ಉಡುಪಿಯ ಶ್ರೀ ಕೃಷ್ಣ ಮಂದಿರಕ್ಕೆ ಶುಕ್ರವಾರ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ತೊಡಿಸಲು ಸಿದ್ಧಪಡಿಸಿದ್ದ ವಿವಿಧ ಪೇಟಗಳಲ್ಲಿ ತುಮಕೂರಿನ ಚಿಕ್ಕಪೇಟೆಯ ಉಷಾ ಭಾಸ್ಕರ್‌ ಅವರು ತಯಾರಿಸಿದ ನವಿಲುಗರಿಯ ವಿಶೇಷ ಮೈಸೂರು ಪೇಟ ಆಯ್ಕೆಯಾಗಿತ್ತು. ಆ ಪೇಟವನ್ನು ಪ್ರಧಾನಿ ಮೋದಿ ಅವರಿಗೆ ಪುತ್ತಿಗೆ ಶ್ರೀಗಳೇ ತೊಡಿಸಿದ್ದು ಗಮನಸೆಳೆದಿದೆ.

ಕನ್ನಡಪ್ರಭ ವಾರ್ತೆ, ತುಮಕೂರು

ಶ್ರೀಕೃಷ್ಣ ಮಂದಿರ ಹಾಗೂ ಪುತ್ತಿಗೆ ಮಠದಿಂದ ಪ್ರಧಾನಿಯವರಿಗೆ ತೊಡಿಸುವ ಪೇಟ ಸಿದ್ಧಪಡಿಸುವ ಜವಾಬ್ದಾರಿಯನ್ನು ಉಡುಪಿಯ ವಿಷ್ಣುಫ್ಲವರ್ ಡೆಕೋರೇರ್ಸ್‌ಗೆ ನೀಡಲಾಗಿತ್ತು. ಅವರು ತುಮಕೂರಿನ ಕಲಾವಿದೆ ಉಷಾ ಭಾಸ್ಕರ್ ಅವರನ್ನು ಸಂಪರ್ಕಿಸಿ ಪ್ರಧಾನಿಯವರಿಗೆ ತೊಡಿಸುವ ಪೇಟವನ್ನು ವಿಶೇಷವಾಗಿ ರೂಪಿಸುವಂತೆ ಕೋರಿದ್ದರು. ಉಷಾ ಅವರು ಮೈಸೂರು ಪೇಟಕ್ಕೆ ಮುತ್ತಿನ ಸರ, ಸ್ವರ್ಣ ಬಣ್ಣದ ಪಟ್ಟಿ, ನವಿಲಗಿರಿಯಿಂದ ಅಲಂಕೃತಗೊಳಿಸಿ ತುಮಕೂರಿನಿಂದ ಉಡುಪಿಗೆ ಕಳುಹಿಸಿದ್ದರು. ಮರುದಿನ ಗುರುವಾರ ತಮ್ಮ ಪೇಟ ಆಯ್ಕೆ ಆಗಿಲ್ಲ ಎಂಬ ಮಾಹಿತಿ ತಿಳಿದು ನಿರಾಶೆಗೆ ಒಳಗಾಗಿದ್ದರು. ಆದರೆ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ತಾವು ಸಿದ್ಧಗೊಳಿಸಿದ ಪೇಟ ಧರಿಸಿರುವುದನ್ನು ನೋಡಿ ಬಹಳ ಖುಷಿಪಟ್ಟಿದ್ದಾಗಿ ಉಷಾ ಹೇಳಿಕೊಂಡಿದ್ದಾರೆ.

ಬೆಳಗ್ಗೆ ಮಾಧ್ಯಮಗಳಲ್ಲಿ ಪ್ರಧಾನಿ ಕಾರ್ಯಕ್ರಮದ ನೇರವೀಕ್ಷಣೆ ಮಾಡುತ್ತಿದ್ದಾಗ ಅಚ್ಚರಿಗೊಳಗಾಗಿದ್ದರು. ಪುತ್ತಿಗೆ ಶ್ರೀಗಳು ಉಷಾ ಅವರು ತಯಾರಿಸಿದ ಪೇಟವನ್ನೇ ಪ್ರಧಾನಿ ಮೋದಿ ಅವರಿಗೆ ತೊಡಿಸಿದ್ದು, ಅವರ ಹಾಗೂ ಅವರ ಕುಟುಂಬದವರ ಸಂತಸಕ್ಕೆ ಪಾರವೇ ಇರಲಿಲ್ಲ. ಮಗಳ ಕಲಾಕೌಶಲ್ಯಕ್ಕೆ ಸಿಕ್ಕ ಮನ್ನಣೆಗೆ ತಂದೆ ಜಯರಾಮಚಾರ್, ತಾಯಿ ಈಶ್ವರಿ ಹಾಗೂ ಪತಿ ಭಾಸ್ಕರ್ ಹಾಗೂ ಕುಟುಂಬದವರೆಲ್ಲ ಅಪಾರ ಸಂತಸ ವ್ಯಕ್ತಪಡಿಸಿದ್ದು, ತುಮಕೂರಿನ ನಾಗರಿಕರು ಸಹ ಮೆಚ್ಚುಗೆ ಸೂಚಿಸಿದ್ದಾರೆ.