ಸಾರಾಂಶ
ಧಾರವಾಡ:
ವಿದ್ಯಾಕಾಶಿಯಲ್ಲಿ ಸೋಮವಾರವೂ ಮಳೆ ಅಬ್ಬರ ಮುಂದುವರಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಾರುಕಟ್ಟೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನರು ತೀವ್ರ ತೊಂದರೆ ಅನುಭವಿಸಿದ್ದಾರೆ.ಒಂದೆರೆಡು ದಿನ ತುಸು ಬಿಸಿಲಿನ ವಾತಾವರಣ ಇದ್ದು, ಇನ್ನೇನು ಮಳೆ ಹೋಯಿತು ಎನ್ನುವಷ್ಟರಲ್ಲಿ ಸೋಮವಾರ ನಸುಕಿನಿಂದ ಜೋರಾಗಿಯೇ ಮಳೆ ಸುರಿದಿದೆ. ಸೋಮವಾರ ಮಧ್ಯಾಹ್ನ ತುಸು ಬಿಡುವ ನೀಡಿದ ಮಳೆ ಮತ್ತೆ ಸುರಿಯಿತು.
ಈಗಾಗಲೇ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಗೆ ತಗ್ಗು ಪ್ರದೇಶದ ಜನರು ಪರದಾಡುತ್ತಿದ್ದು, ಇದೀಗ ಆಗಾಗ ಮಳೆಯಾಗುತ್ತಿದ್ದು ಯಾವಾಗ ಮತ್ತೆ ಮನೆಗೆ ನೀರು ಬರುತ್ತದೆಯೋ ಎಂಬ ಆತಂಕದಲ್ಲಿದ್ದಾರೆ. ತುಸು ಮಳೆಯಾದರೂ ಧಾರವಾಡದ ಮಾರುಕಟ್ಟೆ ಪ್ರದೇಶದ ರಸ್ತೆ, ಗಟಾರು ತುಂಬಿ ಹರಿಯುತ್ತಿದ್ದು ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ.ಇನ್ನು, ಬಿಸಿಲು ಬಿತ್ತು ಹಿಂಗಾರು ಬಿತ್ತನೆ ಮಾಡಬೇಕು ಎನ್ನುವಷ್ಟರಲ್ಲಿ ಮತ್ತೆ ಮಳೆಯಾಗಿದ್ದು ರೈತರು ಹಿಂಗಾರು ಬಿತ್ತನೆಯ ನಿರೀಕ್ಷೆ ನಿಧಾನವಾಗಿ ಹುಸಿಯಾಗುತ್ತಿದೆ. ಈಗಾಗಲೇ ಬಿತ್ತನೆ ಮಾಡಿದ ರೈತರಿಗೆ ಹೆಚ್ಚು ಮಳೆಯಿಂದ ಆತಂಕ ಶುರುವಾಗಿದೆ. ಅತಿಯಾದ ಮಳೆಗೆ ಧಾರವಾಡ ತಾಲೂಕು ಕವಲಗೇರಿಯಲ್ಲಿ ಈರುಳ್ಳಿ ಬೆಳೆದ ರೈತ ನದಾಫ್ ಎಂಬುವರು ನಷ್ಟಕ್ಕೆ ಒಳಗಾಗಿದ್ದಾರೆ. ಆರು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದು ಬೆಲೆಯೂ ಚೆನ್ನಾಗಿತ್ತು. ಸುಮಾರು 400 ಕ್ವಿಂಟಲ್ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಮಳೆಯಿಂದ ಈರುಳ್ಳಿ ಹೊಲದಲ್ಲಿ ಕೊಳೆಯುತ್ತಿದೆ ಎಂದು ಕಣ್ಣೀರು ಸುರಿಸುತ್ತಿದ್ದಾನೆ.
ವಾಡಿಕೆಗಿಂತ ಹೆಚ್ಚಿನ ಮಳೆ:ಸೋಮವಾರ ವಾಡಿಕೆಯ 2.1 ಮಿಮೀ ಪೈಕಿ ಆಗಿದ್ದು 9.6 ರಷ್ಟು. ಹಾಗೆಯೇ, ಅ. 1ರಿಂದ 20ರ ವರೆಗೆ 70 ಮಿಮೀ ಪೈಕಿ ಆಗಿದ್ದು 140 ಮಿಮೀ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅತಿಯಾದ ಮಳೆಯಿಂದ ಕಲಘಟಗಿಯ ಮಡಕಿಹೊನ್ನಳ್ಳಿಯಲ್ಲಿ ಬಸವಣ್ಣೆವ್ವ ಚನ್ನಬಸಪ್ಪ ಜಾವೂರ ಎಂಬುವರ ಮನೆಯ ಗೋಡೆಯು ಸೋಮವಾರ ಕುಸಿದು ಬಿದ್ದಿದೆ. ಆದೃಷ್ಟವಶಾತ್ ಪ್ರಾಣಾಪಾಯ ಉಂಟಾಗಿಲ್ಲ. ಹಾಗೆಯೇ, ಗ್ರಾಮೀಣ ಪ್ರದೇಶದಲ್ಲಿ ಮಣ್ಣಿನ ಮನೆಗಳು ಕುಸಿಯುವ ಹಂತದಲ್ಲಿದ್ದು, ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತವು ಸೂಚಿಸಿದೆ.