ಒಂಟಿ ಸಲಗದ ಹಾವಳಿ: ತೋಟಕ್ಕೆ ಹಾನಿ

| Published : Jul 20 2025, 01:19 AM IST

ಸಾರಾಂಶ

ಗ್ರಾಮದ ನಾಗಯ್ಯ ನಾಯ್ಕ್ ಎಂಬುವರ ತೋಟಕ್ಕೆ ನುಗ್ಗಿದ ಸಲಗ, ತೋಟದ ಬಾಳೆ ಮರಗಳು, ಕಂಗು ಬೆಳೆಗಳು ಹಾಗೂ ತೋಟದ ತಡೆಗೋಡೆಯನ್ನೂ ಧ್ವಂಸಗೊಳಿಸಿದೆ. ಸ್ಥಳೀಯರ ಪ್ರಕಾರ, ಮುಂಜಾನೆ ಬೆಳಗ್ಗೆ ಈ ಘಟನೆ ನಡೆದಿದ್ದು, ಆನೆ ದಾಟಿದ ಪಥದಲ್ಲಿ ಬೆಳೆಗಳಿಗೆ ಮತ್ತು ತೋಟದ ರಚನೆಗೆ ಗಣನೀಯ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಹೆಬ್ರಿ

ತಾಲೂಕಿನ ವರಂಗ ಗ್ರಾಮ ವ್ಯಾಪ್ತಿಯ ಮುಟ್ಲುಪಾಡಿಯಲ್ಲಿ ಶುಕ್ರವಾರ ಮುಂಜಾನೆ ಒಂಟಿ ಸಲಗವೊಂದು ತೋಟಕ್ಕೆ ನುಗ್ಗಿ ಅಪಾರ ಹಾನಿಯುನ್ನುಂಟು ಮಾಡಿದೆ.

ಗ್ರಾಮದ ನಾಗಯ್ಯ ನಾಯ್ಕ್ ಎಂಬುವರ ತೋಟಕ್ಕೆ ನುಗ್ಗಿದ ಸಲಗ, ತೋಟದ ಬಾಳೆ ಮರಗಳು, ಕಂಗು ಬೆಳೆಗಳು ಹಾಗೂ ತೋಟದ ತಡೆಗೋಡೆಯನ್ನೂ ಧ್ವಂಸಗೊಳಿಸಿದೆ. ಸ್ಥಳೀಯರ ಪ್ರಕಾರ, ಮುಂಜಾನೆ ಬೆಳಗ್ಗೆ ಈ ಘಟನೆ ನಡೆದಿದ್ದು, ಆನೆ ದಾಟಿದ ಪಥದಲ್ಲಿ ಬೆಳೆಗಳಿಗೆ ಮತ್ತು ತೋಟದ ರಚನೆಗೆ ಗಣನೀಯ ಹಾನಿಯಾಗಿದೆ.ಹಳ್ಳಿಯು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿದ ಭಾಗದಲ್ಲಿ ಇರುವುದರಿಂದ, ಕಾಡುಪ್ರಾಣಿಗಳ ಸಂಚಾರ ಸಾಮಾನ್ಯ.

ಆನೆಯ ಹಾವಳಿಯಿಂದ ಆತಂಕಗೊಂಡ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅರಣ್ಯ ಇಲಾಖೆ ಈ ಹಾವಳಿ ಸಂಬಂಧ ತನಿಖೆ ಆರಂಭಿಸಿದ್ದು, ಮುಂದಿನ ಕ್ರಮವಾಗಿ ಆನೆಗೆ ಅರಣ್ಯದೊಳಗೆ ಹಿಂದಿರುಗಿಸಲು ತಜ್ಞರ ನೆರವು ಪಡೆಯುವ ಸಾಧ್ಯತೆ ಇದೆ. ಗ್ರಾಮಸ್ಥರು ಈ ಭಾಗದಲ್ಲಿ ಸೂಕ್ತ ತಡೆಗೋಡೆ ಮತ್ತು ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.