಶ್‌, ನಾವು ಗ್ಯಾರಂಟಿ ಕೊಟ್ಟು ಮಹಿಳೆಯರನ್ನು ದಾರಿ ತಪ್ಪಿಸಿದ್ದರೆ ಈ ಗ್ಯಾರಂಟಿ ಪ್ರಯೋಜನವನ್ನು ಪಡೆಯಬೇಡಿ ಎಂದು ಅವರು ಕರೆ ನೀಡಲಿ, ಅವರಿಗೆ ಗ್ಯಾರಂಟಿ ಯೋಜನೆಗಳು ಬಡವರು, ರೈತರಿಗೆ ನೆರವಾಗುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಪ್ರಧಾನ ಮಂತ್ರಿಗಳು ಉತ್ತರ ಭಾರತದಲ್ಲಿ ನನ್ನನ್ನ ಸೋಲಿಸುವಂತೆ ಕರೆ ನೀಡುತ್ತಿದ್ದಾರೆ.

ಕೊರೋನಾ ಸಂದರ್ಭದಲ್ಲಿ ನಿಮಗೆ ಐಸಿಯು ಬೆಡ್ ಬೇಕಾ? ಔಷಧಿ ಬೇಕಾ? ಲಸಿಕೆ ಬೇಕಾ? ಊಟ ಬೇಕಾ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಯಾರಾದರೂ ಒಬ್ಬ ನಾಯಕ ನಿಮ್ಮನ್ನು ಕೇಳಿದ್ದಾರಾ? ನಾನು ನನ್ನ ಜೀವ ಒತ್ತೆ ಇಟ್ಟು ಕಷ್ಟ ಕಾಲದಲ್ಲಿ ಕೆಲಸ ಮಾಡಿದ್ದೇನೆ. ನಾನು ಮಾಡಿರುವ ಕೆಲಸಕ್ಕೆ ನಾನು ಕೂಲಿ ಕೇಳುತ್ತಿದ್ದೇನೆ ಎಂದರು.

ಕನಕಪುರ ತಾಲೂಕು ಇಡೀ ದೇಶವೇ ತಿರುಗಿ ನೋಡುವಂತಹ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಈ ಭಾಗದಲ್ಲಿ ವೈದ್ಯಕೀಯ ಆಸ್ಪತ್ರೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ನೀವು ಡಿ.ಕೆ. ಶಿವಕುಮಾರ್ ಅವರಿಗೆ ಶಕ್ತಿ ನೀಡುವ ಮೂಲಕ ವಿರೋಧಿಗಳ ಷಡ್ಯಂತ್ರಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ. ನಿಮ್ಮೆಲ್ಲರ ಬೆಂಬಲದಿಂದ ಮುಂದಿನ ದಿನಗಳಲ್ಲಿ ಅತ್ಯಂತ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕನಸನ್ನು ಕಂಡಿದ್ದು ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಮನವಿ ಮಾಡಿದರು.

ಈ ವೇಳೆ ಆರ್‌ಇಎಸ್ ಸಂಸ್ಥೆಯ ಅಧ್ಯಕ್ಷ ಎಚ್.ಕೆ.ಶ್ರೀಕಂಠು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯ್ ದೇವ್, ಜಿಪಂ ಮಾಜಿ ಅಧ್ಯಕ್ಷೆ ಉಷಾರವಿ, ನಗರಸಭಾ ಮಾಜಿ ಅಧ್ಯಕ್ಷ ಕೆ.ಎನ್.ದಿಲೀಪ್, ಕೆ.ಟಿ.ಕಿರಣ್, ಮುಖಂಡರಾದ ರಾಯಸಂದ್ರ ರವಿ, ತಾಪಂ ಮಾಜಿ ಅಧ್ಯಕ್ಷ ಹೊಸಕೋಟೆ ಪುರುಷೋತ್ತಮ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಸಿಲ್ಕ್ ರವಿ, ನಾಚಿ ನಾಗರಾಜು, ಜಿಪಂ, ತಾಪಂ ಮಾಜಿ ಸದಸ್ಯರು, ನಗರಸಭಾ ಸದಸ್ಯರು ಮತ್ತು ಯುವ ಕಾಂಗ್ರೆಸ್ ಮುಖಂಡರು ಮತಯಾಚನೆಯಲ್ಲಿ ಭಾಗಿಯಾಗಿದ್ದರು.ಕೆ ಕೆ ಪಿ ಸುದ್ದಿ 02:ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್ ಕನಕಪುರ ತಾಲೂಕಿನಲ್ಲಿ ಚುನಾವಣಾ ಪ್ರಚಾರ ಮಾಡಿದರು.