ಕಳ್ಳರ ಕಾಟಕ್ಕೆ ಬೇಸತ್ತು ಲಾಕರ್‌ ಮೊರೆಹೋದ ಜನ

| Published : Jan 26 2025, 01:33 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕಳೆದ ತಿಂಗಳಿನಿಂದ ಜಿಲ್ಲೆಯಲ್ಲಿ ಶುರುವಾಗಿರುವ ಕಳ್ಳತನ ಹಾಗೂ ದರೋಡೆ ಜನರ ನಿದ್ದೆಗೆಡಿಸಿದೆ. ಅದರಲ್ಲೂ ಮನೆ ಮಾಲೀಕನನ್ನು ಮನೆ ಮೇಲಿಂದ ನೂಕಿ ಮನೆ ಕಳ್ಳತನ ಮಾಡಿದ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕಳ್ಳರಿಂದ ಹಣ, ಚಿನ್ನಾಭರಣ ಸೇರಿದಂತೆ ಸಂಪತ್ತು ರಕ್ಷಿಸಿಕೊಳ್ಳಲು ಜನಸಾಮಾನ್ಯರು ಇದೀಗ ಬ್ಯಾಂಕ್‌ ಲಾಕರ್‌ಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಬ್ಯಾಂಕ್‌ಗಳಲ್ಲಿ ಲಾಕರ್‌ಗಳು ಕೂಡ ಭರ್ತಿಯಾಗಿದ್ದು, ಜನತೆ ದುಂಬಾಲು ಬೀಳುತ್ತಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ ತಿಂಗಳಿನಿಂದ ಜಿಲ್ಲೆಯಲ್ಲಿ ಶುರುವಾಗಿರುವ ಕಳ್ಳತನ ಹಾಗೂ ದರೋಡೆ ಜನರ ನಿದ್ದೆಗೆಡಿಸಿದೆ. ಅದರಲ್ಲೂ ಮನೆ ಮಾಲೀಕನನ್ನು ಮನೆ ಮೇಲಿಂದ ನೂಕಿ ಮನೆ ಕಳ್ಳತನ ಮಾಡಿದ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕಳ್ಳರಿಂದ ಹಣ, ಚಿನ್ನಾಭರಣ ಸೇರಿದಂತೆ ಸಂಪತ್ತು ರಕ್ಷಿಸಿಕೊಳ್ಳಲು ಜನಸಾಮಾನ್ಯರು ಇದೀಗ ಬ್ಯಾಂಕ್‌ ಲಾಕರ್‌ಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಬ್ಯಾಂಕ್‌ಗಳಲ್ಲಿ ಲಾಕರ್‌ಗಳು ಕೂಡ ಭರ್ತಿಯಾಗಿದ್ದು, ಜನತೆ ದುಂಬಾಲು ಬೀಳುತ್ತಿದ್ದಾರೆ.

ಈಗಾಗಲೇ ದುಷ್ಕರ್ಮಿಗಳ ಬೆನ್ನತ್ತಿರುವ ಪೊಲೀಸರು ಓರ್ವ ದರೋಡೆಕೋರನ ಕಾಲಿಗೆ ಗುಂಡೇಟು ಹಾಕಿ ಬಂಧಿಸಿದ್ದಾರೆ. ಆದರೂ, ಕಳ್ಳರ ಕಾಟ ಕಡಿಮೆಯಾಗಿಲ್ಲ. ನಗರದಲ್ಲಿನ ಬಹುತೇಕ ಬ್ಯಾಂಕ್‌ಗಳಿಗೆ ನಿತ್ಯ ಹತ್ತಾರು ಜನರು ಭೇಟಿ ನೀಡಿ, ಲಾಕರ್‌ಗಳನ್ನು ಬುಕ್ ಮಾಡುತ್ತಿದ್ದಾರೆ. ಹೀಗಾಗಿ ಬಹುತೇಕ ಬ್ಯಾಂಕ್‌ಗಳ ಲಾಕರ್‌ಗಳು ತುಂಬಿ ಹೋಗಿವೆ.

ಒಂದು ಮನೆಯಲ್ಲಿ ಕಡಿಮೆ ಎಂದರೂ 2 ರಿಂದ 5 ತೊಲೆ ಚಿನ್ನಾಭರಣ ಇದ್ದೇ ಇರುತ್ತದೆ. ಸ್ವಲ್ಪ ಸ್ಥತಿವಂತರಿದ್ದರೆ 10 ತೊಲೆಗಿಂತ ಹೆಚ್ಚು ಆಭರಣ ಇದ್ದೆ ಇರುತ್ತದೆ. ಹೀಗಾಗಿ ಪ್ಲಾನ್ ಮಾಡಿ ಮಹಿಳೆಯರೆಲ್ಲ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳದೆ ತಮ್ಮ ತಮ್ಮ ಖಾತೆಗಳು ಇರುವ ಬ್ಯಾಂಕ್ ಲಾಕರ್‌ಗಳ ಮೊರೆ ಹೋಗಿದ್ದಾರೆ. ಅಗತ್ಯವಿದ್ದಷ್ಟು ಮಾತ್ರ ಇಟ್ಟುಕೊಂಡು ಉಳಿದ ವಸ್ತ್ರಾಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುತ್ತಿದ್ದಾರೆ.

ಲಾಕರ್‌ಗಳಿಗೆ ಫುಲ್‌ ಡಿಮ್ಯಾಂಡ್:

ಈ ಮೊದಲು ಹೆಚ್ಚಿನ ಪ್ರಮಾಣದ ಶ್ರೀಮಂತರು ಮಾತ್ರ ಲಾಕರ್‌ ಬಳಸುತ್ತಿದ್ದು, ಮಹತ್ವದ ದಾಖಲೆಗಳನ್ನು ಇಡುತ್ತಿದ್ದರು. ಇದೀಗ ಪ್ರತಿಯೊಬ್ಬರಿಗೂ ಅವಶ್ಯಕತೆ ಇರುವುದರಿಂದ ಬ್ಯಾಂಕ್ ಲಾಕರಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ವಿಜಯಪುರದಲ್ಲಿ ಫುಲ್ ಡಿಮ್ಯಾಂಡ್ ಬಂದಿದೆ. ಹೇಗಾದರು ಮಾಡಿ ನಮಗೊಂದು ಲಾಕರ್ ಕೊಡಿ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಮಹಿಳೆಯರು ದುಂಬಾಲು ಬಿದ್ದಿದ್ದಾರೆ. ಕೆಲವು ಬ್ಯಾಂಕ್‌ಗಳಲ್ಲಿ ಈಗಾಗಲೇ ಇರುವ ಸೇಫ್ಟಿ ಲಾಕರ್‌ಗಳು ಫುಲ್ ಆಗಿದ್ದು, ಗ್ರಾಹಕರ ಬೇಡಿಕೆ ಹೆಚ್ಚಾಗಿದೆ.

ಕಳೆದ ವಾರ ಮಿತಿಮೀರಿದ ಒಂಟಿ ಮನೆಗಳಿಗೆ ನುಗ್ಗುವ ದರೋಡೆಕೋರರ ಹಾವಳಿ ಹೆಚ್ಚಾಗಿದ್ದರಿಂದ ನಗರದಲ್ಲಿ ಮಧ್ಯರಾತ್ರಿ ನಿದ್ದೆಗೆಡಿಸುವುದು ಮಾತ್ರ ನಿಂತಿಲ್ಲ. ನಗರದ ನಿರ್ವಾಣಶೆಟ್ಟಿ ಕಾಲೋನಿ, ರಾಜಕುಮಾರ ಲೇಔಟ್, ಜೈನಾಪುರ ಬಡಾವಣೆ, ಅಥಣಿ ರಸ್ತೆಯ ವಿವಿಧ ಭಾಗಗಳು, ಪುಷ್ಕರ ಕಾಲೋನಿ, ಆಶ್ರಮ ಏರಿಯಾ, ಆದರ್ಶನಗರ ಸೇರಿದಂತೆ ಹಲವೆಡೆ ಮಧ್ಯ ರಾತ್ರಿ ಕಳ್ಳರು ದಾಂಗುಡಿ ಇಟ್ಟಿದ್ದಾರೆ ಎಂದು ಎಲ್ಲೆಡೆ ಪುಕಾರ ಎದ್ದಿದೆ.

ಮಧ್ಯರಾತ್ರಿ 1ಗಂಟೆಯಿಂದ 3 ಗಂಟೆಯ ವರೆಗೆ ಕಳ್ಳರು ಎಲ್ಲೆಡೆ ದಾಂಗುಡಿ ಇಟ್ಟಿದ್ದಾರೆ. ಕೆಲ ಏರಿಯಾಗಳಲ್ಲಿನ ಯುವಕರು, ಮಹಿಳೆಯರು ಸೇರಿದಂತೆ ಜನರೆಲ್ಲ ಎದ್ದು ರಾತ್ರಿಯಿಡಿ ಕೈಯಲ್ಲಿ ಕೋಲು, ಬಡಿಗೆಗಳನ್ನು ಹಿಡಿದು ಮನೆ ಹಾಗೂ ಓಣಿಗಳಲ್ಲಿ ಕಾವಲು ಕಾಯುತ್ತಿದ್ದಾರೆ. ಜ.23ರಂದು ತಮ್ಮ ಏರಿಯಾದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಬಂದಿದ್ದಾರೆ ಎಂದು ಸುದ್ದಿ ತಿಳಿದ ನಗರದ ಪುಷ್ಕರ ಕಾಲೋನಿ ಜನರು ನಿದ್ದೆಗೆಟ್ಟು, ರಾತ್ರಿ 10ಯಿಂದ ಮಧ್ಯ ರಾತ್ರಿ 2ಗಂಟೆಯ ವರೆಗೆ ಎದ್ದು ಗುಂಪುಗುಂಪಾಗಿ ಬಡಿಗೆ ಹಿಡಿದುಕೊಂಡು ಓಡಾಡಿದ್ದಾರೆ. ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಸರಿಯಾದ ಪೊಲೀಸ್ ಬೀಟ್ ವ್ಯವಸ್ಥೆ ಮಾಡಿ, ನಗರದ ಜನತೆ ಸುರಕ್ಷತೆ ಕಾಪಾಡಬೇಕು ಎಂದು ನಗರದ ಜನತೆ ಮನವಿ ಮಾಡಿದ್ದಾರೆ.-

ಇಷ್ಟು ದಿ‌ನ ಖಾಲಿಯೇ ಇದ್ದ ನಮ್ಮ ಬ್ಯಾಂಕ್ ಲಾಕರ್‌ಗಳು ಕಳೆದ ಒಂದೇ ವಾರದಲ್ಲಿ ಫುಲ್ ಆಗಿವೆ. ನೂರಾರು ಜನರಿಗೆ ಲಾಕರ್ ಸೌಲಭ್ಯಕ್ಕಾಗಿ ನಮ್ಮಲ್ಲಿದ್ದ 7 ಬೃಹತ್ ಲಾಕರ್‌ಗಳು ಭರ್ತಿಯಾಗಿವೆ. ಈಗ ಲಾಕರ್ ಬೇಕು ಎಂದು ಬಂದವರಿಗೆಲ್ಲ ನೋ ಸ್ಟಾಕ್ ಎಂದು ಹೇಳಿ ಕಳುಹಿಸುತ್ತಿದ್ದೇವೆ. ನಾಳೆಯಿಂದ ಬ್ಯಾಂಕ್ ಎದುರು ಲಾಕರ್ ನೋ ಸ್ಟಾಕ್ ಬೋರ್ಡ್ ಹಾಕಲಿದ್ದೇವೆ ಎಂದು ಸಿದ್ಧಸಿರಿ ಸೌಹಾರ್ಧದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ಕೋಟ್......

ರಾತ್ರಿಯಿಡಿ ನಗರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವುದರಿಂದ ಭಯವಾಗಿದೆ. ಕಳ್ಳರ ಕೈಗೆ ಸಿಗದಂತೆ ಮನೆಯಲ್ಲಿನ ಒಡವೆಗಳನ್ನು ಸುರಕ್ಷಿತವಾಗಿ ಇಡಬೇಕೆಂದು ಬ್ಯಾಂಕ್‌ಗಳಲ್ಲಿ ಸೇಫ್ಟಿ ಲಾಕರ್‌ ಕೇಳುತ್ತಿದ್ದೇವೆ, ಆದರೆ ನಮಗೆ ಸಧ್ಯಕ್ಕೆ ಲಾಕರ್‌ಗಳು ಖಾಲಿ ಇಲ್ಲ ಎಂದು ಹೇಳುತ್ತಿದ್ದಾರೆ. ಜನರೆಲ್ಲ ಬ್ಯಾಂಕ್‌ ಲಾಕರ್‌ಗಳನ್ನು ಬುಕ್ ಮಾಡಿದ್ದರಿಂದ ನಮಗೆ ಲಾಕರ್‌ ಸಿಗದಂತಾಗಿದೆ.

- ಸವಿತಾ ನಾಯಿಕ, ಬ್ಯಾಂಕ್ ಲಾಕರ್ ಮೊರೆ ಹೋದವರು.

---------

ಕೋಟ್:

ಮೊದಲೆಲ್ಲ ಬ್ಯಾಂಕ್ ಲಾಕರ್‌ಗಳು ಖಾಲಿ ಹೊಡೆಯುತ್ತಿದ್ದವು, ಆದರೆ ಕಳೆದ ತಿಂಗಳು ಕಳ್ಳರ ಹಾವಳಿ ಹೆಚ್ಚಾದ ಮೇಲೆ ಪ್ರತಿ ದಿನ 8 ರಿಂದ 10 ಲಾಕರ್‌ ಖಾತೆಗಳನ್ನು ಗ್ರಾಹಕರು ತೆರೆಯುತ್ತಿದ್ದಾರೆ. ಈ ಮೊದಲು ನಮ್ಮಲ್ಲಿದ್ದ 121 ದೊಡ್ಡ ಲಾಕರ್‌ಗಳು ಭರ್ತಿಯಾಗಿದ್ದರಿಂದ ಹೊಸದಾಗಿ ಮತ್ತೆ 85 ಲಾಕರ್‌ ತರಿಸಿದ್ದೇವೆ. ಅವು ಸಹ ಭರ್ತಿಯಾಗಿದ್ದು, ಜನರ ಬೇಡಿಕೆ ಇನ್ನೂ ಹೆಚ್ಚಾಗುತ್ತಿದೆ.

- ಸಂಜಯ ಜಾಧವ, ವ್ಯವಸ್ಥಾಪಕರು, ಶಿವಾಜಿ ಮಹಾರಾಜ ಕೋ-ಆಪರೇಟಿವ್ ಬ್ಯಾಂಕ್.