ಗೌರವ ಕೊಟ್ಟು ಮಾತನಾಡಿ ಎಂದ ಸೈನಿಕನಿಗೆ ಥಳಿಸಿದ ಪೊಲೀಸರು!

| Published : Feb 15 2025, 12:30 AM IST

ಗೌರವ ಕೊಟ್ಟು ಮಾತನಾಡಿ ಎಂದ ಸೈನಿಕನಿಗೆ ಥಳಿಸಿದ ಪೊಲೀಸರು!
Share this Article
  • FB
  • TW
  • Linkdin
  • Email

ಸಾರಾಂಶ

ಸೈನಿಕನ ಮೇಲೆ ಪೊಲೀಸರು ನಡೆಸಿದ ಹಲ್ಲೆಯನ್ನು ಖಂಡಿಸಿ ಮಾಜಿ ಸೈನಿಕರ ಸಂಘದ ಸದಸ್ಯರು ಅಥಣಿ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣದ ಶಿವಯೋಗಿ ವೃತ್ತದಲ್ಲಿ ರಸ್ತೆ ಬದಿ ವಾಹನದೊಂದಿಗೆ ನಿಂತಿದ್ದ ಸೈನಿಕನಿಗೆ ಪೊಲೀಸರು ಏಕವಚನದಲ್ಲಿ ಮಾತನಾಡಿದ್ದರಿಂದ ಬೇಸರಗೊಂಡ ಸೈನಿಕನೋರ್ವ ಗೌರವಕೊಟ್ಟು ಮಾತನಾಡಿ ಎಂದು ಪೊಲೀಸರಿಗೆ ಮರಳಿ ಹೇಳಿದ್ದರಿಂದ ಉಂಟಾದ ವಾಗ್ವಾದದಲ್ಲಿ ಪೊಲೀಸರು ಸೈನಿಕನಿಗೆ ನಡುರಸ್ತೆಯಲ್ಲಿಯೇ ಹಿಗ್ಗಮುಗ ತಿಳಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಸೈನಿಕನ ಮೇಲೆ ಪೊಲೀಸರು ನಡೆಸಿದ ಹಲ್ಲೆಯನ್ನು ಖಂಡಿಸಿ ಮಾಜಿ ಸೈನಿಕರ ಸಂಘದ ಸದಸ್ಯರು ಅಥಣಿ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಕರ್ತವ್ಯದಲ್ಲಿದ್ದ ಪೊಲೀಸರು ಅನುಚಿತವಾಗಿ ವರ್ತಿಸಿದ್ದು ತಪ್ಪಾಗಿದೆ. ಸೈನಿಕರ ಬಗ್ಗೆ ನಮಗೆ ಯಾವತ್ತೂ ಗೌರವವಿದೆ. ಸೈನಿಕರು ಎಂಬುದು ಗೊತ್ತಾಗದೆ ಈ ಘಟನೆ ನಡೆದಿದೆ. ಮುಂಬರುವ ದಿನಗಳಲ್ಲಿ ಹೀಗಾಗದಂತೆ ನಮ್ಮ ಸಿಬ್ಬಂದಿಗೆ ಸೂಚನೆ ನೀಡುತ್ತೇನೆ. ಸೈನಿಕರು ಯಾವುದೇ ರೀತಿ ಪ್ರತಿಭಟನೆ ಮಾಡಬಾರದು. ತಮ್ಮ ಮನಸ್ಸಿಗೆ ನೋವಾಗಿದ್ದರೆ ನಾವು ಕ್ಷಮೆ ಕೋರುತ್ತೇವೆ ಎಂದು ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ ಕ್ಷಮೆಯಾಚಿಸಿದ ಬಳಿಕ ಮಾಜಿ ಸೈನಿಕರು ಪ್ರತಿಭಟನೆ ಹಿಂಪಡೆದರು.

ಹಲ್ಲೆಗೊಳಗಾದ ಯೋಧ ಮಲ್ಲಿಕಾರ್ಜುನ ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ ನಾನು ದ್ವಿಚಕ್ರ ವಾಹನದ ಮೇಲೆ ಹೋಗುವಾಗ ಸರ್ಕಲ್ ದಾಟಲು ನಿಂತಾಗ ಪೊಲೀಸರು ಅವಾಚ್ಯ ಶಬ್ಧಗಳಿಂದ ನನ್ನನ್ನು ನಿಂದಿಸಿದರು. ನಾನು ಅವರಿಗೆ ಹಾಗೆ ಮಾತನಾಡಬೇಡಿ ಗೌರವ ಕೊಟ್ಟು ಮಾತನಾಡಿ ಎಂದು ಹೇಳಿದ್ದಕ್ಕೆ ನನ್ನ ಬೈಕ್ ಕೀಲಿಯನ್ನು ಕಸಿದುಕೊಂಡು ಪೊಲೀಸ್ ಠಾಣೆಗೆ ನಡಿ ಎಂದು ಅವಾಚ್ಯವಾಗಿ ನಿಂದಿಸಿ ಐದಾರು ಪೊಲೀಸರು ಸೇರಿ ನಡು ರಸ್ತೆಯಲ್ಲೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಠಾಣೆಗೆ ಕರೆತಂದು ಅಲ್ಲಿಯೂ ಅವಾಚ್ಯವಾಗಿ ನಿಂದಿಸಿದ್ದಾರೆ. ನಾವು ಸಹ ದೇಶ ಸೇವೆ ಮಾಡುವ ಯೋಧನಾಗಿದ್ದು, ಆದರೆ ನಮಗೆ ಸ್ಥಳೀಯವಾಗಿ ಈ ತರಹ ಅಗೌರವ ತೋರಿದ್ದು ಬೇಸರ ತಂದಿದೆ. ಅಲ್ಲದೆ ಪೊಲೀಸರು ಜನಸ್ನೇಹಿ ಇರಬೇಕೆ ಹೊರತು ಜನಸಾಮಾನ್ಯರ ಮೇಲೆ ಈ ರೀತಿ ದಬ್ಬಾಳಿಕೆ, ಅವಾಚ್ಯ ಶಬ್ಧಗಳನ್ನು ಬಳಸಿ ಮಾತನಾಡುವುದು ಸರಿಯಲ್ಲ ಎಂದು ಪೊಲೀಸರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸೈನಿಕ ಗುರಪ್ಪಾ ಮಗದುಮ್ ಮಾತನಾಡಿ, ವೀರ ಮರಣ ಹೊಂದಿದ ಯೋಧರಿಗೆ ಇಡೀ ದೇಶದಲ್ಲಿಯೇ ಸಾಕಷ್ಟು ಗೌರವ ನೀಡುತ್ತಿದ್ದಾರೆ. ಆದರೆ ಸ್ಥಳೀಯವಾಗಿ ಪೊಲೀಸರು ಈ ತರಹ ವರ್ತನೆ ಮಾಡಿದ್ದು ಖಂಡನಿಯ. ಇದನ್ನು ಖಂಡಿಸಿ ನಾವು ಠಾಣೆಗೆ ಮುತ್ತಿಗೆ ಹಾಕಲು ಹೋಗಿದ್ದೆವು. ಆದರೆ ಪೊಲೀಸರು ಬಹಿರಂಗವಾಗಿ ಯೋಧನಿಗೆ ಕ್ಷಮೆ ಕೇಳಿದ್ದಕ್ಕೆ ಮುತ್ತಿಗೆ ಹಿಂಪಡೆದುಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಸೈನಿಕರಿಗೆ ಅಥವಾ ಜನಸಾಮಾನ್ಯರಿಗೆ ಈ ರೀತಿ ಅವಾಚ್ಯ ಶಬ್ಧಗಳಿಂದ ನಿಂದಿಸಬಾರದು. ರಸ್ತೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ಕಾನೂನು ರೀತಿ ಕ್ರಮ ಕೈಗೊಳ್ಳಲಿ ಆದರೆ ಇಂತಹ ಘಟನೆಗಳು ಮರಳಿಸಬಾರದು ಎಂದು ಹೇಳಿದರು.