ಪೊಲೀಸರ ನಿಸ್ವಾರ್ಥ ಸೇವೆ ಅನನ್ಯವಾಗಿದ್ದು, ಹುತಾತ್ಮ ಪೊಲೀಸರ ಸೇವಾನಿಷ್ಠೆಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ. ಪ್ರಭಾವತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪೊಲೀಸರ ನಿಸ್ವಾರ್ಥ ಸೇವೆ ಅನನ್ಯವಾಗಿದ್ದು, ಹುತಾತ್ಮ ಪೊಲೀಸರ ಸೇವಾನಿಷ್ಠೆಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ. ಪ್ರಭಾವತಿ ತಿಳಿಸಿದರು.

ನಗರದ ಪೊಲೀಸ್ ಕವಾಯತು ಮೈದಾನದ ಡಿ.ಎ.ಆರ್ ಕೇಂದ್ರಸ್ಥಾನದ ಅವರಣದಲ್ಲಿ ಬುಧವಾರ ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಪೊಲೀಸ್ ಹುತಾತ್ಮರ ದಿನಾಚರಣೆ’ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ, ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಶಾಂತಿ, ಸುವ್ಯವಸ್ಥೆ, ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆಗೆ ಹಗಲು ಇರುಳೆನ್ನದೇ ಕರ್ತವ್ಯ ನಿರ್ವಹಿಸುವ ಪೊಲೀಸರ ಸೇವಾಕಾರ್ಯ ಸುಲಭವಲ್ಲ, ಸರ್ಕಾರಿ ಸೇವೆಗಳಲ್ಲಿ ಪೊಲೀಸ್ ಕರ್ತವ್ಯ ಉತ್ತಮವಾಗಿದೆ. ನಾವೆಲ್ಲರೂ ರಾತ್ರಿಯಿಡೀ ನೆಮ್ಮದಿಯಿಂದ ನಿದ್ರಿಸಲು ಪೊಲೀಸರ ಅವಿರಥ ಶ್ರಮವೇ ಕಾರಣವಾಗಿದೆ. ಕುಟುಂಬದ ಕಷ್ಟ-ಸುಖ ಬದಿಗಿರಿಸಿ ಯಾವುದೇ ಕ್ಷಣದಲ್ಲಿ ನಾಗರಿಕರ ಸೇವೆಗೆ ಸಮರ್ಪಿಸಿಕೊಳ್ಳುವ ಪೊಲೀಸರ ನಿಸ್ವಾರ್ಥ ಸೇವೆಗೆ ಸಮನಾದುದು ಯಾವುದು ಇಲ್ಲ. ಅವರ ಸೇವಾನಿಷ್ಠಗೆ ನಾವೆಲ್ಲರೂ ಗೌರವ ನೀಡಬೇಕು. ಕರ್ತವ್ಯ ಸಮಯದಲ್ಲಿ ಸಾವು-ಬದುಕು ಲೆಕ್ಕಿಸದೆ ನಿರಂತರ ಸೇವೆಗೈದು ಹುತಾತ್ಮರಾಗಿರುವವರ ಸೇವೆ ಭವಿಷ್ಯದಲ್ಲಿಯೂ ಸ್ಮರಣೆಯಾಗಬೇಕು ಎಂದರು.

ಚಾಮರಾಜನಗರ ಜಿಲ್ಲೆ ಶೇ.೫೦ಕ್ಕೂ ಹೆಚ್ಚಿನ ಅರಣ್ಯ ಪ್ರದೇಶ ಹೊಂದಿದೆ. ಬಿ.ಆರ್.ಟಿ. ಸೇರಿದಂತೆ ಹುಲಿ ಸಂರಕ್ಷಿತ ಪ್ರದೇಶಗಳು ಜಿಲ್ಲೆಯಲ್ಲಿವೆ. ಕೇರಳ ಹಾಗೂ ತಮಿಳುನಾಡು ಸೇರಿದಂತೆ ಎರಡು ರಾಜ್ಯಗಳ ಜತೆಗೆ ಅಂತಾರಾಜ್ಯ ಗಡಿ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಸೇವೆ ಶ್ಲಾಘನೀಯವಾದದ್ದು, ನಗರ ಪ್ರದೇಶಗಳ ಕರ್ತವ್ಯವೇ ಬೇರೆ, ಬೆಟ್ಟಗುಡ್ಡಗಾಡುಗಳ ಪೊಲೀಸರ ಕರ್ತವ್ಯವೇ ವಿಭಿನ್ನ ಹಾಗೂ ಸೂಕ್ಷ್ಮ. ಅರಣ್ಯಗಳಲ್ಲಿ ಕಳ್ಳಬೇಟೆಗಾರರು, ಕಾಡುಗಳ್ಳರು, ಗಾಂಜಾ ಹಾಗೂ ಶ್ರೀಗಂಧ ಕಳ್ಳಸಾಗಣೆ, ವನ್ಯಪ್ರಾಣಿಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಜತೆಗೆ ಪೊಲೀಸರ ಸಹಕಾರವು ಅತ್ಯಗತ್ಯ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿ, ಹುತಾತ್ಮರ ಸೇವೆಯ ಸ್ಮರಣೆಯನ್ನು ಅರಿಯುವ ಹಾಗೂ ಗೌರವಿಸುವ ದಿನವನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಪೊಲೀಸರ ಸಹಕಾರ ತುಂಬಾ ಅವಶ್ಯವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಮಾತನಾಡಿ, ೧೯೫೯ರ ಅ.೨೧ರಂದು ಲಡಾಕ್‌ನ ಅಕ್ಷಯ್ ಎಂಬ ಸ್ಥಳದಲ್ಲಿ ಗಡಿಪಹರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಸೈನಿಕರನ್ನು ಚೀನಾ ಪಡೆ ಏಕಾಎಕೀ ದಾಳಿ ನಡೆಸಿದ ವೇಳೆ ೧೦ ಮಂದಿ ಮರಣ ಹೊಂದಿದರು. ೯ ಮಂದಿ ಸೈನಿಕರು ಗಾಯಾಳುಗಳಾಗಿ ಸೆರೆಯಾದರು. ಘಟನೆ ನಡೆದ ಸ್ಥಳದಲ್ಲಿ ಭಾರತ ಸರ್ಕಾರವು ಸಮುದ್ರಮಟ್ಟದಿಂದ ೧೬ ಸಾವಿರ ಅಡಿ ಎತ್ತರದ ಹುತಾತ್ಮರ ಸ್ಮಾರಕ ನಿರ್ಮಿಸಿದೆ ಎಂದರು.

ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಕಾರ್ಯಕ್ರಮದಲ್ಲಿ ಮೂರು ಸುತ್ತು ಗುಂಡು ಹಾರಿಸಿ ವೀರಮರಣವನ್ನಪ್ಪಿದವರಿಗೆ ಗೌರವ ಸಲ್ಲಿಸಲಾಯಿತು. ಪೊಲೀಸ್ ಧ್ವಜವನ್ನು ಕೆಳಗಿಳಿಸಿ ಹುತಾತ್ಮರಿಗೆ ೨ ನಿಮಿಷಗಳ ಮೌನ ಆಚರಿಸಲಾಯಿತು. ಬಳಿಕ ಪೊಲೀಸ್ ಬ್ಯಾಂಡ್‌ನಿಂದ ಶತಶತಮಾನಗಳ ಚಿರನೂತನ ಗೀತೆ ‘ಅಬಾಯ್ಡ್ ವಿತ್ ಮಿ’ ನುಡಿಸಲಾಯಿತು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಡಿವೈಎಸ್‌ಪಿ ಸ್ನೇಹರಾಜ್, ಸೋಮಣ್ಣ, ಪವನ್ ಕುಮಾರ್, ಪಿ.ಎಸ್.ಐ ಜಗದೀಶ್, ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಮಹಾಲಿಂಗ ಗಿರ್ಗಿ, ಪೊಲೀಸ್ ಅಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಇದ್ದರು.