ಬಣ್ಣದೋಕುಳಿಯಲ್ಲಿ ಮಿಂದೆದ್ದ ಅವಳಿ ನಗರದ ಜನತೆ

| Published : Mar 30 2024, 12:47 AM IST

ಸಾರಾಂಶ

ಫೈಬರ್ ಹಲಗಿ, ಜಗ್ಗಲಗಿಯ ನಾದಕ್ಕೆ ಕುಣಿದು ಕುಪ್ಪಳಿಸಿ ಪರಸ್ಪರ ಬಣ್ಣ ಎರಚಿ ಹೋಳಿ ಸಂಭ್ರಮದಲ್ಲಿ ಮಗ್ನ

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಶುಕ್ರವಾರ ಸಂಪ್ರದಾಯಕ ರಂಗ ಪಂಚಮಿಯ ರಂಗಿನಾಟವನ್ನು ನಗರದ ಜನತೆ ನಾನಾ ವೇಷ ಧರಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮದಿಂದ ಆಚರಿಸಿದರು.

ಅವಳಿ ನಗರ ಸೇರಿದಂತೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹೋಳಿ ಸಂಭ್ರಮ ಜೋರಾಗಿತ್ತು. ಹೋಳಿ ಹುಣ್ಣಿಮೆಯ ದಿನದಂದು ಕಾಮರತಿಯರನ್ನು ಪ್ರತಿಷ್ಠಾಪಿಸಿ ೫ ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿದರು.

ನಗರದ ವಿವಿಧ ಮಹಿಳಾ ಸಂಘದಿಂದ ಕಾಮರತಿಗೆ ಉಡಿ ತುಂಬಿ ಇಷ್ಟಾರ್ಥ ಬೇಡಿಕೆ ಈಡೇರಿಸುವಂತೆ ಕಾಮರತಿಯರಲ್ಲಿ ಮೊರೆ ಇಟ್ಟು ಶುಕ್ರವಾರ ಬೆಳಗಿನ ಜಾವ ಕಾಮ ದಹನ ಜರುಗಿದ ನಂತರ ವಯಸ್ಸಿನ ಹಂಗು ಇಲ್ಲದೆ ಹಿರಿಯರು, ಮಕ್ಕಳು, ಯುವಕ, ಯುವತಿಯರು ಫೈಬರ್ ಹಲಗಿ, ಜಗ್ಗಲಗಿಯ ನಾದಕ್ಕೆ ಕುಣಿದು ಕುಪ್ಪಳಿಸಿ ಪರಸ್ಪರ ಬಣ್ಣ ಎರಚಿ ಹೋಳಿ ಸಂಭ್ರಮದಲ್ಲಿ ಮಗ್ನರಾಗಿದರು.

ಬಣ್ಣದಲಿ ಮಿಂದೆದ್ದ ಅವಳಿ ನಗರ:

ರಂಗಪಂಚಮಿ ಆಚರಣೆಯಲ್ಲಿ ಎಲ್ಲ ವರ್ಗದ ಯುವಕರು ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮೆರೆದು ಬಣ್ಣದೋಕಳಿಯಲ್ಲಿ ಮಿಂದೆದ್ದರು.

ಸಾಮೂಹಿಕ ಹೋಳಿ ಆಚರಣೆಯಲ್ಲಿ ಸೌಂಡ್ ಸಿಸ್ಟಮ್‌ಗೆ ಯುವಕರು, ಯುವತಿಯುರು ಪರಸ್ಪರ ಬಣ್ಣ ಎರಚಿ ಕುಣಿದು ಕುಪ್ಪಳಿಸಿದರು. ವಿಚಿತ್ರ ಮುಖವಾಡ ಧರಿಸಿ ಯುವಕರು ಬೈಕ್‌ನಲ್ಲಿ ಹಲಗಿ ಬಾರಿಸುತ್ತಾ ನಗರದಲ್ಲಿ ಸಂಚರಿಸಿದರು.

ನಗರದಲ್ಲಿ ಪ್ರತಿಷ್ಠಾಪಿಸಿದ್ದ ವಿವಿಧ ಮಂಡಳಿಯ ಕಾಮ-ರತಿಯರ ಮೂರ್ತಿಗಳನ್ನು ಜಗ್ಗಲಿಗೆ ತಂಡಗಳ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಕೆಲವೆಡೆ ರೇನ್ ಡ್ಯಾನ್ಸ್, ಇನ್ನು ಕೆಲವೆಡೆ ಹಲಗೆ ಬಾರಿಸುವ ಸ್ಪರ್ಧೆಯಲ್ಲಿ ಯುವಕರು ಪಾಲ್ಗೊಂಡು ರಂಗಪಂಚಮಿಗೆ ವಿಶೇಷ ಮೆರಗು ತಂದರು.

ಕೆಲ ಯುವಕ ಮಂಡಳಗಳ ಪದಾಧಿಕಾರಿಗಳು ಡ್ಯಾನ್ಸ್ ಗಳಿಗಾಗಿಯೇ ಸೌಂಡ್ ಸಿಸ್ಟಮ್‌ಗಳನ್ನು ಅಳವಡಿಸಿ ಪರಸ್ಪರ ಬಣ್ಣ ಎರಚಿ ಕುಣಿದು ಕುಪ್ಪಳಿಸಿದರು. ಎಲ್ಲೆಡೆಯೂ ರಂಗ ಪಂಚಮಿಯ ಸಂಭ್ರಮ ಮನೆ ಮಾಡಿತ್ತು.