ಸಾರಾಂಶ
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ನಿತ್ಯ ನೂರಾರು ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದರೂ ನಿಯಮ ಉಲ್ಲಂಘಿಸಿದವರಿಂದ ಸಮರ್ಪಕವಾಗಿ ದಂಡ ಪಾವತಿಯಾಗುತ್ತಿಲ್ಲವಾದ ಕಾರಣ ಇದೀಗ ಪೊಲೀಸರೇ ನೇರವಾಗಿ ಹೆದ್ದಾರಿಗಿಳಿದು ದಂಡ ವಸೂಲಿ ಮಾಡುತ್ತಿದ್ದಾರೆ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ನಿತ್ಯ ನೂರಾರು ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದರೂ ನಿಯಮ ಉಲ್ಲಂಘಿಸಿದವರಿಂದ ಸಮರ್ಪಕವಾಗಿ ದಂಡ ಪಾವತಿಯಾಗುತ್ತಿಲ್ಲವಾದ ಕಾರಣ ಇದೀಗ ಪೊಲೀಸರೇ ನೇರವಾಗಿ ಹೆದ್ದಾರಿಗಿಳಿದು ದಂಡ ವಸೂಲಿ ಮಾಡುತ್ತಿದ್ದಾರೆ. ಮದ್ದೂರು ತಾಲೂಕು ಗೆಜ್ಜಲಗೆರೆ ಬಳಿ ಹೆದ್ದಾರಿಯಲ್ಲೇ ಸಲಕರಣೆಗಳನ್ನಿಟ್ಟುಕೊಂಡು ಜಿಗ್-ಜಾಗ್ ಮಾದರಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿಕೊಂಡು ಎಎನ್‌ಪಿಆರ್ ಕ್ಯಾಮೆರಾ ಮೂಲಕ ತಮಗೆ ಬರುವ ಮಾಹಿತಿ ಆಧರಿಸಿ ನಿಯಮ ಉಲ್ಲಂಘನೆ ಮಾಡಿ ಸಾಗಿ ಬರುವ ವಾಹನಗಳನ್ನು ಅಡ್ಡಗಟ್ಟಿ ನಿಗದಿತ ದಂಡ ವಸೂಲಿ ಮಾಡುತ್ತಿದ್ದಾರೆ. ಆದರೆ, ಪೊಲೀಸರ ಈ ಕ್ರಮದಿಂದ ಇತರೆ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ದಂಡ ವಸೂಲಿಗೆ ಪರ್ಯಾಯ ಕ್ರಮಗಳನ್ನು ಅನುಸರಿಸಬಹುದೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.ದಂಡ ಪಾವತಿಸದಿರುವ ತಲೆನೋವು: ಆರಂಭದಲ್ಲಿ ಹೆದ್ದಾರಿಯಲ್ಲಿ ಹೆಚ್ಚಾಗಿ ಸಂಭವಿಸುತ್ತಿದ್ದ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ವಾಹನಗಳ ವೇಗಕ್ಕೆ ಬ್ರೇಕ್ ಹಾಕುವುದಕ್ಕೆ ಎಐ ಕ್ಯಾಮೆರಾಗಳನ್ನು ಮಂಡ್ಯದ ಇಂಡುವಾಳು ಮತ್ತು ಉಮ್ಮಡಹಳ್ಳಿ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯ ಐದು ಕಡೆಗಳಲ್ಲಿ ಅಳವಡಿಸಲಾಗಿದೆ. ಮೂರು ಪಥದಲ್ಲಿ ಸಾಗುವ ವಾಹನಗಳಿಗೆ ೬೦, ೮೦ ಹಾಗೂ ೧೦೦ ಕಿ.ಮೀ. ವೇಗ ನಿಗದಿಪಡಿಸಲಾಗಿದೆ. ಸೀಟ್ ಬೆಲ್ಟ್ ಧರಿಸದಿರುವುದು, ಅತಿ ವೇಗ, ಲೈನ್ ಉಲ್ಲಂಘನೆ, ಮೊಬೈಲ್‌ನಲ್ಲಿ ಮಾತನಾಡುವುದು ಸೇರಿ ಹಲವಾರು ರೀತಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ನಂಬರ್‌ಪ್ಲೇಟ್‌ಅನ್ನು ಕ್ಯಾಮೆರಾಗಳು ಸೆರೆ ಹಿಡಿದು ಟೋಲ್‌ಗೆ ಕಳುಹಿಸುತ್ತಿದ್ದವು. ಅಲ್ಲಿಂದ ವಾಹನ ಮಾಲೀಕರಿಗೆ ದಂಡಮೊತ್ತವನ್ನು ಸಂದೇಶದ ಮೂಲಕ ಕಳುಹಿಸಲಾಗುತ್ತಿತ್ತು. ಆದರೆ, ಈ ದಂಡದ ಸಂದೇಶವನ್ನು ವಾಹನ ಚಾಲಕರು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ನಿಯಮ ಉಲ್ಲಂಘಿಸಿದವರು ದಂಡ ಪಾವತಿಸದೆ ಸಂಚರಿಸುತ್ತಿದ್ದರು. ಆರು ಕಡೆ ಎಎನ್‌ಪಿಆರ್ ಕ್ಯಾಮೆರಾ: ಅಪಘಾತಗಳು ಮತ್ತು ಸಂಚಾರ ಉಲ್ಲಂಘನೆಗಳನ್ನು ತಡೆಯಲು ಮೈಸೂರು-ಬೆಂಗಳೂರು ನಡುವಿನ ಎನ್‌ಹೆಚ್-೨೭೫ನಲ್ಲಿ ಪೊಲೀಸರು ಎಐ ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‌ಪಿಆರ್) ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ರಸ್ತೆಯ ಪ್ರತಿ ದಿಕ್ಕಿನಲ್ಲಿ ಆರು ಸ್ಥಳಗಳಲ್ಲಿ ಕ್ಯಾಮೆರಾಗಳಿವೆ. ಅಲ್ಲಿಂದ ಒಂದೆರಡು ಕಿ.ಮೀ. ದೂರದಲ್ಲಿ ಹೆದ್ದಾರಿಯಲ್ಲೇ ಜಿಗ್‌ಜಾಗ್ ಮಾದರಿ ಬ್ಯಾರಿಕೇಡ್‌ಗಳನ್ನು ಅಳವಡಿಸಿಕೊಂಡು ನಿಯಮ ಉಲ್ಲಂಘಿಸಿ ಬರುವ ವಾಹನಗಳನ್ನು ಎಎನ್‌ಪಿಆರ್ ಕ್ಯಾಮರಾಗಳಿಂದ ಬರುವ ಸಂದೇಶಗಳಿಂದ ಪತ್ತೆಹಚ್ಚಿ ಆ ವಾಹನಗಳನ್ನು ತಡೆಹಿಡಿದು ಸ್ಥಳದಲ್ಲೇ ದಂಡ ವಸೂಲಿ ಮಾಡುತ್ತಿದ್ದಾರೆ. ಇತರೆ ವಾಹನಗಳಿಗೆ ತೊಂದರೆ: ಸಂಚಾರ ಉಲ್ಲಂಘನೆ ಮಾಡುವ ವಾಹನಗಳಿಂದ ದಂಡ ವಸೂಲಿ ಮಾಡುವ ಸಲುವಾಗಿ ಪೊಲೀಸರು ಇತರೆ ವಾಹನಗಳಿಗೆ ತೊಂದರೆ ಕೊಡುವುದು ಎಷ್ಟರಮಟ್ಟಿಗೆ ಸರಿ ಎಂಬ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ನಾವು ನಿಗದಿತ ಟೋಲ್ ಪಾವತಿಸಿ ಹೆದ್ದಾರಿ ರಸ್ತೆಯಲ್ಲಿ ಸಾಗುತ್ತಿದ್ದೇವೆ. ಅಲ್ಲಲ್ಲಿ ಹೆದ್ದಾರಿಯಲ್ಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಿಕೊಂಡು ಪೊಲೀಸರು ನಿಯಮ ಉಲ್ಲಂಘಿಸಿ ಬರುವ ವಾಹನಗಳ ದಂಡ ವಸೂಲಿಗಿಳಿದರೆ ಹೆದ್ದಾರಿ ಪರಿಕಲ್ಪನೆಯನ್ನೇ ಪ್ರಶ್ನಿಸುವಂತಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.ಸಂಚಾರ ನಿಯಮಗಳು ಉಲ್ಲಂಘಿಸಿ ಬರುವ ವಾಹನಗಳ ಚಾಲನಾ ಪರವಾನಗಿ ರದ್ದುಪಡಿಸುವುದು, ಹೆಚ್ಚು ದಂಡ ವಿಧಿಸುವುದು, ಪ್ರಕರಣ ದಾಖಲಿಸುವುದು, ಜೈಲುಶಿಕ್ಷೆ ವಿಧಿಸುವುದು ಇಂತಹ ಪರ್ಯಾಯ ಕ್ರಮಗಳನ್ನು ಅನುಸರಿಸಬಹುದು. ದಂಡ ವಸೂಲಿಯನ್ನೇ ಪ್ರಮುಖ ಗುರಿಯಾಗಿಸಿಕೊಳ್ಳದೆ ಹೆದ್ದಾರಿಯಲ್ಲಿ ನಿಯಮಾನುಸಾರ ಸಂಚರಿಸುವವರಿಗೆ ತೊಂದರೆಯಾಗದಂತೆಯೂ ಕ್ರಮ ಕೈಗೊಳ್ಳಬೇಕಲ್ಲವೇ ಎಂಬ ಸಲಹೆಗಳೂ ಕೇಳಿಬರುತ್ತಿವೆ.ಗಂಟೆಗೆ ೧೦೦ಕ್ಕೂ ಹೆಚ್ಚು ನಿಯಮ ಉಲ್ಲಂಘನೆಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿ ಗಂಟೆಗೆ ೧೦೦ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆಗಳು ದಾಖಲಾಗುತ್ತಿವೆ. ಕಳೆದ ೨೮ ದಿನಗಳಲ್ಲಿ ಒಟ್ಟು ೭೪,೯೧೫ ಸಂಚಾರ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ರಸ್ತೆಯ ಎರಡೂ ಬದಿಗಳಲ್ಲಿ ಅಳವಡಿಸಲಾಗಿರುವ ೨೨ ಕ್ಯಾಮೆರಾಗಳು ಸಂಚಾರ ಉಲ್ಲಂಘನೆಗಳನ್ನು ಸೆರೆ ಹಿಡಿದಿವೆ. ಪ್ರಕರಣಗಳಲ್ಲಿ, ಚಾಲಕರು ಮತ್ತು ಸಹ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದ ಪ್ರಕರಣಗಳೇ ಹೆಚ್ಚಾಗಿವೆ. ಸೀಟ್ ಬೆಲ್ಟ್ ಧರಿಸದ ಕಾರಣ ೫೭,೦೫೭ ಪ್ರಕರಣಗಳು ದಾಖಲಾಗಿದ್ದರೆ, ೧೦,೯೪೫ ಅತಿವೇಗದ ಪ್ರಕರಣಗಳು, ೬,೦೪೬ ಲೇನ್ ಉಲ್ಲಂಘನೆ ಪ್ರಕರಣಗಳು ಹಾಗೂ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ೪೯೪ ಪ್ರಕರಣಗಳು ದಾಖಲಾಗಿವೆ.ಈ ವ್ಯವಸ್ಥೆ ತಾತ್ಕಾಲಿಕ: ಎನ್.ಯತೀಶ್
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿರುವುದರಿಂದ ತಾತ್ಕಾಲಿಕವಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ತಿಳಿಸಿದರು. ನಿಯಮ ಉಲ್ಲಂಘಿಸಿದವರಿಗೆ ಸಂದೇಶ ರವಾನಿಸಿದರೂ ದಂಡ ಪಾವತಿಸುತ್ತಿಲ್ಲ. ಇನ್ನೊಂದೆಡೆ ಅಪಘಾತಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಸಂಚಾರದಲ್ಲಿ ವಾಹನಗಳಿಗೆ ಶಿಸ್ತು ಮೂಡಿಸಲು, ನಿಯಮಗಳು ಉಲ್ಲಂಘನೆಯಾಗದಂತೆ ಜಾಗೃತಿ ಮೂಡಿಸುವ ಸಲುವಾಗಿ ಈ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಕನ್ನಡಪ್ರಭಕ್ಕೆ ಹೇಳಿದರು. ಸಂಚಾರ ನಿಯಮ ಉಲ್ಲಂಘಿಸುವವರ ವಾಹನಗಳು ಟೋಲ್‌ಗಳನ್ನು ದಾಟಿದಾಗ ಅವರ ಫಾಸ್ಟ್‌ಟ್ಯಾಗ್ ಖಾತೆಯ ಮೂಲಕ ದಂಡವನ್ನು ತಕ್ಷಣವೇ ಕಡಿತಗೊಳಿಸುವ ವ್ಯವಸ್ಥೆ ಜಾರಿಯಾಗಬೇಕು. ಆಗ ಹೆದ್ದಾರಿಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಯನ್ನು ಕಡಿಮೆ ಮಾಡಬಹುದು. ಇದೊಂದು ತಾತ್ಕಾಲಿಕ ವ್ಯವಸ್ಥೆ. ಸಂಚಾರ ವ್ಯವಸ್ಥೆ ಸುಧಾರಣೆಗೆ ಬಂದ ನಂತರ ಇದನ್ನು ತೆಗೆದುಹಾಕಲಾಗುವುದು ಎಂದು ನುಡಿದರು.ಅಪಾಯಕ್ಕೆ ಆಹ್ವಾನ
ರಾಷ್ಟ್ರೀಯ ಹೆದ್ದಾರಿಗಿಳಿದು ಪೊಲೀಸರು ದಂಡ ವಸೂಲಿಗಿಳಿದಿರುವುದು ಅಪಾಯಕ್ಕೆ ಆಹ್ವಾನ ನೀಡಿದೆ. ಸಂಚಾರ ನಿಯಮ ಉಲ್ಲಂಘಿಸಿ ಬರುವ ವಾಹನಗಳನ್ನು ಅಡ್ಡಗಟ್ಟುವುದು ಪೊಲೀಸರ ಮುಖ್ಯಗುರಿಯಾಗಿತ್ತದೆ. ಆದರೆ, ೧೦೦ ಕಿ.ಮೀ. ವೇಗದಲ್ಲಿ ಬರುತ್ತಿರುವ ವಾಹನ ಚಾಲಕರಿಗೆ ತಾವು ಸಂಚಾರ ನಿಯಮ ಉಲ್ಲಂಘಿಸಿರುವ ಅರಿವಿರುವುದಿಲ್ಲ. ಪೊಲೀಸರು ವಾಹನ ನಿಲ್ಲಿಸುವಂತೆ ಸನ್ನೆ ಮಾಡಿಕೊಂಡು ಮುಂದೆ ಬರುವಾಗ ಗಾಬರಿಗೊಳಗಾಗಿ ವಾಹನದ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಇದರಿಂದ ಹಿಂದೆ ವೇಗವಾಗಿ ಬರುವ ವಾಹನಗಳಿಗೂ ತೊಂದರೆಯಾಗುತ್ತದೆ. ಈ ಸಮಯದಲ್ಲಿ ಅಪಘಾತವಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುವುದು ಸಾರ್ವಜನಿಕರಿಂದ ಕೇಳಿಬರುತ್ತಿರುವ ಆರೋಪವಾಗಿದೆ.