ಕಾರ್ಮಿಕರನ್ನು ಜೀತದಾಳಾಗಿ ಮಾಡುವ ಹುನ್ನಾರ: ಭಾಸ್ಕರ ರೆಡ್ಡಿ

| Published : May 05 2025, 12:45 AM IST

ಸಾರಾಂಶ

ಕೇಂದ್ರ ಸರ್ಕಾರಕ್ಕೆ ಅಂಬಾನಿ, ಅದಾನಿ ಮಾತ್ರ ಪ್ರಜೆಗಳಾಗಿ ಕಾಣುತ್ತಾರೆ. ಉಳಿದಂತೆ ಕಾರ್ಮಿಕರು ಜೀತದಾಳಾಗಿ ಕಾಣುತ್ತಾರೆ. ಹೀಗಾಗಿಯೇ ಕಾರ್ಮಿಕರ ಹಕ್ಕುಗಳನ್ನು ಕಸಿದು ಖಾಸಗೀಕರಣದ ಕಪಿಮುಷ್ಟಿಯಲ್ಲಿಡುವ ಹುನ್ನಾರ ನಡೆದಿದೆ.

ಕೂಡ್ಲಿಗಿಯಲ್ಲಿ ಸಿಐಟಿಯುನಿಂದ ಕಾರ್ಮಿಕರ ದಿನಾಚರಣೆ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಕೇಂದ್ರ ಸರ್ಕಾರಕ್ಕೆ ಅಂಬಾನಿ, ಅದಾನಿ ಮಾತ್ರ ಪ್ರಜೆಗಳಾಗಿ ಕಾಣುತ್ತಾರೆ. ಉಳಿದಂತೆ ಕಾರ್ಮಿಕರು ಜೀತದಾಳಾಗಿ ಕಾಣುತ್ತಾರೆ. ಹೀಗಾಗಿಯೇ ಕಾರ್ಮಿಕರ ಹಕ್ಕುಗಳನ್ನು ಕಸಿದು ಖಾಸಗೀಕರಣದ ಕಪಿಮುಷ್ಟಿಯಲ್ಲಿಡುವ ಹುನ್ನಾರ ನಡೆದಿದೆ ಎಂದು ಸಿಐಟಿಯು ವಿಜಯನಗರ ಜಿಲ್ಲಾ ಹಿರಿಯ ಮುಖಂಡ ಭಾಸ್ಕರ ರೆಡ್ಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ತಾಲೂಕು ಸಿಐಟಿಯು ಸಂಘಟನೆ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾರ್ಮಿಕರು ಈ ದೇಶದ ಶಿಲ್ಪಿಗಳಾಗಿದ್ದು, ಭೌತಿಕವಾಗಿ ಈ ದೇಶ ಕಟ್ಟಿರುವ ಕಾರ್ಮಿಕರು, ಉಳ್ಳವರಿಗೆ ಮನೆ-ಮಹಲು ಕಟ್ಟಿ, ಅವರು ಮಾತ್ರ ಇಂದಿಗೂ ಜೋಪಡಿ, ಗುಡಿಸಲುಗಳಿಲ್ಲಿಯೇ ವಾಸ ಮಾಡುವ ದುಸ್ಥಿತಿ ಇದೆ. ಕಾರ್ಮಿಕರ ಅಧೋಗತಿಯ ಜೀವನಕ್ಕೆ ಸರ್ಕಾರಗಳೇ ಕಾರಣವಾಗಿದ್ದು, ಕೆಲವೇ ಕೆಲವು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನು ಮಾಡುವತ್ತ ಸರ್ಕಾರಗಳು ಹೆಜ್ಜೆ ಇಟ್ಟಿವೆ. ಈ ದೇಶದ ಬಹುಜನ ಹಿತದ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲ. ಧ್ವನಿ ಇಲ್ಲದ ಜನತೆಗೆ ಧ್ವನಿಯಾಗುವ ಬದಲು ಉಳ್ಳವರ ಜತೆಗೆ ಕೈ ಜೋಡಿಸಿ, ದೇಶಾದ್ಯಂತ ಖಾಸಗೀಕರಣದ ಮೂಲಕ ಜನಸಾಮಾನ್ಯರ ಬದುಕಿಗೆ ಕೊಳ್ಳಿ ಇಡುತ್ತಿರುವುದು ಈ ದೇಶದ ದುರ್ದೈವದ ಸಂಗತಿ ಎಂದರು.

ಸಿಐಟಿಯು ಕೂಡ್ಲಿಗಿ ತಾಲೂಕು ಯುವ ಮುಖಂಡ ಗುನ್ನಳ್ಳಿ ರಾಘವೇಂದ್ರ ಮಾತನಾಡಿ, ಕಾರ್ಮಿಕರ ರಕ್ಷಣೆಗೆ ಯಾವ ಸರ್ಕಾರವೂ ಬರುತ್ತಿಲ್ಲ. ನಮ್ಮ ಹಕ್ಕುಗಳ ಬಗ್ಗೆ ನಾವೇ ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ಕಾರ್ಮಿಕರು ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.

ವಕೀಲ ಸಿ. ವಿರೂಪಾಕ್ಷಿ, ಶಿಕ್ಷಕ ಶಶಿಧರಸ್ವಾಮಿ, ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಸಿಡೇಗಲ್ಲು ಯರಿಸ್ವಾಮಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕರಿಯಪ್ಪ, ಉಪಾಧ್ಯಕ್ಷ ಹೂಲೆಪ್ಪ, ಬೆಳ್ಳಗಟ್ಟೆ ಗ್ರಾಪಂ ಸ್ವಚ್ಛವಾಹನ ಚಾಲಕಿ ಶಿಲ್ಪಾ, ಬಯಲುತುಂಬರಗುದ್ದಿ ಚಂದ್ರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣದ ಗಾಂಧೀಜಿ ಚಿತಾಭಸ್ಮವಿರುವ ಸ್ಮಾರಕದಿಂದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಆನಂತರ ಪ್ರವಾಸಿ ಮಂದಿರದಲ್ಲಿ ಎಲ್ಲ ಕಾರ್ಮಿಕರು ಸೇರಿ ಕಾರ್ಮಿಕರ ದಿನಾಚರಣೆ ಆಚರಿಸಿದರು. ಚಂದ್ರು ಸ್ವಾಗತಿಸಿದರು. ಸಿ. ವಿರೂಪಾಕ್ಷಿ ಕಾರ್ಯಕ್ರಮ ನಿರೂಪಿಸಿದರು.