ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆಮಕ್ಕಳು, ಮಹಿಳೆಯರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಇಲಾಖೆಗಳು, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಪೊಲೀಸ್ ಇಲಾಖೆ ಜೊತೆಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಕರೆ ನೀಡಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಗುರುವಾರ ಇಲಾಖೆಯಿಂದ ನೊಂದ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಹಿಳೆಯರು, ಮಕ್ಕಳ ರಕ್ಷಣೆಗೆ ನೀವೆಲ್ಲರೂ ಪೊಲೀಸ್ ಇಲಾಖೆ ಜೊತೆಗೆ ಕೈಜೋಡಿಸಬೇಕು. ಪೊಲೀಸ್ ಇಲಾಖೆ ಜೊತೆಗೆ ಏನಾದರೂ ಸಮಸ್ಯೆ ಇದ್ದರೆ, ಕೆಲಸ ಆಗುವುದಿದ್ದರೆ ತಕ್ಷಣವೇ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು, ಮಕ್ಕಳ ರಕ್ಷಣಾಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ ತಕ್ಷಣೆ ಸ್ಪಂದಿಸುವುದಾಗಿ ಅವರು ತಿಳಿಸಿದರು.
ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ದುರ್ಗಾ ಪಡೆ ಸ್ಥಾಪಿಸಲಾಗಿದೆ. ದುರ್ಗಾ ಪಡೆಯು ಮಹಿಳಾ ಮತ್ತು ಮಕ್ಕಳ ರಕ್ಷಣೆ, ನೆರವಿಗೆ ಸದಾ ಸಿದ್ಧವಿದೆ. ನೀವೂ ಸಹ ಇಲಾಖೆ, ದುರ್ಗಾ ಪಡೆ ಜೊತೆ ಸಂಪರ್ಕದಲ್ಲಿರಿ ಎಂದು ಅವರು ಮನವಿ ಮಾಡಿದರು. ಇದೇ ವೇಳೆ ವಿವಿಧ ಇಲಾಖೆ ಅಧಿಕಾರಿಗಳು ಮಾತನಾಡಿ, ಕೌಟುಂಬಿಕ ಸಮಸ್ಯೆಯಿಂದ ನೊಂದ ಮಹಿಳೆಯರು ಪೊಲೀಸ್ ಠಾಣೆಗೆ ದೂರು ನೀಡಬಹುದಾಗಿದ್ದು, ಅಂತಹವರಿಗಾಗಿ ಸಾಂತ್ವನ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಅಲ್ಲಿ ಆಪ್ತ ಸಮಾಲೋಚನೆ ಮೂಲಕ ಸಮಸ್ಯೆ ಬಗೆಹರಿಯದಿದ್ದರೆ, ಎದುರುದಾರರು ಪತ್ತೆಯಾಗದಿದ್ದರೆ ಅಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆ ನೆರವು ಒದಗಿಸಲಾಗುತ್ತದೆ ಎಂದು ತಿಳಿಸಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ, ನ್ಯಾ. ಮಹಾವೀರ ಮ. ಕರೆಣ್ಣವರ ಮಾತನಾಡಿ ಎಂ.ಸಂತೋಷ್, ಜಿ. ಮಂಜುನಾಥ, ಡಿವೈಎಸ್ಪಿಗಳಾದ ಮಲ್ಲೇಶ ದೊಡ್ಮನಿ, ಬಿ.ಎಸ್. ಬಸವರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಾನಾಯ್ಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಇತರರು ಇದ್ದರು.
ಮಕ್ಕಳು, ಮಹಿಳೆಯರ ವಿಚಾರದಲ್ಲಿ ಉದಾಸೀನ ಮಾಡದಿರಿಮಕ್ಕಳು, ಮಹಿಳೆಯರ ವಿಚಾರದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಉದಾಸೀನ ಮಾಡದೇ, ತಕ್ಷಣವೇ ಸ್ಪಂದಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ತಾಕೀತು ಮಾಡಿದರು. ಮಹಿಳೆಯರ ನೆರವಿಗೆ ಬಾರದ ಬಗ್ಗೆ ಸಾಕಷ್ಟು ದೂರು ಇದೆ. ಯಾವುದೇ ಮಹಿಳೆ ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ಪೊಲೀಸ್ ಠಾಣೆ ಮೆಟ್ಟಿಲೇರುವುದಿಲ್ಲ. ಪರಿಸ್ಥಿತಿ ಕೈಮೀರಿದಾಗ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಠಾಣೆಗೆ ಬರುತ್ತಾಳೆ. ಈ ಹಿನ್ನೆಲೆಯಲ್ಲಿ ಯಾವೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಹ ಅಸಡ್ಡೆ ಮಾಡದೇ, ನ್ಯಾಯ ಅರಸಿ ಬಂದವರಿಗೆ ಒಂದಿಷ್ಟು ಧೈರ್ಯ ಹೇಳಿ, ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಸಂತ್ರಸ್ಥ ಮಗು, ಮಹಿಳೆ ಬಂದು ದೂರು ನೀಡಿದ ವೇಳೆ ದೂರು ಸ್ವೀಕರಿಸಿದ ತಕ್ಷಣ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕೆಲಸ ಮುಗಿಯದು. ನೊಂದವರನ್ನು ಕೌನ್ಸಿಲಿಂಗ್‌ಗೆ ಒಳಪಡಿಸಿ, ಸಮಸ್ಯೆಯಿಂದ ಹೊರ ತಂದು, ಪುನರ್ವಸತಿ ಕಲ್ಪಿಸಬೇಕು ಎಂದು ತಿಳಿ ಹೇಳಿದರು.