ಬಿಜೆಪಿ ಉಪಾಧ್ಯಕ್ಷ ಸ್ಥಾನ ಪಕ್ಷನಿಷ್ಠೆಗೆ ದೊರಕಿದ ಮನ್ನಣೆ

| Published : Jan 04 2024, 01:45 AM IST

ಸಾರಾಂಶ

ಸಾಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ವಿರುದ್ಧ ಸೋಲುಂಡಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಈ ಸ್ಥಾನ ದೊರಕಿರುವುದು ಪಕ್ಷನಿಷ್ಠೆ ಹಾಗೂ ಸ್ವಾಮಿನಿಷ್ಠೆಗೆ ಸಿಕ್ಕಿದ ಮನ್ನಣೆಯಾಗಿದೆ ಎಂದು ಸಾಗರದಲ್ಲಿ ಮಂಗಳವಾರ ಅಭಿನಂದನೆ ಸ್ವೀಕರಿಸಿ ಅಭಿಪ್ರಾಯಿಸಿದ್ದಾರೆ.

ಕನ್ನಡಪ್ರಭವಾರ್ತೆ ಸಾಗರ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮಂಗಳವಾರ ಸಂಜೆ ಮೊದಲ ಬಾರಿಗೆ ಸಾಗರಕ್ಕೆ ಆಗಮಿಸಿದ ಮಾಜಿ ಸಚಿವ ಎಚ್.ಹಾಲಪ್ಪ ಅವರನ್ನು ತಾಲೂಕು ಬಿಜೆಪಿ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದ ಬಳಿ ಬರಮಾಡಿಕೊಂಡ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಹಾಲಪ್ಪನವರನ್ನು ಕರೆದುಕೊಂಡು ಹೋದರು. ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಬಿಜೆಪಿ ಕಚೇರಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಾಲಪ್ಪ ಅವರನ್ನು ಅಭಿನಂದಿಸಲಾಯಿತು.

ಎಚ್.ಹಾಲಪ್ಪ ಮಾತನಾಡಿ, ತಮಗೆ ಪಕ್ಷದ ರಾಜ್ಯ ಉಪಾಧ್ಯಕ್ಷ ಸ್ಥಾನ ದೊರಕಿರುವುದು ಪಕ್ಷನಿಷ್ಠೆ ಹಾಗೂ ಸ್ವಾಮಿನಿಷ್ಠೆಗೆ ಸಿಕ್ಕಿದ ಮನ್ನಣೆ ಎಂದು ಅಭಿಪ್ರಾಯಪಟ್ಟರು. ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯರ, ಕಾರ್ಯಕರ್ತರ ಪರಿಶ್ರಮದಿಂದ ಪಕ್ಷವನ್ನು ಸದೃಢವಾಗಿ ಸಂಘಟಿಸಬೇಕಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ರಾಘವೇಂದ್ರರನ್ನು ಪುನಃ ಆಯ್ಕೆಮಾಡುವುದರೊಂದಿಗೆ ಕೇಂದ್ರದಲ್ಲಿ ಮತ್ತೆ ಮೋದಿ ನೇತೃತ್ವದ ಸರ್ಕಾರ ಸ್ಥಾಪನೆಗೆ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಸಾಗರ ಕ್ಷೇತ್ರ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸೇಡಿನ ರಾಜಕಾರಣಕ್ಕೆ ಇಳಿದಿದೆ. ಯಾವಾಗಲೋ ನಡೆದ ರಾಮಮಂದಿರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನಲ್ಲಿ ಸಂಸದರ ಸಹೋದರನನ್ನು ಟಾರ್ಗೆಟ್ ಮಾಡಲಾಗಿದೆ. ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಬಿಜೆಪಿ ಪರವಾಗಿದ್ದವರನ್ನು ಗುರುತಿಸಿ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತಿದೆ. ಹಲವು ರೈತರ ಮೇಲೆ ಪ್ರಕರಣ ದಾಖಲಾಗಿದ್ದು, ಕೆಲವು ರೈತರನ್ನು ಜೈಲಿಗೆ ಕಳಿಸಲಾಗಿದೆ. ಬಿಜೆಪಿ ಕಾರ್ಯಕರ್ತರಿಗೆ ಸೇಡಿನ ರಾಜಕಾರಣವನ್ನು ಎದುರಿಸುವ ಶಕ್ತಿ ಇದೆ ಮತ್ತು ಅವರಿಗೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದು ಹೇಳಿದರು.

ಡಾ.ರಾಜನಂದಿನಿ ಕಾಗೋಡು ಮಾತನಾಡಿ, ಕ್ಷೇತ್ರದ ಶಾಸಕರು ಅಭಿವೃದ್ಧಿ ಮರೆತು ದ್ವೇಷದ ರಾಜಕಾರಣಕ್ಕೆ ಒತ್ತು ನೀಡುತ್ತಿದ್ದಾರೆ. ತಮ್ಮ ಗೆಲುವಿಗೆ ಕಾರಣರಾದ ಕಾಗೋಡು ತಿಮ್ಮಪ್ಪನವರ ವಿದ್ಯಾಸಂಸ್ಥೆಗಳನ್ನು ಹಾಲಿ ಶಾಸಕರು ಟಾರ್ಗೆಟ್ ಮಾಡಿದ್ದಾರೆ. 1980ರಿಂದ ಎಲ್ಲ ದಾಖಲೆ ಇದ್ದರೂ ಶಾಲಾ ಜಾಗದಲ್ಲಿ ಕಟ್ಟಡ ಕಟ್ಟಲು ಅನಗತ್ಯ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಕೆಲಸಗಾರ ಹಾಲಪ್ಪ, ಆಡಳಿತಗಾರ ಹಾಲಪ್ಪನವರನ್ನು ನಾವು ನೋಡಿದ್ದೇವೆ. ಈಗ ಪಕ್ಷವು ಹಾಲಪ್ಪ ಅವರಿಗೆ ಸಂಘಟನೆಯ ಜವಾಬ್ದಾರಿ ನೀಡಿದ್ದು ನಾವೆಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕಿದೆ. ವಿಧಾನಸಭಾ ಚುನಾವಣೆಯ ಸೋಲನ್ನು ಮರೆತು ಮತ್ತೆ ಪಕ್ಷ ಸಂಘಟನೆಗೆ ಮುಂದಾಗಬೇಕಿದೆ ಎಂದು ಹೇಳಿದರು.

ಶ್ವೇತಪತ್ರ ಹೊರಡಿಸಿ:

ಬಿಜೆಪಿ ತಾಲೂಕು ಅಧ್ಯಕ್ಷ ಲೋಕನಾಥ ಬಿಳಿಸಿರಿ ಮಾತನಾಡಿ, ಹಾಲಿ ಶಾಸಕರು ಹಿಂದಿನ ಅವಧಿಯಲ್ಲಿ ಮಂಜೂರಾದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ತಾವು ತಂದಿದ್ದಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದಾರೆ ಎನ್ನುವ ಬಗ್ಗೆ ಈಗಿನ ಶಾಸಕರು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.

ಕಾರ್ಯಕ್ರಮದಲ್ಲಿ ಗಣೇಶಪ್ರಸಾದ್, ರತ್ನಾಕರ ಹೊನಗೋಡು, ಮಧುರಾ ಶಿವಾನಂದ್, ಆರ್.ಶ್ರೀನಿವಾಸ್ ಮೇಸ್ತ್ರಿ, ವಿ.ಮಹೇಶ್, ಅರುಣ ಕುಗ್ವೆ, ಸಂತೋಷ್ ಶೇಟ್, ಸತೀಶ್ ಕೆ. ಇನ್ನಿತರರು ಹಾಜರಿದ್ದರು.

- - -

-3ಕೆ.ಎಸ್.ಎ.ಜಿ.1: