ಸಾರಾಂಶ
ದೊಡ್ಡಬಳ್ಳಾಪುರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಕಳೆದ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಆರ್.ವೇಣುಗೋಪಾಲ್ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾವುದೇ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲ ಎಂಬುದು ಅನೇಕ ಉದಾಹರಣೆಗಳಿಂದ ಸಾಬೀತಾಗಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಉತ್ತಮ ಮನೋಬಲದೊಂದಿಗೆ ಶ್ರಮವಹಿಸಿ ಆಸಕ್ತಿಯಿಂದ ಅಭ್ಯಾಸವನ್ನು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಸಾಧನೆಗೆ ಇಚ್ಛಾಶಕ್ತಿ ಇರಬೇಕೆ ಹೊರತು ಬೇರೇನೂ ಅಗತ್ಯವಿಲ್ಲ ಎಂದರು.ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆದಿದ್ದು, ಉನ್ನತ ಹುದ್ದೆಗಳಲ್ಲಿ ಅತಿ ಹೆಚ್ಚು ಜನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೇ ಇದ್ದಾರೆ. ಶಿಕ್ಷಕರ ಮಾತು ಮತ್ತು ದಂಡನೆಗಳು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವ ಪ್ರಯತ್ನದ ಭಾಗವಾಗಿರುತ್ತದೆ ಎಂದು ಹೇಳಿದರು.
ಅಮ್ಮ ಫೌಂಡೇಶನ್ ನ ಡಾ.ಮಧುಚಂದ್ರ ಪುಂಗನೂರು ಮಾತನಾಡಿ, ತಾವು ಇದೇ ಶಾಲೆಯಲ್ಲಿ ಓದಿ ಇದೀಗ ವೈದ್ಯನಾಗಿ ಆಸ್ಟ್ರೇಲಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನನ್ನಂತೆ ಇತರರು ಈ ಶಾಲೆಯಲ್ಲಿ ಓದಿ ಉನ್ನತ ಹುದ್ದೆಗೆ ಏರಲಿ ಎಂಬ ಒತ್ತಾಸೆಯಿಂದ ಪ್ರತಿವರ್ಷ ಅಮ್ಮ ಸಂಸ್ಥೆ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸುತ್ತಿರುವುದಾಗಿ ತಿಳಿಸಿದರು.ಅಮ್ಮ ದತ್ತಿ ಸಂಸ್ಥೆಯ ಸುಂದರ್ ರಾಜು, ಫೇವನ್ ಮೋಟಾರ್ಸ್ ಮಾಲೀಕ ಫಯಾಜ್, ಪದ್ಮ ವೇಣುಗೋಪಾಲ್ ಅವರ ಸಹಕಾರದೊಂದಿಗೆ ಪ್ರಸಕ್ತ ಎಸ್‌ಎಸ್‌ಎಲ್‌ಸಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಜಿ.ಸಿ.ಪ್ರಕಾಶ್ ಕುಟುಂಬದ ಸಹಯೋಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ 12 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು.
ಉಪಪ್ರಾಂಶುಪಾಲರಾದ ದಾಕ್ಷಾಯಿಣಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರಾದ ಎಚ್.ಎಸ್.ಶಿವಶಂಕರ್, ಅಖಿಲೇಶ್, ದೇವಾಂಗ ಮಂಡಳಿಯ ನಿರ್ದೇಶಕ ಕುಮಾರ್, ಸಹ ಶಿಕ್ಷಕ ಚಿಕ್ಕೆಗೌಡ, ಭಾಗ್ಯಲಕ್ಷ್ಮಿ, ಬೇಬಿ ಸರೋಜಾ, ದೀಪಶ್ರೀ ಮತ್ತಿತರರು ಭಾಗವಹಿಸಿದ್ದರು.18ಕೆಡಿಬಿಪಿ3-
ದೊಡ್ಡಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ನೋಟ್ ಪುಸ್ತಕ ವಿತರಣೆ ನಡೆಯಿತು.