ಪ್ರತ್ಯೇಕ ಚಿನ್ನಾಭರಣ ಕಳವು ಪ್ರಕರಣ ಬೇಧಿಸಿದ ಪೊಲೀಸರು

| Published : Nov 07 2024, 12:35 AM IST

ಸಾರಾಂಶ

ಶಿವಮೊಗ್ಗ : ನ.1ರಂದು ಮಧ್ಯಾಹ್ನ ಭದ್ರಾವತಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸುಮಾರು 20 ಲಕ್ಷ ರು. ಮೌಲ್ಯದ 276.75 ಗ್ರಾಂ ತೂಕದ ಚಿನ್ನಾಭರಣಗಳಿದ್ದ ಚೀಲ ಕಳ್ಳತನವಾಗಿದ್ದು, ಭದ್ರಾವತಿ ನ್ಯೂಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಮಹಿಳೆಯನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.

ಶಿವಮೊಗ್ಗ : ನ.1ರಂದು ಮಧ್ಯಾಹ್ನ ಭದ್ರಾವತಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸುಮಾರು 20 ಲಕ್ಷ ರು. ಮೌಲ್ಯದ 276.75 ಗ್ರಾಂ ತೂಕದ ಚಿನ್ನಾಭರಣಗಳಿದ್ದ ಚೀಲ ಕಳ್ಳತನವಾಗಿದ್ದು, ಭದ್ರಾವತಿ ನ್ಯೂಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಮಹಿಳೆಯನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಭದ್ರಾವತಿಯ ಸೀಗೆಬಾಗಿ ನಿವಾಸಿ ಅಟೆಂಡರ್ ಕೆಲಸ ಮಾಡುವ ಕಮಲಮ್ಮ(48) ಬಂಧಿತ ಮಹಿಳೆ ಎಂದು ತಿಳಿಸಿದರು.ಶಿವಮೊಗ್ಗದ ಕಾಶಿಪುರ ನಿವಾಸಿಯಾದ ಪ್ರಭಾವತಿ(43) ತಮ್ಮ ಮನೆಗೆ ಬಂಗಾರದ ಆಭರಣಗಳಿದ್ದ ಕಿಟ್ ಬ್ಯಾಗ್ ಹಾಗೂ ಇತರ ವಸ್ತುಗಳಿದ್ದ ಬ್ಯಾಗ್‌ಗಳನ್ನು ತೆಗೆದುಕೊಂಡು ಭದ್ರಾವತಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬಸ್‌ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು. ಶಿವಮೊಗ್ಗದಲ್ಲಿ ಬಸ್ ಇಳಿಯುವಾಗ ಬಂಗಾರದ ಆಭರಣಗಳಿದ್ದ ಕಿಟ್ ಬ್ಯಾಗ್ ನಾಪತ್ತೆಯಾಗಿತ್ತು. ಈ ಬ್ಯಾಗ್‌ನಲ್ಲಿ 20 ಲಕ್ಷ ರು. ಮೌಲ್ಯದ ಆಭರಣ ಹಾಗೂ ಎರಡು ರೇಷ್ಮೆ ಸೀರೆಗಳಿದ್ದವು. ಈ ಬಗ್ಗೆ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಭದ್ರಾವತಿ ಪೊಲೀಸ್ ವೃತ್ತ ನಿರೀಕ್ಷಕ ಶೈಲಕುಮಾರ್, ಪಿಎಸ್‌ಐ ಟಿ.ರಮೇಶ್, ಎಎಸ್‌ಐ ಮಂಜಪ್ಪ, ಸಿಬ್ಬಂದಿಗಳಾದ ನವೀನ್, ಹಾಲಪ್ಪ, ಮಧುಪ್ರಸಾದ್, ಮೌನೇಶ್, ಪ್ರಸನ್ನ, ದಿವ್ಯಶ್ರೀ ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ನ.3ರಂದು ಈ ತಂಡ ಪ್ರಕರಣದ ಆರೋಪಿತಳಾದ ಸೀಗೆಬಾಗಿ ನಿವಾಸಿ ಅಟೆಂಡರ್ ಕೆಲಸ ಮಾಡುವ ಕಮಲಮ್ಮರನ್ನು ದಸ್ತಗಿರಿ ಮಾಡಿ ಕಳವು ಮಾಡಿದ್ದ ಆಭರಣ ಮತ್ತು ರೇಷ್ಮೆ ಸೀರೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಐಟಿ ಉದ್ಯೋಗಿ ಬಂಧನ : ಮತ್ತೊಂದು ಪ್ರಕರಣದಲ್ಲಿ ಭದ್ರಾವತಿ ಹೊಸ ಮನೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮನೆಗಳತನ ಪ್ರಕರಣದ ಆರೋಪಿಯನ್ನು ಬಂಧಿಸಿ, ಸುಮಾರು 16.50 ಲಕ್ಷ ರು. ಮೌಲ್ಯದ 259 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಭದ್ರಾವತಿಯ ಹೊಸಮನೆಯ ಕೇಶವಾಪುರ ಬಡಾವಣೆ ನಿವಾಸಿ ಐಟಿ ಉದ್ಯೋಗಿ ಎಸ್.ಎಸ್.ನಿತಿನ್(೨೭)ಬಂಧಿತ ಆರೋಪಿ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್‌ ಮಾಹಿತಿ ನೀಡಿದರು.ಹೊಸ ಮನೆ ಭದ್ರಾವತಿ ನಿವಾಸಿ ಜಿ.ಆರ್.ವಿನೋದ್ ಅವರು ಆ.15ರಂದು ಊರಿಗೆ ಹೋಗಿದ್ದು, ಆಗಸ್ಟ್ 21ರಂದು ಮನೆಗೆ ಮರಳಿ ಬಂದು ನೋಡಿದಾಗ ಬೀರುವಿನಲ್ಲಿಟ್ಟಿದ್ದ 20 ಲಕ್ಷ ರುಪಾಯಿ ಮೌಲ್ಯದ 400 ಗ್ರಾಂ ಚಿನ್ನಾಭರಣಗಳು ಕಳುವಾಗಿರುವುದು ಗೊತ್ತಾಗಿತ್ತು. ಅವರು ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿಗಳ ಪತ್ತೆಗಾಗಿ ಭದ್ರಾವತಿ ಡಿವೈಎಸ್ಪಿ, ನಾಗರಾಜ್, ಸಿಪಿಐ ಶ್ರೀಶೈಲ ಕುಮಾರ, ಪಿಎಸೈ ಕೃಷ್ಣಕುಮಾರ್ ಬಿ ಮಾನೆ, ಮತ್ತು ಸಿಬ್ಬಂದಿಗಳಾದ ಮಧುಕುಮಾರ್, ಆದರ್ಶ ಶೆಟ್ಟಿ, ತೇಜಕುಮಾರ್, ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿದ್ದು, ಈ ತನಿಖಾ ತಂಡ, ನ.3ರಂದು ಈ ಪ್ರಕರಣದ ಆರೋಪಿಯಾದ ಎಸ್.ಎಸ್.ನಿತಿನ್(27) ಎಂಬಾತನನ್ನು ಬಂಧಿಸಿ, 16.50 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಬಂಧಿತ ಆರೋಪಿ ಚಿನ್ನಾಭರಣಗಳನ್ನು ಕರಗಿಸಿ, ಚಿನ್ನದ ಗಟ್ಟಿಗಳನ್ನಾಗಿ ಮಾಡಿಕೊಂಡಿದ್ದ. ಒಟ್ಟು 259 ಗ್ರಾಂ ತೂಕದ ಆರು ಬಂಗಾರದ ಗಟ್ಟಿಗಳು ಮತ್ತು ಬಂಗಾರದ ಕೈ ಕಡಗವನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಸದರಿ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಶಿಸಿ ಅಭಿನಂದಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೆ ಬ್ಯಾಂಕ್, ಎಟಿಎಂಗಳ ಭದ್ರತೆಗೆ ಸಂಬಂಧಿಸಿದಂತೆ, ಬ್ಯಾಂಕ್ ಅಧಿಕಾರಿಗಳ ವಿಶೇಷ ಸಭೆ ಕರೆಯಲಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಅನಿಲ್ ಕುಮಾರ್, ಎ.ಜಿ.ಕಾರ್ಯಪ್ಪ ಉಪಸ್ಥಿತರಿದ್ದರು.