ಗಮನ ಸೆಳೆದ ‘ಆಳಿದ ಮಾಸ್ವಾಮಿ’ ನಾಟಕ ಪ್ರದರ್ಶನ

| Published : Sep 02 2025, 12:00 AM IST

ಸಾರಾಂಶ

ಕೆಆರ್‌ಎಸ್ ಜಲಾಶಯದ ತಳಭಾಗ ಕಟ್ಟೇರಿಯಿಂದ ಬೆಂಗಳೂರಿನ ಕುಡಿಯುವ ನೀರು ಪೂರೈಕೆ ಮಾಡುವ 6ನೇ ಹಂತದ ಯೋಜನೆಯಿಂದ ಮುಂದಿನ ದಿನಗಳಲ್ಲಿ ವಿಶ್ವೇಶ್ವರಯ್ಯ ನಾಲೆಯ ಕೊನೆ ಭಾಗವಾದ ಮಳವಳ್ಳಿ ಮತ್ತು ಮದ್ದೂರು ಭಾಗದ ರೈತರಿಗೆ ಮರಣ ಶಾಸನವಾಗಲಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಳ್ಳಗೆರೆ ಆರ್.ರವಿಕಿರಣ್ ಅವರ ರಚನೆಯ ದಿನೇಶ್ ಚಮ್ಮಾಳಿಗೆ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ‘ಆಳಿದ ಮಾಸ್ವಾಮಿ’ ನಾಟಕ ಪ್ರದರ್ಶನ ಎಲ್ಲರೂ ಗಮನ ಸೆಳೆಯಿತು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಂಜೆ ಬೆಂಗಳೂರಿನ ಕುಡಿಯುವ ನೀರಿನ 6ನೇ ಹಂತದ ಯೋಜನೆ ವಿರೋಧಿಸಿ ಜನಜಾಗೃತಿಯ ಭಾಗವಾಗಿ ಸಂಪೂರ್ಣ ಸಾವಯವ ಕೃಷಿಕರ ಸಂಘ ಹಾಗೂ ಜಿಲ್ಲಾ ಕಾವೇರಿ ಹಿತರಕ್ಷಣಾ ಸಮಿತಿ ಸಹಯೋಗದೊಂದಿಗೆ ಆಯೋಜಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನಾಧಾರಿತ ‘ಆಳಿದ ಮಾಸ್ವಾಮಿ’ಗಳು ನಾಟಕ ಪ್ರದರ್ಶನಕ್ಕೆ ಅರ್ಜುನಹಳ್ಳಿ ಪ್ರಸನ್ನಕುಮಾರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕೆಆರ್‌ಎಸ್ ಜಲಾಶಯದ ತಳಭಾಗ ಕಟ್ಟೇರಿಯಿಂದ ಬೆಂಗಳೂರಿನ ಕುಡಿಯುವ ನೀರು ಪೂರೈಕೆ ಮಾಡುವ 6ನೇ ಹಂತದ ಯೋಜನೆಯಿಂದ ಮುಂದಿನ ದಿನಗಳಲ್ಲಿ ವಿಶ್ವೇಶ್ವರಯ್ಯ ನಾಲೆಯ ಕೊನೆ ಭಾಗವಾದ ಮಳವಳ್ಳಿ ಮತ್ತು ಮದ್ದೂರು ಭಾಗದ ರೈತರಿಗೆ ಮರಣ ಶಾಸನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೆಆರ್‌ಎಸ್ ಜಲಾಶಯ ನಿರ್ಮಾಣವನ್ನು 80 ಅಡಿಗೆ ಒಪ್ಪದೇ ಅಧಿಕಾರಿ ಹೋಗಿ ಬಂಧನವಾದರೂ ಸರಿ ಎಂದು ಬ್ರಿಟಿಷ್ ಸರ್ಕಾರಕ್ಕೆ ಸೆಡ್ಡು ಹೊಡೆದು 94 ಅಡಿ ಎತ್ತರದ ಅಣೆಕಟ್ಟೆ ನಿರ್ಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿತ್ವ ಹಾಗೂ ದಿಟ್ಟ ತೀರ್ಮಾನದಿಂದ ಮಂಡ್ಯ ಜಿಲ್ಲೆಯ ಪ್ರದೇಶ ಬಹುತೇಕ ನೀರಾವರಿಯಿಂದ ಕೂಡಿದೆ. ಆದರೆ, ನ್ಯಾಯಾಧೀಕರಣದ ಮುಂದೆ ಸಮರ್ಥ ವಾದ ಮಂಡಿಸದ ರಾಜ್ಯವನ್ನಾಳಿದ ಸರ್ಕಾರಗಳು ರೈತರ ಹಿತರಕ್ಷಣೆ ಕಾಯುವಲ್ಲಿ ವಿಫಲವಾದ್ದವು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಷ್ಟು ಎಕರೆಯಲ್ಲಿ ಇಂತಹ ಬೆಳೆಯನ್ನೇ ಬೆಳೆಯಬೇಕು ಎನ್ನುವ ಅಧಿಕಾರ ನ್ಯಾಯಾಧೀಕರಣಕ್ಕಿಲ್ಲ. ಅಲ್ಲದೇ, ಸರ್ಕಾರಗಳು ಸಹ ನ್ಯಾಯಯುತ ವಾದ ಮಂಡಿಸಿಲ್ಲ. ಇದರ ನಡುವೆ ಸರ್ಕಾರ ಜಲಾಶಯದ ಗೇಟ್ ಬಳಿಯಿಂದಲೇ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ 6ನೇ ಹಂತದ ಯೋಜನೆಗೆ ಮುಂದಾಗಿದೆ. ಒಂದು ವೇಳೆ ಅದು ಜಾರಿಯಾದರೆ ಈ ಭಾಗದ ರೈತರು ಒಂದು ಬೆಳೆ ಬೆಳೆಯಲು ಸಹ ಪರದಾಡುವ ಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯೋಜನೆಯಲ್ಲಿ ತೊರೆಕಾಡನಹಳ್ಳಿ ಅಥವಾ ಮೇಕೆದಾಟಿನಿಂದ ನೀರು ಪೂರೈಕೆ ಮಾಡಲು ಯಾವುದೇ ತೊಂದರೆ ಇಲ್ಲ. ಆದರೆ, ಕಟ್ಟೇರಿಯಿಂದ ನೀರು ಪೂರೈಕೆ ಮಾಡುವ ಯೋಜನೆ ಜಾರಿಗೆ ಜಿಲ್ಲೆಯ ರೈತರು ಹಾಗೂ ಸಂಘಟನೆಗಳು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಸಂಪೂರ್ಣ ಸಾವಯವ ಕೃಷಿಕರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಮಾತನಾಡಿ, ಕಟ್ಟೇರಿಯಿಂದ ನೀರು ಪೂರೈಕೆ ಯೋಜನೆ ವಿರೋಧಿಸಿ ಜನರಲ್ಲಿ ಜಾಗೃತಿ ಮೂಡಿಸುವ ಭಾಗವಾಗಿ ಈ ನಾಟಕ ಪ್ರದರ್ಶನ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ಬದಲಾಗಿದೆ. ಕನ್ನಂಬಾಡಿ ಉಳಿಸಿ ಅಭಿಯಾನಕ್ಕೆ ಎಲ್ಲರೂ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಸುನಂದಾ ಜಯರಾಂ, ಪ್ರಮುಖರಾದ ಮುದ್ದೇಗೌಡ, ಕೆಂಪೇಗೌಡ, ಜಯ ಕರ್ನಾಟಕ ಸಂಘಟನೆ ನಾರಾಯಣ, ಧನಗೂರು ಮಠದ ಶ್ರೀ ಷಡಕ್ಷರ ಸ್ವಾಮೀಜಿ, ಬಿ.ಜಿ.ಪುರ ಶ್ರೀ ಮಂಟೇಸ್ವಾಮಿ ಮಠದ ಭರತ್ ರಾಜೇಅರಸ್, ಸಂಘದ ಮುಖಂಡರಾದ ಚಿಕ್ಕಣ್ಣ, ಶಿವಕುಮಾರ್ ಇದ್ದರು.