ಮಣ್ಣಿನ ಮಗನ ಚಿನ್ನದ ಸಾಧನೆಗೆ ಮನೆ ಮಂದಿಯೇ ಸ್ಫೂರ್ತಿ!

| Published : May 26 2024, 01:31 AM IST

ಮಣ್ಣಿನ ಮಗನ ಚಿನ್ನದ ಸಾಧನೆಗೆ ಮನೆ ಮಂದಿಯೇ ಸ್ಫೂರ್ತಿ!
Share this Article
  • FB
  • TW
  • Linkdin
  • Email

ಸಾರಾಂಶ

ಹೈಕಶಿ ಸಂಸ್ಥೆಯಡಿಯಲ್ಲಿರುವ ಈ ಭಾಗದ ಅತ್ಯಂತ ಪ್ರತಿಷ್ಠಿತ ಪೂಜ್ಯ ದೊಡ್ಡಪ್ಪ ಅಪ್ಪ (ಪಿಡಿಎ) ಇಂಜಿನಿಯರಿಂಗ್‌ ಕಾಲೇಜಿನ 12ನೇ ಪದವಿ ಪ್ರದಾನ ಸಮಾರಂಭ

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಮನಿಯೊಳ್ಗ ಅಪ್ಪ, ಅಣ್ಣ, ಅಮ್ಮ... ಯಾರೂ ಓದಿ ಬರ್ದವರಲ್ಲ, ಕುಟುಂಬದೊಳಗಿನ ಈ ವಾತಾವರಣ ಸವಾಲಾಗಿ ಸ್ವೀಕರಿಸಿದೆ, ಅದನ್ನೇ ಸ್ಫೂರ್ತಿಯಾಗಿ ತಗೊಂಡೆ. ನಮ್ಮ ಪರಿವಾರದಲ್ಲಿ ನಾನೇಕೆ ಉನ್ನತ ಶಿಕ್ಷಣ ಹೊಂದಬಾರದು ಅಂತ ನಾನೇ ಪ್ರಶ್ನೆ ಕೇಳ್ಕೊಂಡು ಓದಿಗೆ ಮುಂದಾದೆ, ಅಂದಿನ ಸಂಕಲ್ಪ ನನ್ನನ್ನಿಂದು ಚಿನ್ನದ ಸಾಧನವರೆಗೆ ತಂದು ನಿಲ್ಲಿಸಿದೆ ಎಂದು ಹೇಳುವಾಗ ಇಂಜಿನಿಯರಿಂಗ್‌ (ಇಲೆಕ್ಟ್ರಾನಿಕ್ಸ್‌ ಆಂಡ್‌ ಕಮ್ಯೂನಿಕೇಷನ್‌) ಪದವೀಧರ ರವಿಕುಮಾರ ಉಕಲಿ ಭಾವುಕನಾದ.

ಹೈಕಶಿ ಸಂಸ್ಥೆಯಡಿಯಲ್ಲಿರುವ ಈ ಭಾಗದ ಅತ್ಯಂತ ಪ್ರತಿಷ್ಠಿತ ಪೂಜ್ಯ ದೊಡ್ಡಪ್ಪ ಅಪ್ಪ (ಪಿಡಿಎ) ಇಂಜಿನಿಯರಿಂಗ್‌ ಕಾಲೇಜಿನ 12ನೇ ಪದವಿ ಪ್ರದಾನ ಸಮಾರಂಭದಲ್ಲಿ ಉಕಲಿ ರೈತ ಚಂದ್ರಕಾಂತ ಇವರ ಪುತ್ರ ರವಿಕುಮಾರ್‌ 2 ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಸರ್ವರ ಗಮನ ಸೆಳೆದ.

ಗಾಂಧಿ ಟೋಪಿಧಾರಿಯಾಗಿ ಪದವಿ ಪ್ರದಾನ ಸಮಾರಂಭದಲ್ಲಿ ಖುಷಿಯಲ್ಲಿ ಆಚೀಚೆ ಓಡಾಡಿಕೊಂಡಿದ್ದ ರೈತ ಚಂದ್ರಕಾಂತ ಮಗನ ಚಿನ್ನದ ಸಾಧನೆಗೆ ಸಾಕ್ಷಿಯಾಗಿ ಆನಂದಭಾಷ್ಪಗಳನ್ನು ಹಾಕಿದ. ಮಗನ ಸಾಧನೆಗೆ ಆತನ ಕಂಗಳಲ್ಲಿ ಸಂತಸ ಮನೆ ಮಾಡಿತ್ತು.

ಮನೆ ಮಂದಿಯೇ ನನ್ನ ಸಾಧನೆಗೆ ಪ್ರೇರಣೆ ಎಂದು ತಾನು ತೊಟ್ಟಿದ್ದ ಘಟಿಕೋತ್ಸವ ಗೌನ್‌, ವಿಶಿಷ್ಟ ಬಣ್ಣ, ಆಕಾರದ ಟೋಪಿ, ಚಿನ್ನದ ಪದಕಗಳನ್ನ್ನೆಲ್ಲ ತೆಗೆದು ಅವುಗಳನ್ನೆಲ್ಲ ತನ್ನ ತಂದೆ ಗೆ ತೊಡಿಸಿ ಇದಕ್ಕೆಲ್ಲ ಇವರೇ ಕಾರಣವೆಂದು ರವಿಕುಮಾರ್‌ ಸಂಭ್ರಮಿಸಿದಾಗ ಇದನ್ನು ಕಂಡವರೆಲ್ಲರು ಕ್ಷಣಕಾಲ ಭಾವುಕರಾದರು.

ತಂದೆ 4ನೇ ಇಯತ್ತೆ, ಮಗ ಬಿಇ ಪದವೀಧರ:

ತಮ್ಮ ಮಗ ರವಿಕುಮಾರ್‌ ಇಂಜಿನಿಯರಿಂಗ್‌ ಓದಿರುವ ಬಗ್ಗೆ ಒಳಗೊಳಗೆ ಖುಷಿಯಲ್ಲಿದ್ದ ರೈತ ಚಂದ್ರಕಾಂತ ‘ಕನ್ನಡಪ್ರಭ’ ಜೊತೆ ಮಾತನಾಡುತ್ತ ನಾನಂತೂ ಸಹಿ ಮಾಡ್ಲಿಕ್ಕಿ ಬರ್ಲಿ ಅಂತ 4ನೇ ಇಯತ್ತಿ ವರೆಗೂ ಓದಿದವ. ನನಗೆ ಸರಿಯಾಗಿ ಅ, ಆ, ಇ, ಈ... ಕೂಡಾ ಬರೋದಿಲ್ಲ. ಹೆಸರ ಬರಿತೀನಷ್ಟೆ. ಈಗ ಮನ್ಯಾಗ ಮಗ ರವಿ ಓದಿ ಶ್ಯಾಣ್ಯಾ ಆಗ್ಯಾನ. ಖುಷಿ ಆಗ್ಯದ ಎಂದು ಮಗನ ಸಾಧನೆಗೆ ಸಂತಸಪಟ್ಟ.

ಮೂಲತಃ ಅಫಜಲ್ಪುರ ತಾಲೂಕಿನ ಮಾಶಾಳದವರಾದ ಚಂದ್ರಕಾಂತ ಪಾರಗೊಂಡ ಇವರು ಇದೀಗ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕಲಿಯಲ್ಲಿ ನೆಲೆಸಿದ್ದಾರೆ. ಕನ್ನಡ ಮೀಡಿಯಂ ಶಾಲೆಯಲ್ಲಿ ಹೈಸ್ಕೂಲ್‌ ವರೆಗೂ ಓದಿದ್ದ ರವಿಕುಮಾರ್‌ ಮುಂದೆ ಪಿಯುಸಿ ವಿಜ್ಞಾನದಲ್ಲಿ ಓದಿ ಇಂಜಿನಿಯರಿಂಗ್‌ ಕಲಿಯಲು ಕಲಬುರಗಿಗೆ ಬಂದಾತ. ಇಲ್ಲೇ ಸಾಧನೆ ಮಾಡುವ ಮೂಲಕ ರೈತನ ಮಗನಾಗಿ ಸರ್ವರ ಗಮನ ಸೆಳೆದಿರುವ ರವಿಕುಮಾರ್‌ ಉಕಲಿ ಸದ್ಯ ಪುಣೆಯಲ್ಲಿ ಇಂಜಿನಿಯರ್‌ ಆಗಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾನೆ.

ಚಿನ್ನದ ಹುಡುಗಿಗೆ ಪ್ರೊಫೆಸರ್‌ ಆಗುವಾಸೆ

ಕಲಬುರಗಿ ಮೂಲದ ಶಿವಾನಿ ಶರಣಪ್ಪ ಅವರಾದ್‌ ಇವಳು ಕಂಪ್ಯೂಟರ್‌ ಸೈನ್ಸ್‌ನಲ್ಲಿ 7 ಚಿನ್ನದ ಪದಕ ಗಿಟ್ಟಿಸಿಕೊಂಡು ಇಡೀ ಕಾಲೇಜಿಗೆ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದವಳು. ಇವಳೂ ಕೂಡಾ ಕನ್ನಡಪ್ರಭ ಜೊತೆ ಮಾತನಾಡುತ್ತ ಸದ್ಯ ವಿಟಿಯೂನಲ್ಲಿ ಎಂಟೆಕ್‌ ಓದುತ್ತಿರೋದಾಗಿ ಹೇಳಿದಳಲ್ಲದೆ ಮುಂದೆ ಪ್ರೊಫೆಸರ್‌ ಆಗಿ ಬೋಧನೆಯಲ್ಲಿ ಸಾಧನೆ ಮಾಡುವ ತನ್ನ ಮನದಾಳದ ಬಯಕೆ ಹೊರಹಾಕಿದಳು. ಇವಳ ತಂದೆ ಶರಣಬಸಪ್ಪ ಅವರಾದ ಇವರು ಪಿಡಿಎ ಕಾಲೇಜಿನಲ್ಲಿಯೇ ಪ್ರಾಧ್ಯಾಪಕರಾಗಿ ಸೆವೆಯಲ್ಲಿದ್ದಾರೆ.

ಚಿನ್ನದ ಪದಕ ವಿಜೇತರಿವರು

2022-23ನೇ ಶೈಕ್ಷಣಿಕ ಸಾಲಿನಲ್ಲಿ ವಿವಿಧ ವಿಭಾಗಗಳ 24 ವಿದ್ಯಾರ್ಥಿಗಳು 38 ಚಿನ್ನದ ಪದಗಳನ್ನು ಹಂಚಿಕೊಂಡಿದ್ದಾರೆ. 7 ಚಿನ್ನದ ಪದಕ ಬಾಚಿಕೊಂಡಿರುವ ಶಿವಾನಿ ಔರಾದ್‌, 6 ಚಿನ್ನದ ಪದಕಗಳ ಒಡತಿ ರೇಣುಕಾ, 2 ಚಿನ್ನದ ಪದಕಗಳ ಒಡೆಯ ರವಿಕುಮಾರ್‌ ಸೇರಿದಂತೆ ಪಿಡಿಎ ಕಾಲೇಜಿನ ಸಿವಿಲ್‌ ಇಂಜಿನಿಯರಿಂಗ್‌ನ ಆಕಾಶ ಮಿಸ್ಕೀನ್‌, ಮೆಕ್ಯಾನಿಕಲ್‌ ವಿಭಾಗದ ಮಹಾಂತೇಶ,, ಇನ್‌ಫಾರ್ಮೇಷನ್‌ ವಿಭಾಗದ ಸ್ಮಿತಾ ಬಸವರಾಜ, ಮೊಹ್ಮದ್‌ ಅಝೀಮುದ್ದೀನ್‌, ಭರತ ಕುಮಾರ್‌, ಸಾದೀಕ್‌, ಲಕ್ಷ್ಮೀ ಈರಣ್ಣ ಕೊತ್ತಲಗಿ, ಲಕ್ಷ್ಮೀ ಸಂಗಶೆಟ್ಟಿ, ಅನುಜಾ ರಂಗದಾಳ್‌, ಮೊಹ್ಮದ್‌ ಮುಸೈದ್‌ ಅಲಿ, ಐಶ್ವರ್ಯ ಪಾಟೀಲ್‌, ಸಯೀದಾ ನವೀನ್‌, ಮೊಹಮ್ಮದ್‌ ಅಹ್ಮದ್‌, ಅಂಬಿಕಾ, ನಿಕಿತಾ, ಮೊಹ್ಮದ್‌ ತೌಸೀಫ್‌, ಶರತ್‌ ನಡುವಿನಮನಿ, ತಹಾ ನಾಝ್‌, ವಿನೋದ ಕುಮಾರ್‌, ಸೋನಾಲಿ ಬೋರ್ಕಡೆ, ಶ್ವೇತಾ ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ.