ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅಗರ ಹಾಗೂ ಮುದ್ದೂರು ದೊಡ್ಡ ಕೆರೆಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿಪಡಿಸಿ ಬೆಂಗಳೂರು ನಗರದ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ನೀರೊದಗಿಸಲು ರೂಪಿಸಿರುವ ಯೋಜನೆಯನ್ನು ಅವೈಜ್ಞಾನಿಕವಾಗಿದ್ದು, ಇದನ್ನು ಸರ್ಕಾರ ಕೈಬಿಡುವಂತೆ ಶಾಸಕ ಎ.ಆರ್. ಕೃಷ್ಣಮೂರ್ತಿ ಆಗ್ರಹಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವಾನ್ ಪೂರ್ಣಯ್ಯರವರ ಕಾಲದಲ್ಲಿ ಸುವರ್ಣಾವತಿ ನದಿಯ ಭಾಗವಾಗಿ ಸರಣಿ ಕೆರೆಗಳನ್ನು ಬಹಳ ಯೋಜಿತವಾಗಿ ನಿರ್ಮಿಸಲಾಗಿರುತ್ತದೆ. ಕಬಿನಿ ಬಲದಂಡೆ ನಾಲೆಯನ್ನು ಅನುಷ್ಠಾನಗೊಳಿಸಿದ ನಂತರ ಗಣಿಗನೂರು ಪಿಕಪ್ ನಿರ್ಮಿಸಿ ಅಗರ ಕೆರೆಗೆ ಸಂಪರ್ಕ ಕಲ್ಪಿಸಲಾಗಿರುತ್ತದೆ. ಆರು ಸರಣಿ ಕೆರೆಗಳನ್ನು ನಿರ್ಮಿಸಲಾಗಿದ್ದು, ಸದರಿ ಸರಣಿ ಕೆರೆಗಳ ಪೈಕಿ ಅಗರ ಮತ್ತು ಮುದ್ದೂರು ಕೆರೆಯು ಅತ್ಯಂತ ಪ್ರಮುಖ ಕೆರೆಗಳಾಗಿವೆ ಎಂದರು.
ಈ ಯೋಜನೆ ರೂಪಿಸುವಾಗ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಸಂಸದರ ಕರೆದು ಸಭೆ ನಡೆಸಿ, ಸಾಧಕ ಭಾದಕಗಳ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು, ಈ ಎರಡು ದೊಡ್ಡ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸಿ, ಅಭಿವೃದ್ಧಿಪಡಿಸಿ ೧೫೦ ಕಿ.ಮೀ, ದೂರದ ಬೆಂಗಳೂರು ನಗರದ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ನೀರೆತ್ತಿ ಪೈಪ್ ಲೈನ್ ಮೂಲಕ ನೀರು ಪೂರೈಸಬೇಕಾದರೆ ಸುಮಾರು ೧೫೦೦ ಕೋಟಿ ರು.ಗಳು ಬೇಕು, ಇದೊಂದು ಅವೈಜ್ಞಾನಿಕ ಯೋಜನೆ ಎಂದರು.ಇದರ ಬದಲು ಮೇಕೆದಾಟು ಬಳಿಯಿಂದ ನೀರು ಪೂರೈಸಬಹುದು, ಅಗರ ಕೆರೆಯ ಸಂಗ್ರಹಣಾ ಸಾಮರ್ಥ್ಯ ೦.೧೫೬ ಟಿ.ಎಂ.ಸಿ ಆಗಿದ್ದು, ೧೫೩೪ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡಿರುತ್ತದೆ ಮತ್ತು ಕೆರೆಯ ವಿಸ್ತೀರ್ಣ ೮೯೨ ಎಕರೆ ಆಗಿರುತ್ತದೆ. ಮದ್ದೂರು ಕೆರೆಯ ಸಂಗ್ರಹಣಾ ಸಾಮರ್ಥ್ಯ ೦.೧೧೧ ಟಿ.ಎಂ.ಸಿ ಆಗಿದ್ದು, ೯೫೧ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡಿರುತ್ತದೆ ಮತ್ತು ಕೆರೆಯ ವಿಸ್ತೀರ್ಣ ೭೪೨ ಎಕರೆ ಆಗಿದ ಎಂದರು.
ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟದಲ್ಲಿ ಆದ ತೀರ್ಮಾನದಂತೆ ಅನುದಾನ ನೀಡಿದರೆ ಜಿಲ್ಲೆಯ ನೀರಾವರಿ ಯೋಜನೆಗಳು ಅಭಿವೃದ್ಧಿಯಾಗುತ್ತದೆ ಸದರಿ ಕೆರೆಗಳಲ್ಲಿ ಶೇಖರಣೆಯಾಗುವ ನೀರನ್ನು ಉಪಯೋಗಿಸಿಕೊಂಡು ರೈತರು ಸ್ವಾತಂತ್ರ್ಯ ಪೂರ್ವದ ಕಾಲದಿಂದಲೂ ಭತ್ತದ ಬೆಳೆಯನ್ನು ಬೆಳೆಯುತ್ತಿದ್ದರು. ಕಬಿನಿ ಯೋಜನೆಯನ್ನು ಅನುಷ್ಠಾನಗೊಳಿಸಿದ ನಂತರ ಸದರಿ ಕೆರೆಗಳ ಅಚ್ಚುಕಟ್ಟು ಪ್ರದೇಶವನ್ನು ಅರೆ ನೀರಾವರಿ ಬೆಳೆಗೆ ಒಳಪಡಿಸಲಾಗಿದೆ ಎಂದರು.ಸರಣಿ ಕೆರೆಗಳನ್ನು ಖಾರೀಪ್ ಅವಧಿಗೆ ಮುನ್ನ ಸಂಪೂರ್ಣವಾಗಿ ತುಂಬಿಸಲು ಕೆರೆಗಳ ಸಮಗ್ರ ಅಭಿವೃದ್ಧಿ ಮತ್ತು ಅಚ್ಚುಕಟ್ಟು ಪ್ರದೇಶಕ್ಕೆ ಋತುಮಾನಕ್ಕೆ ಅನುಗುಣವಾಗಿ ನೀರನ್ನು ಒದಗಿಸಲು ಅನುವಾಗುವಂತೆ ಈಗಾಗಲೇ ಜಲಸಂಪನ್ಮೂಲ ಇಲಾಖೆ ವತಿಯಿಂದ ಯೋಜನೆಯನ್ನು ರೂಪಿಸಲಾಗಿದ್ದು ಜನವರಿ ಮಾಹೆಯಲ್ಲಿ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.
ನದಿಯ ಬಲಭಾಗದ ಕೆರೆಗಳಿಗೆ ನೀರು ತುಂಬಿಸಿ ನಂತರ ನದಿಯನ್ನು ಹಾದುಹೋಗುವಂತೆ ಪೈಪ್‌ಲೈನ್ ಅಳವಡಿಸುವುದು ತಾಂತ್ರಿಕವಾಗಿಯೂ ಸರಿಯಾದ ಯೋಜನೆಯಲ್ಲ ಮತ್ತು ಸಮರ್ಪಕವಲ್ಲ. ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು ವಿಶಾಲವಾದ ಕಾವೇರಿ ನದಿಗೆ ಸೂಕ್ತವಾದ ಸ್ಥಳದಲ್ಲಿ ಸೇತುವೆ ಮತ್ತು ಬ್ಯಾರೇಜ್ ನಿರ್ಮಿಸಿದರೆ ಅಲ್ಲಿಂದ ನೀರನ್ನು ಒದಗಿಸಬಹುದು ಎಂದರು.ನದಿಯ ಬಲಭಾಗದ ಈ ಎರಡು ಕೆರೆಗಳನ್ನು ತುಂಬಿಸಿ ಮತ್ತೆ ಕೆರೆಗಳಿಂದ ನೀರನ್ನು ಎತ್ತಿ ಬೆಂಗಳೂರು ನಗರದ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಒದಗಿಸುವುದು ಅತ್ಯಂತ ಅವೈಜ್ಞಾನಿಕ ಮತ್ತು ದುಬಾರಿ ಯೋಜನೆಯಾಗುತ್ತದೆ. ಹಾಗಾಗಿ ಪ್ರಸ್ತುತ ಕೆರೆಗಳಿಂದ ನೀರನ್ನು ಎತ್ತಿ ಕೊಂಡೊಯ್ಯುವ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷ ಹೊಂಗನೂರು ಚಂದ್ರು, ಮುಖಂಡರಾದ ಆರ್. ಮಹದೇವ್, ಯೋಗೀಶ್, ತೋಂಟೇಶ್, ಪ್ರಭುಪ್ರಸಾದ್ ಇದ್ದರು.ಸ