ಬೇಡ್ತಿ-ಅಘನಾಶಿನಿ ನೀರನ್ನು ಬಯಲುಸೀಮೆಗೆ ಒಯ್ಯುವ ಪ್ರಸ್ತಾಪಿತ ಯೋಜನೆ ಅತಾರ್ಕಿಕ ಮತ್ತು ಅವೈಜ್ಞಾನಿಕವಾದದ್ದು.

ಬೇಡ್ತಿ ನದಿ ತಟದಲ್ಲಿ ವೃಕ್ಷಾರೋಪಣ ಸಮಾರಂಭ

ಕನ್ನಡಪ್ರಭ ವಾರ್ತೆ ಯಲ್ಲಾಪುರಬೇಡ್ತಿ-ಅಘನಾಶಿನಿ ನೀರನ್ನು ಬಯಲುಸೀಮೆಗೆ ಒಯ್ಯುವ ಪ್ರಸ್ತಾಪಿತ ಯೋಜನೆ ಅತಾರ್ಕಿಕ ಮತ್ತು ಅವೈಜ್ಞಾನಿಕವಾದದ್ದು. ಕೇವಲ ಮಳೆಗಾಲದಲ್ಲಿ ಮಾತ್ರ ನೀರಿರುವ ಈ ನದಿಯ ನೀರನ್ನು ಹೇಗೆ ಒಯ್ಯಬಹುದು. ಮಳೆಗಾಲದ ನೀರನ್ನು ಸಂಗ್ರಹಿಸಿಡಲು ದೊಡ್ಡ ಜಲಾಶಯ ನಿರ್ಮಾಣ ಮಾಡಬೇಕು. ಅದರಿಂದ ಅರಣ್ಯ ನಾಶ, ಭೂಮಿಯ ಮೇಲೆ ಒತ್ತಡವೂ ಆಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ನೀರಿನ ಒತ್ತಡದಿಂದಾಗಿ ಅನೇಕ ಕಡೆ ಭೂಕುಸಿತವಾಗುತ್ತಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.ಬುಧವಾರ ಬೇಡ್ತಿ ನದಿಯ ತಟದಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಮ್ಮಿಕೊಂಡ ವೃಕ್ಷಾರೋಪಣ ಸಮಾರಂಭದಲ್ಲಿ ಭಾಗವಹಿಸಿ, ಗಿಡ ನೆಟ್ಟು ನೀರುಣಿಸಿ, ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ನದಿಗಳ ನೀರು ಕೃಷಿಗೆ ಯೋಗ್ಯವಾದುದ್ದಲ್ಲ. ಇಲ್ಲಿನ ನೀರನ್ನು ಒಯ್ದರೆ ಇಲ್ಲಿಯೂ ನೀರಿಲ್ಲ, ಅಲ್ಲಿಗೂ ಪೂರೈಕೆಯಾಗುವುದಿಲ್ಲ ಎಂಬುದನ್ನು ವಿಜ್ಞಾನಿಗಳು ವರದಿ ನೀಡಿದ್ದಾರೆ. ಆದರೆ ಸರ್ಕಾರಕ್ಕೆ ಈ ಯೋಜನೆ ಮಾಡುವುದಕ್ಕೆ ಬಹಳ ಆಸಕ್ತಿ ಇದೆ. ಆದ್ದರಿಂದ ನಾವು ಗಂಗಾವಳಿ ತುದಿಯವರೆಗೂ ಅಲ್ಲಲ್ಲಿ ಹೋರಾಟ ಮಾಡಬೇಕು. ಪ್ರತಿಯೊಬ್ಬರೂ ನದಿ ತಟದಲ್ಲಿ ಗಿಡ ನೆಟ್ಟು ಬದುಕಿಸುವಂತೆ ನೋಡಿಕೊಳ್ಳಬೇಕು. ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಪತ್ರ ಬರೆದು ಸಹಿ ಮಾಡಿ, ಮುಖ್ಯಮಂತ್ರಿಗಳಿಗೆ ತಲುಪುವಂತೆ ಮಾಡಬೇಕು ಎಂದ ಶ್ರೀಗಳು, ಬಯಲುಸೀಮೆ ಪ್ರದೇಶಗಳಲ್ಲಿ ೨-೩ ಬೆಳೆ ಬೆಳೆಯಲಾಗುತ್ತದೆ. ಅಲ್ಲದೇ ಪ್ರತಿ ರೈತರಿಗೂ ನೂರಾರು ಏಕರೆ ಜಮೀನಿದೆ. ಮಲೆನಾಡಿನ ರೈತರಿಗೆ ೩ ಏಕರೆ ಇದ್ದರೆ ಹೆಚ್ಚು. ಇಂತಹ ಸ್ಥಿತಿ ಇದೆ. ಆದ್ದರಿಂದ ನಮ್ಮ ಹೋರಾಟ ತೀವೃಗತಿಯಲ್ಲಿ ನಿರಂತರ ಮುಂದುವರೆಯಬೇಕು ಎಂದರು. ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಜಿಲ್ಲೆಯ ೬ ಶಾಸಕರು, ಸಂಸದರು, ೨ ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳು ಒಂದೆಡೆ ಸೇರಿ ಗಟ್ಟಿ ನಿರ್ಣಯ ಕೈಗೊಂಡರೆ ಈ ಯೋಜನೆ ಬರಲು ಸಾಧ್ಯವಿಲ್ಲ. ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಹೋದಾಗ ಅನೇಕ ಜನಪ್ರತಿನಿಧಿಗಳು ಬಾರದಿರುವುದನ್ನು ಗಮನಿಸಿದಾಗ ಜನರಿಗೆ ಅವರ ಭಾವನೆ ಅರ್ಥವಾಗುತ್ತದೆ ಎಂದರು. ಹಿರಿಯ ಚಿಂತಕ ಪ್ರಮೋದ ಹೆಗಡೆ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಡೆದ ಎಲ್ಲ ಹೋರಾಟಗಳು ಯಶಸ್ವಿಯಾಗಿ ನಡೆದಿದೆ. ₹೨೫ ಕೋಟಿ ವೆಚ್ಚದಲ್ಲಿ ಬೇಡ್ತಿಯಿಂದ ಯಲ್ಲಾಪುರಕ್ಕೆ ನೀರು ತರುವ ಯೋಜನೆ ಸಂಪೂರ್ಣ ವಿಫಲವಾಗಿದೆ. ಜನರ ಹಣ ವ್ಯರ್ಥವಲ್ಲವೇ? ಯಲ್ಲಾಪುರಕ್ಕೆ ನೀರು ತರಲಾಗದ ಸರ್ಕಾರ ಗದಗಿಗೆ ನೀರು ಒಯ್ಯಬಹುದೇ ? ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಲ್ಲಿ ೭ ಜಲವಿದ್ಯುತ್ ಯೋಜನೆ ಮಾಡಲಾಗಿದೆ. ಇದರಿಂದಾಗಿಯೇ ಕಳಚೆ ಸೇರಿದಂತೆ ಅನೇಕ ಗುಡ್ಡೆಗಳು ಕುಸಿಯುತ್ತಿದೆ. ಹೀಗೆಯೇ ಮುಂದುವರೆದರೆ ಅರಬೈಲ್ ಘಟ್ಟದ ಸಂಪೂರ್ಣ ಪ್ರದೇಶವೇ ಹೋದೀತು ಎಂದು ವಿಜ್ಞಾನಿಗಳು ವರದಿ ನೀಡಿದ್ದಾರೆ. ಇದು ಸಾವಿರಾರು ಕೋಟಿ ರೂ ವೆಚ್ಚ ಮಾಡಿ ದುಡ್ಡು ಹೊಡೆಯುವ ಹುನ್ನಾರವೇ? ಎಂದು ಪ್ರಶ್ನಿಸಿದರು.ಸ್ವರ್ಣವಲ್ಲೀ ಶ್ರೀಮಠದ ಕಾರ್ಯಾಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಹೋರಾಟ ಸಮಿತಿಯ ಮುಖ್ಯಸ್ಥ ಅನಂತ ಭಟ್ಟ ಹುಳಗೋಳ ಹೋರಾಟದ ಮುಂದಿನ ಕಾರ್ಯಯೋಜನೆಯ ಮಾಹಿತಿ ನೀಡಿದರು. ಕೊಳ್ಳ ಸಂರಕ್ಷಣಾ ಸಮಿತಿ ಸಂಚಾಲಕ ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ಶ್ರೀಲತಾ ರಾಜೀವ ಹೆಗಡೆ ಪರಿಸರಗೀತೆ ಹಾಡಿದರು. ಎಂ.ಕೆ. ಭಟ್ಟ ಯಡಳ್ಳಿ ನಿರ್ವಹಿಸಿದರು. ಸುಬ್ರಾಯ ಭಟ್ಟ ಉದ್ದಾಬೈಲ್ ವಂದಿಸಿದರು.