ಚನ್ನಪಟ್ಟಣದಲ್ಲಿ ಶಾಂತಿಯುತವಾಗಿ ನಡೆದ ಮತದಾನ ಪ್ರಕ್ರಿಯೆ

| Published : Apr 27 2024, 01:20 AM IST

ಚನ್ನಪಟ್ಟಣದಲ್ಲಿ ಶಾಂತಿಯುತವಾಗಿ ನಡೆದ ಮತದಾನ ಪ್ರಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ನು ಹೆಚ್ಚು ಮತದಾನರನ್ನು ಹೊಂದಿದ್ದ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಮಂದವಾಗಿ ಸಾಗಿತ್ತು. ಕೊಡಂಬಳ್ಳಿ, ಹೊಂಗನೂರು, ನಗರದ ಹಲಸಿನಮರದ ದೊಡ್ಡಿ, ಸೈಯ್ಯದ್ ವಾಡಿ, ಸೇರಿದಂತೆ ಸಾವಿರದ ಇನ್ನೂರು, ಮುನ್ನೂರಕ್ಕಿಂತ ಹೆಚ್ಚು ಮತದಾನರರನ್ನು ಹೊಂದಿದ್ದ ಮತಗಟ್ಟೆಗಳ ಮುಂದೆ ಮತದಾರರು ಸಾಲು ಗಟ್ಟಿ ನಿಂತಿದ್ದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಹೈವೋಲ್ಟೇಜ್ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಬಹುತೇಕ ಶಾಂತಿಯುತ ಮತದಾನವಾಗಿದೆ.

ಸಂಸದ ಡಿ.ಕೆ.ಸುರೇಶ್ ಹಾಗೂ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್ ಸ್ಪರ್ಧಿಯಿಂದಾಗಿ ಚನ್ನಪಟ್ಟಣ ಕೇಂದ್ರ ಬಿಂದುವಾಗಿದ್ದು, ಯಾವುದೇ ಗೊಂದಲಗಳಿಲ್ಲದೇ ಚುನಾವಣೆ ಸುಸೂತ್ರವಾಗಿ ನೆರವೇರಿದೆ.

ಬೆಳಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ಬಳಿಕ ವೇಗ ಪಡೆದುಕೊಂಡಿತ್ತು. ಮತದಾನ ಪ್ರಕ್ರಿಯೆ ಮುಗಿಯುವ ಹೊತ್ತಿಗೆ ಶೇ. ...... ಮತದಾನ ನಡೆಯಿತು.

ಇನ್ನು ಹೆಚ್ಚು ಮತದಾನರನ್ನು ಹೊಂದಿದ್ದ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಮಂದವಾಗಿ ಸಾಗಿತ್ತು. ಕೊಡಂಬಳ್ಳಿ, ಹೊಂಗನೂರು, ನಗರದ ಹಲಸಿನಮರದ ದೊಡ್ಡಿ, ಸೈಯ್ಯದ್ ವಾಡಿ, ಸೇರಿದಂತೆ ಸಾವಿರದ ಇನ್ನೂರು, ಮುನ್ನೂರಕ್ಕಿಂತ ಹೆಚ್ಚು ಮತದಾನರರನ್ನು ಹೊಂದಿದ್ದ ಮತಗಟ್ಟೆಗಳ ಮುಂದೆ ಮತದಾರರು ಸಾಲು ಗಟ್ಟಿ ನಿಂತಿದ್ದರು.

ಸರದಿಯಲ್ಲಿ ಕಾಯ್ದು ಬೇಸತ್ತ ಜನ ಮತದಾನ ಪ್ರಕ್ರಿಯೆಯನ್ನು ಚುರುಕಾಗಿ ನಡೆಸುವಂತೆ ಆಕ್ಷೇಪ ವ್ಯಕ್ತಪಡಿಸಿದರು. ಮತಗಟ್ಟೆ ಬಳಿ ಇದ್ದ ಸಿಬ್ಬಂದಿ ಹಾಗೂ ಏಜೆಂಟರು ಜನರಿಗೆ ವಾಸ್ತವ ಸಂಗತಿಯ ಬಗ್ಗೆ ತಿಳಿ ಹೇಳುತ್ತಿದ್ದ ದೃಶ್ಯ ಸಾಮಾನ್ಯವೆನಿಸಿತ್ತು. ಕೆಲ ಮತಗಟ್ಟೆಗಳಲ್ಲಿ ಸಂಜೆ 6 ಗಂಟೆ ನಂತರವೂ ಮತದಾನ ಪ್ರಕ್ರಿಯೆ ನಡೆದಿತ್ತು.

ಬಿರುಬಿಸಿಲಿನಲ್ಲೂ ಮತದಾರರು ಮತಗಟ್ಟೆಗೆ ಆಗಮಿಸಿ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು. ಮೊದಲ ಬಾರಿ ಮತದಾನ ಮಾಡುವ ಯುವಕರಿಂದ ವೃದ್ಧರವರೆಗೂ ತಮ್ಮ ಹಕ್ಕು ಚಲಾಯಿಸಿದರು. ಇವರ ಜತೆಗೆ ವಿಶೇಷ ಚೇತನರು ಮತಗಟ್ಟೆಗೆ ಬಂದು ಮತಚಲಾಯಿಸಿದ್ದು ವಿಶೇಷವೆನಿಸಿತು.

ಮತ ಚಲಾಯಿಸಿದ ಗಣ್ಯರು:

ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಮಾಜಿ ಶಾಸಕರಾದ ಎಂ.ಸಿ. ಅಶ್ವತ್ಥ್, ಸಾಧತ್ ಅಲಿಖಾನ್, ಬಿಎಂಎಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಸೇರಿದಂತೆ ವಿವಿಧ ಗಣ್ಯರು ಮತ ಚಲಾಯಿಸಿದರು.

ಮದುವೆ ಮಂಟಪದಿಂದ ಬಂದು ಮತ ಚಲಾಯಿಸಿದ ನವಜೋಡಿ!

ಲೋಕಸಭಾ ಚುನಾವಣೆಯ ದಿನದಂದೇ ಹಸಮಣೆ ಏರಿದ ನವಜೋಡಿಯೊಂದು ಮದುವೆ ಮಂಟಪದಿಂದ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದ ವಿಶೇಷ ಘಟನೆ ತಾಲೂಕಿನಲ್ಲಿ ನಡೆಯಿತು.

ತಾಲೂಕಿನ ಗರಕಹಳ್ಳಿ ಗ್ರಾಮದ ಪ್ರವೀಣ್ ಜಿ.ಎಸ್ ಹಾಗೂ ತೂಬಿನಕೆರೆ ಗ್ರಾಮದ ಅನನ್ಯ ಮತ ಚಲಾಯಿಸಿದ ನವಜೋಡಿ. ಶುಕ್ರವಾರ ಇವರ ಮದುವೆ ತಾಲೂಕಿನ ತಿಮ್ಮಮ್ಮ ದಾಸೇಗೌಡ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿತ್ತು. ಮದುವೆ ಶಾಸ್ತ್ರ ಮುಗಿಸಿದ ಈ ಜೋಡಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.