ಸಾರಾಂಶ
ಭಟ್ಕಳ: ಕಳೆದ ನಾಲ್ಕು ವರ್ಷಗಳಿಂದ ಪಟ್ಟಣದ ರಸ್ತೆಯ ಮೇಲೆ ಹೊಲಸು, ಹರಿದ ಬಟ್ಟೆಯನ್ನು ಹಾಕಿಕೊಂಡು ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನಂತಿದ್ದ ವ್ಯಕ್ತಿಯೊಬ್ಬನನ್ನು ಹಿರಿಯ ಸಿವಿಲ್ ಜಡ್ಜ್ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಕಾಂತ ಕುರಣಿ ಅವರ ನೇತೃತ್ವದಲ್ಲಿ ಶುದ್ಧ ಬಟ್ಟೆ ಹಾಕಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಕಾನೂನು ಸೇವಾ ಕಾರ್ಯಕ್ರಮಕ್ಕೆ ತೆರಳಲು ಸಿದ್ಧರಾಗಿದ್ದ ನ್ಯಾಯಾಧೀಶರು ನ್ಯಾಯಾಲಯದ ಎದುರು ಸುಮಾರು ೫೦ ವರ್ಷ ಪ್ರಾಯದ ವ್ಯಕ್ತಿಯೋರ್ವ ಹೊಲಸು ಬಟ್ಟೆ, ಕೈಯಲ್ಲಿ ಐದಾರು ಪ್ಲಾಸ್ಟಿಕ್ ವಸ್ತುಗಳನ್ನು ತುಂಬಿದ ಚೀಲಗಳು, ಗಡ್ಡ, ಕುರುಚಲು ತಲೆಗೂದಲು ಹೊಂದಿ ನಿಂತುಕೊಂಡಿದ್ದನ್ನು ನೋಡಿ ಆತನಿಗೆ ಸರಿಯಾದ ಮಾರ್ಗ ತೋರಿಸಬೇಕು ಎಂದು ನಿರ್ಧರಿಸಿ ಆತನನ್ನು ನ್ಯಾಯಾಲಯದ ಆವರಣಕ್ಕೆ ಕರೆಸಿದ್ದಾರೆ.ಆತ ತನ್ನ ಹೆಸರು ನಾಗಭೂಷಣ ಪದ್ಮನಾಭ ಆಚಾರ್ಯ, ಹಿರಿಯಡಕ ಎಂದು ಹೇಳಿದ್ದು, ಆತ ಹೇಳಿದ್ದ ವಿಳಾಸದಲ್ಲಿ ವಿಚಾರಿಸಲಾಗಿ, ಆತನ ಮನೆಗೆ ಬೀಗ ಹಾಕಿಕೊಂಡಿದೆ ಎಂದು ತಿಳಿದುಬಂದಿತ್ತು. ಆತನಿಗೆ ಅಕ್ಕ ಹಾಗೂ ಅಣ್ಣ ಇದ್ದಾರೆ ಎಂದೂ ತಿಳಿದುಬಂದಿದೆ. ನಂತರ ಆತ ಸುಮಾರು ೧೦ ವರ್ಷಗಳ ಹಿಂದೆ ಮನೆಯಿಂದ ಕೋಪಗೊಂಡು ಹೊರಬಿದ್ದಿದ್ದು ಭಟ್ಕಳ, ಮುರ್ಡೇಶ್ವರ ಹಾಗೂ ಹೊನ್ನಾವರಗಳಲ್ಲಿ ಬಸ್ ನಿಲ್ದಾಣ ರಸ್ತೆಯ ಬದಿಯಲ್ಲಿಯೇ ದಿನ ಕಳೆಯುತ್ತಿದ್ದ ಎಂದೂ ಹೇಳಿಕೊಂಡಿದ್ದು, ೭ ವರ್ಷಗಳ ಹಿಂದೆ ಅಪೆಂಡಿಕ್ಸ್ ಆಪರೇಶನ್ ಆಗಿದೆ ಎಂದು ಹೊಟ್ಟೆಯಲ್ಲಿ ಹಾಕಲಾಗಿದ್ದ ಹೊಲಿಗೆಯನ್ನು ತೋರಿಸಿದ. ಆತನ ಮನವೊಲಿಸಿ ಆಸ್ಪತ್ರೆಗೆ ಸೇರಿಸುವಲ್ಲಿ ನ್ಯಾಯಾಧೀಶರು ಯಶಸ್ವಿ ಆಗಿದ್ದು, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪರಿಸರಸ್ನೇಹಿಯಾಗಿ ದೀಪಾವಳಿ ಆಚರಿಸಿ
ಕಾರವಾರ: ಇಲ್ಲಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯಿಂದ ಅಂಕೋಲಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಪರಿಸರ ಅಧಿಕಾರಿ ಬಿ.ಕೆ. ಸಂತೋಷ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯವಾಗದಂತೆ ಪರಿಸರಸ್ನೇಹಿ ದೀಪಾವಳಿ ಹಬ್ಬವನ್ನು ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸುವಂತೆ ಹಾಗೂ ಪಟಾಕಿ ಸಿಡಿಸುವುದಾದರೆ ಹಸಿರು ಪಟಾಕಿಯನ್ನೇ ಹೆಚ್ಚಾಗಿ ಬಳಸುವಂತೆ ತಿಳಿಸಿದರು.ಸರ್ವೋಚ್ಛ ನ್ಯಾಯಾಲಯವು ಪಟಾಕಿಗಳಿಗೆ ಸಂಬಂಧಿಸಿದಂತೆ ಹಲವಾರು ನಿರ್ದೇಶನಗಳನ್ನು ನೀಡಿದ್ದು, ಅದರಂತೆ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಬಳಸಲು ಅವಕಾಶ ನೀಡಿದೆ. ಉಳಿದ ಸಮಯದಲ್ಲಿ ಪಟಾಕಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದ ಅವರು, ವಿದ್ಯಾರ್ಥಿಗಳಿಗೆ ಪಟಾಕಿಯನ್ನು ಬಳಸುವುದರಿಂದ ಆಗುವ ಶಬ್ದಮಾಲಿನ್ಯ ಹಾಗೂ ವಾಯುಮಾಲಿನ್ಯ ಮತ್ತು ಸ್ಫೋಟದ ತೀವ್ರತೆಯಿಂದ ಆಗುವ ಅನಾಹುತಗಳ ಬಗ್ಗೆ ತಿಳಿಸಿದರು.ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಜಯಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಳೆಗುಳಿ ಸಂಗಮ ಸೇವಾ ಸಂಸ್ಥೆ ಅಧ್ಯಕ್ಷ ರವೀಂದ್ರ ಶೆಟ್ಟಿ, ಕೌಟುಂಬಿಕ ಸಲಹಾ ಕೇಂದ್ರದ ಸಲಹೆಗಾರ ತಿಮ್ಮಣ್ಣ ಭಟ್ಟ, ಶಿಕ್ಷಕ ಎಚ್.ಬಿ. ನಾಯಕ ಮೊದಲಾದವರು ಇದ್ದರು.