ಸಾರಾಂಶ
ಬಿಸಿಲಿನ ತಾಪಕ್ಕೆ ನಲುಗಿರುವ ಪಟ್ಟಣದ ಜನತೆ ಅರವಟಿಗೆಗೆ ಮೊರೆ ಹೋಗುತ್ತಿದ್ದಾರೆ.
ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ
ಶಿವಮೂರ್ತಿ ಇಟಗಿಕನ್ನಡಪ್ರಭ ವಾರ್ತೆ ಯಲಬುರ್ಗಾ
ಮಹಾ ಶಿವರಾತ್ರಿಯಿಂದಲೇ ಪ್ರಾರಂಭಗೊಂಡಿರುವ ಬಿಸಿಲಿನ ಝಳ, ಈಗ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಹೊರತು ಕಡಿಮೆಯಾಗುತ್ತಿಲ್ಲ. ಬಿಸಿಲಿನ ತಾಪಕ್ಕೆ ನಲುಗಿರುವ ಪಟ್ಟಣದ ಜನತೆ ಅರವಟಿಗೆಗೆ ಮೊರೆ ಹೋಗುತ್ತಿದ್ದಾರೆ.ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಾಗರಿಕರು ಈ ಉರಿ ಬಿಸಿಲಿನ ತಾಪಕ್ಕೆ ಬೇಸತ್ತಿದ್ದಾರೆ. ಅಬ್ಬಬ್ಬಾ ಎಂತಾ ಬಿಸಿಲು ಐತ್ರಿ, ಮಹಾರಾತ್ರಿ ಹಬ್ಬದಲ್ಲಿ ಶಿವನ ಸ್ಮರಣೆ ಮಾಡದಿದ್ದರೂ ಈಗ ಬಿಸಿಲಿನ ತಾಪಕ್ಕೆ ಶಿವಾ ಶಿವಾ ಎನ್ನುತ್ತಿದ್ದಾರೆ. ಎಲ್ಲಿ ಕುಳಿತರೂ, ನಿಂತರೂ, ತಂಪಾದ ನೀರು ಕುಡಿದರೂ ಸಮಾಧಾನವಿಲ್ಲದಂತಾಗಿದೆ.
ಮಣ್ಣಿನ ಮಡಿಕೆಗಳತ್ತ ಮುಖ:ಬಿಸಿಲಿನ ಪ್ರಖರತೆಯಿಂದ ತಪ್ಪಿಸಿಕೊಳ್ಳಲು ಬೇಸತ್ತ ಕೆಲವರು ತಂಪು ಪಾನೀಯಗಳ ಮೊರೆ ಹೋಗಿದ್ದು, ಇನ್ನು ಅನೇಕರು ತಂಪಾದ ನೀರಿನಿಂದ ದಾಹ ಇಂಗಿಸಿಕೊಳ್ಳಲು ಬಡವರ ಫ್ರಿಜ್ ಎಂದೇ ಖ್ಯಾತಿ ಪಡೆದ ಕುಂಬಾರರು ತಯಾರಿಸಿದ ಮಣ್ಣಿನ ಮಡಿಕೆಗಳತ್ತ ಮುಖ ಮಾಡಿದ್ದಾರೆ.
ಇನ್ನೂ ರೈತರು ಕೂಡ ಬಿಸಲಿನ ತಾಪಮಾನಕ್ಕೆ ಬೇಸತ್ತು ಹೋಗಿದ್ದಾರೆ. ಬೆಳೆಗಿನ ಜಾವದಲ್ಲೇ ಹೊಲಕ್ಕೆ ಹೋಗಿ ಕೃಷಿ ಚಟುವಟಿಕೆಗಳನ್ನು ಮುಗಿಸಿಕೊಂಡು ಬಿಸಿಲೇರುವ ಮುನ್ನ ಮರಳಿ ಬರುತ್ತಿದ್ದಾರೆ. ಇನ್ನೂ ಕೆಲ ಜನರಂತೂ ಮನೆಯಿಂದ ಹೊರಗೆ ಬರುತ್ತಿಲ್ಲ. ಬಿಸಿಲಿನ ಅತಿಯಾದ ತಾಪಮಾನವಿದ್ದು, ಬೇವಿನ, ಮಾವಿನ ಮರದ ಕೆಳಗೆ ಠೀಕಾಣಿ ಹೂಡುತ್ತಿದ್ದಾರೆ.ನೀರಿನ ಸಮಸ್ಯೆ:
ಒಂದು ಕಡೆ ಬರಗಾಲ, ಇನ್ನೊಂದೆಡೆ ಏರುತ್ತಿರುವ ತಾಪಮಾನ, ಮತ್ತೊಂದೆಡೆ ಅಂತರ್ಜಲಮಟ್ಟ ಕಡಿಮೆಯಾಗಿದ್ದರಿಂದ ತಾಲೂಕಿನ ಅಲ್ಲಲ್ಲಿ ಕುಡಿಯುವ ನೀರಿನ ಉಂಟಾಗಿದ್ದು, ವಾರಕ್ಕೆ ಆಗುವಷ್ಟು ನೀರು ಸಂಗ್ರಹ ಮಾಡುವುದು ಕಷ್ಟವಾಗಿ ಪರಿಣಮಿಸಿದೆ. ಕೆಲ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿದ್ದಾರೆ.ಅರವಟಿಗೆಯೇ ವರದಾನ:
ನೀರಿನ ದಾಹ ತೀರಿಸಿಕೊಳ್ಳಲು ಪಟ್ಟಣದ ಜೆಸ್ಕಾಂ ನೌಕರರು ಹಾಗೂ ವಿದ್ಯುತ್ ಗುತ್ತಿಗೆದಾರರ ಸಂಘದ ಆಶ್ರಯದಲ್ಲಿ ಜೆಸ್ಕಾಂ ಕಚೇರಿ ಆವರಣದಲ್ಲಿ ಅರವಟಿಗೆ ತೆರೆಯಲಾಗಿದೆ. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಅನುಕೂಲ ಕಲ್ಪಿಸಲಾಗಿದೆ. ಇದು ಜನರಿಗೆ ವರದಾನವಾಗಿದೆ.