ಸಾರಾಂಶ
ಆರೋಗ್ಯದಲ್ಲಿ ಏರುಪೇರದಾದ ವ್ಯಕ್ತಿ ಚಿಕಿತ್ಸೆಗೆ ತೆರಳಲು ಸಕಾಲದಲ್ಲಿ ೧೦೮ ಆ್ಯಂಬುಲೆನ್ಸ್ ದೊರೆಯದೆ ಮೃತಪಟ್ಟಿದ್ದಾನೆ.
ಗೋಕರ್ಣ: ಆರೋಗ್ಯದಲ್ಲಿ ಏರುಪೇರದಾದ ವ್ಯಕ್ತಿಗೆ ಚಿಕಿತ್ಸೆಗೆ ತೆರಳಲು ಸಕಾಲದಲ್ಲಿ ೧೦೮ ಆ್ಯಂಬುಲೆನ್ಸ್ ದೊರೆಯದೆ ಮೃತಪಟ್ಟಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹ ಇಟ್ಟು ತದಡಿ ಗ್ರಾಮಸ್ಥರು ೧೦೮ ವ್ಯವಸ್ಥೆಯ ವಿರುದ್ದ ಪ್ರತಿಭಟಿಸಿದ ಘಟನೆ ಭಾನುವಾರ ನಡೆದಿದೆ.
ಮುಂಜಾನೆ ತದಡಿ ನಿವಾಸಿ ಲೋಹಿತ ಹಾವಪ್ಪ ನಾಯ್ಕ (೪೦) ಎಂಬವರಿಗೆ ಆರೋಗ್ಯದಲ್ಲಿ ತೊಂದರೆಯಾಗಿದೆ. ತಕ್ಷಣ ೧೦೮ಕ್ಕೆ ಅವರ ಮನೆಯವರು ಕರೆ ಮಾಡಿದ್ದರು. ಕಾಲ್ ಸೆಂಟರ್ ಸಿಬ್ಬಂದಿ ಕರೆ ಸ್ವೀಕರಿಸಿದ್ದು, ವಿಳಾಸ ಪಡೆದು ಸ್ಥಳೀಯ ಸೇವೆಗೆ ಮಾಹಿತಿ ನೀಡಲು ಸಂಪರ್ಕಕಕ್ಕೆ ಸಿಗುತ್ತಿಲ್ಲ ಎಂದು ಉತ್ತರಿಸಿದ್ದಾರೆ. ತುರ್ತಾಗಿ ಬೇಕಿದೆ ಎಂದು ಹೇಳಿದರೆ, ಬೇಕಾದರೆ ಬೇರೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ. ೧೦೮ಕ್ಕೆ ನಿರಂತರ ಕರೆ ಮಾಡಿದ್ದಾರೆ. ಆದರೂ ಸ್ಪಂದಿಸಿಲ್ಲ. ಕೆಲವೇ ಗಂಟೆಯಲ್ಲಿ ಲೋಹಿತ ಮೃತಪಟ್ಟಿದ್ದಾನೆ ಎಂದು ಮೃತರ ಸಂಬಂಧಿಕರು ಆರೋಪಿಸಿದರು.ಈ ರೀತಿ ಜೀವದೊಂದಿಗೆ ಚೆಲ್ಲಾಟವಾಡಿದ ಸರ್ಕಾರಿ ವ್ಯವಸ್ಥೆಯ ವಿರುದ್ಧ ಅಸಮಾಧಾನಗೊಂಡ ಗ್ರಾಮಸ್ಥರು, ಹೊರ ಊರಿನಲ್ಲಿದ್ದ ಮೃತರ ಸಂಬಂಧಿಕರು ಬರುವ ವರೆಗೆ ಕಾಯ್ದು ಎಲ್ಲರೂ ಬಂದ ನಂತರ ಮೃತದೇಹವನ್ನು ತದಡಿಯಿಂದ ಗೋಕರ್ಣಕ್ಕೆ ತಂದು ೧೦೮ ವಾಹನದ ಮುಂದೆ ಇಟ್ಟು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಅಲ್ಲಿ ವಾಹನವಿಲ್ಲದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿಗಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
೧೦೮ ಸಿಬ್ಬಂದಿ ಸ್ಪಂದಿಸದ ಕುರಿತು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ವಲ್ಪ ಹೊತ್ತು ಇದ್ದು ನಂತರ ಮೃತದೇಹವನ್ನ ತೆಗೆದುಕೊಂಡು ಹೋಗಿದ್ದಾರೆ.