ಸಾರಾಂಶ
ಕಾರಟಗಿ:
ಪಟ್ಟಣದ ಆರಾಧ್ಯ ದೈವ ಶ್ರೀಶರಣಬಸವೇಶ್ವರರ ಪುರಾಣ ಮಂಗಲದ ಅಂಗವಾಗಿ ಸೋಮವಾರ ಪಲ್ಲಕ್ಕಿ ಉತ್ಸವ ಸಡಗರ, ಸಂಭ್ರಮ ಹಾಗೂ ಭಕ್ತಿ- ಭಾವದೊಂದಿಗೆ ಸಾಂಗೋಪವಾಗಿ ನಡೆದಿದ್ದು ಸಾವಿರಾರು ಭಕ್ತರು ಸಾಕ್ಷಿಯಾದರು.ಶರಣಬಸವೇಶ್ವರ ಜಾತ್ರಾ ಮಹೋತ್ಸವ ಮತ್ತು ಪುರಾಣ ಮಂಗಲೋತ್ಸವದ ಅಂಗವಾಗಿ ಕಳೆದ ೫ ದಶಕಗಳಿಂದ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದ ಭ್ಯವ ಪರಂಪರೆಯ ದಿವ್ಯ ಮೆರಣಿಗೆಗೆ ಈ ಬಾರಿ ರಾಜ್ಯದ ವಿವಿಧೆಡೆಯಿಂದ ಪಾಲ್ಗೊಂಡ ದೇಸಿ ಕಲಾ ತಂಡಗಳು ಮತ್ತಷ್ಟು ಮೆರುಗು ನೀಡಿದರೆ, ಉತ್ಸಾಹಿ ಯುವಕರ ಒತ್ತಾಸೆ ಮೇರೆಗೆ ಡಿಜೆ ವ್ಯವಸ್ಥೆ ಮತ್ತಷ್ಟು ರಂಗು ತಂದಿತು. ಇದರಿಂದ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಐದಾರು ಗಂಟೆ ನಿರಂತರವಾಗಿ ನಡೆದು ದೇವಸ್ಥಾನ ತಲುಪಿತು.ವಿಶೇಷ ಪೂಜೆ:೫೧ನೇ ವರ್ಷದ ಪುರಾಣ ಮಂಗಲೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆ ವೀರಭದ್ರೇಶ್ವರ ಹಾಗೂ ಶರಣಬಸವೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ, ಎಲೆಚಟ್ಟಿ ಪೂಜೆ, ಪುಷ್ಪಾಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಪೂಜೆ ಕಾರ್ಯಕ್ರಮ ಬುಕ್ಕಸಾಗರದ ಕರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅರ್ಚಕ ಮುತ್ತಯ್ಯಸ್ವಾಮಿ ಹಿರೇಮಠ ನೆರವೇರಿಸಿದರು. ಪಲ್ಲಕ್ಕಿ ಉತ್ಸವದ ಮೆರವಣಿಗೆ ಉದ್ದಕ್ಕೂ ಭಕ್ತರು ದೇವರಿಗೆ ಹಣ್ಣು, ಕಾಯಿ, ಕರ್ಪೂರ ಸಮರ್ಪಿಸಿ ಭಕ್ತಿ ಸಮರ್ಪಿಸಿದರು.
ವೈಭದ ಉತ್ಸವ:ವಿವಿಧ ವಾದ್ಯ ಮೇಳ, ತಾಳ, ಭಾಜಾ ಭಜಂತ್ರಿ, ತಾಶ್ಯ ಹಾಗೂ ವಿವಿಧ ಭಜನಾ ಸಂಘದೊಂದಿಗೆ ಕಳಸ-ಕುಂಭ ಹೊತ್ತ ಸುಮಂಗಲೆಯರು ಪುರವಂತರೊಂದಿಗೆ ಪುರಸಭೆ ಬಳಿಯ ೩೧ನೇ ವಿತರಣಾ ಕಾಲುವೆಯಲ್ಲಿ ಗಂಗಾ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಶರಣಬಸವೇಶ್ವರ ಪಲ್ಲಕ್ಕಿ ಉತ್ಸವದೊಂದಿಗೆ ರಾಜ್ಯ ಹೆದ್ದಾರಿ ಮೂಲಕ ಸಾಗಿ ಕನಕದಾಸ ವೃತ್ತದಿಂದ ಹಳೆ ಬಜಾರನ ಮಹಾದ್ವಾರದ ಮಾರ್ಗವಾಗಿ ದೇವಸ್ಥಾನಕ್ಕೆ ಬಂದು ತಲುಪಿತು.ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ವೃದ್ಧರು ಪುರವಂತರಿಂದ ಶಸ್ತ್ರ ಹಾಕಿಸಿಕೊಂಡು ಭಕ್ತಿಯ ಪರಕಾಷ್ಠೆ ಮೆರೆದರು. ಸಹಸ್ರಾರು ಸಂಖ್ಯೆಯ ಸುಮಂಗಲೆಯರು ಕುಂಭ-ಕಳಸ ಹೊತ್ತು ಮೆರವಣಿಗೆಗೆ ಮೆರುಗು ತಂದರು. ಗಂಗೆ ಸ್ಥಳದಿಂದ ಮುಖ್ಯರಸ್ತೆ ಮೂಲಕ ಹೊರಟ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಎಸ್‌ಎಸ್‌ಕೆ ಸಮಾಜ ಬಾಂಧವರು ತಂಪು ಪಾನೀಯ ನೀಡಿದರೆ, ವಿಷ್ಣು ವಿನಾಯಕ ಗೆಳೆಯರ ಬಳಗ ಉಪಾಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು.ಭವ್ಯ ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ತಾಶ್ಯದ (ತಮಟೆ) ನಾದಕ್ಕೆ ಪುರವಂತರು ಒಡಪು ಹೇಳುತ್ತಿದ್ದರೆ, ಮೆರವಣಿಗೆ ಮುಂಭಾಗದಲ್ಲಿ ಡೊಳ್ಳು ಶಬ್ದ ಮುಗಿಲು ಮಟ್ಟಿತ್ತು. ತಮಟೆ ಸೇರಿದಂತೆ ವಿವಿಧ ವಾದ್ಯಗಳ ನಾದಕ್ಕೆ ಯುವಕರು, ಮಕ್ಕಳು ಕುಣಿಯುತ್ತಿದ್ದರು. ನಂತರ ಮೆರವಣಿಗೆ ಕನಕದಾಸ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಡಿಜೆ ಅಬ್ಬರ ಆರಂಭವಾಯಿತು. ಡಿಜೆ ಸದ್ದು ಕೇಳುತ್ತಲೇ ಅಬಾಲವೃದ್ಧರಾಗಿ ಕುಣಿದು ಕುಪ್ಪಳಿಸಿದರು.
ಕಲಾ ತಂಡಗಳು:ಹಾವೇರಿಯ ಓಂಶಕ್ತಿ ಸಾಂಸ್ಕೃತಿಕ ಮತ್ತು ಜನಪದ ಕಲಾ ಸಂಸ್ಥೆಯ ಡೊಳ್ಳು ಕುಣಿತ, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಸದಾಶಿವಪೇಟೆಯ ಗದಿಗೇಶ್ವರ ಝಾಂಜ್ ಪಥಕ, ಕೊಪ್ಪಳ ಜಿಲ್ಲೆಯ ಅಬ್ಬಗೇರಿಯ ಮಾರುತೇಶ್ವರ ಅಲೆಮಾರಿ ಕಲಾವಿದರ ಡೊಳ್ಳುವಾದ್ಯ ಹಾಗೂ ತಮಟೆ, ತಾಶ್ಯ, ಕುಕನೂರಿನ ಕರಡಿಮಜಲು ಕಲಾತಂಡ ಸೇರಿದಂತೆ ಇತರೆ ಹಲವಾರು ವಿವಿಧ ವಾದ್ಯಗಳ ನಾದದೊಂದಿಗೆ ಉತ್ಸವದ ಮೆರವಣಿಗೆ ವೈಭವವಾಗಿ ನಡೆಯಿತು. ಈ ಕಲಾತಂಡಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಹ್ವಾನದ ಮೇರೆಗೆ ಆಗಮಿಸಿದ್ದವು.ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪಟ್ಟಣ ಸೇರಿದಂತೆ ಸುತ್ತಲಿನ ವಿವಿಧ ಸರ್ವ ಸಮಾಜ ಬಾಂಧವರು, ಪುರಾಣ ಸಮಿತಿ, ವರ್ತಕರು, ಉದ್ದಮಿಗಳು, ಪುರ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಉತ್ಸವದ ನಿಮಿತ್ತ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟು, ಅಕ್ಕಿಗಿರಣಿ ಬಾಗಿಲು ಮುಚ್ಚಿದ್ದವು.ಭೂರಿ ಗಣರಾಧನೆ:ಅನ್ನದ ಬಟ್ಟಲು ಎಂದು ಖ್ಯಾತವಾದ ಕಾರಟಗಿ ಪಟ್ಟಣದಲ್ಲಿ ಉತ್ಸವದ ನಿಮಿತ್ತ ಬೃಹತ್ ಅನ್ನದಾಸೋಹ ನಡೆಯಿತು. ದೇವಸ್ಥಾನ ಆವರಣ ಮತ್ತು ಪಕ್ಕದ ವಿರಕ್ತ ಮಠ, ಸಜ್ಜನ ಮನೆಯ ಆವರಣ ಹಾಗೂ ಹಿರೇಮಠದಲ್ಲಿ ಬೆಳಗ್ಗೆ ೧೧ರಿಂದ ಸಂಜೆ ೬ರ ವರೆಗೂ ದಾಸೋಹ ನಡೆಯಿತು. ಬೂಂದಿ, ಅನ್ನ ಸಾಂಬಾರ್, ಪಲ್ಲೆ ಮತ್ತು ಚೆಟ್ನಿಯ ಊಟದ ವ್ಯವಸ್ಥೆ ಏರ್ಪಡಿಸಲಾಗತ್ತು. ಈ ಬಾರಿ ಊಟಕ್ಕೆ ೮.೫ ಕ್ವಿಂಟಲ್ ಬೂಂದಿ, ೨೫ ಕ್ವಿಂಟಲ್ ಅಕ್ಕಿ, ೫ ಲೋಡ್ ತರಕಾರಿ ಬಳಸಲಾಯಿತು. ಅಲಬನೂರು ಅಮರೇಶಪ್ಪ ನೇತೃತ್ವದಲ್ಲಿ ೨೫ ಬಾಣಸಿಗರ ತಂಡ ಅಡುಗೆ ತಯಾರಿ ನಡೆಸಿದರು.