ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ದಕ್ಕಬೇಕು

| Published : Jan 26 2025, 01:34 AM IST

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ದಕ್ಕಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ವಿರಾಜಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಕೋಳುಮಂಡ ರಫೀಕ್‌ ಅಧ್ಯಕ್ಷತೆಯಲ್ಲಿ ವಿರಾಜಪೇಟೆ ಪುರಭವನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸೇರಿದ್ದ ಕಾಂಗ್ರೆಸ್‌ ಅಲ್ಪಸಂಖ್ಯಾತ ಪ್ರಮುಖರು ಚರ್ಚೆ ನಡೆಸಿ ಈ ನಿರ್ಣಯ ಕೈಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತ ಮತದಾರರನ್ನು ಹೊಂದಿರುವ ವಿರಾಜಪೇಟೆ ಬ್ಲಾಕ್ ನ ನೂತನ ಅಧ್ಯಕ್ಷರಾಗಿ ಅಲ್ಪಸಂಖ್ಯಾತರನ್ನೇ ನೇಮಕಗೊಳಿಸಬೇಕು. ಅಲ್ಲದೆ ಮುಂಬರುವ ಜಿ. ಪಂ. ಮತ್ತು ತಾ. ಪಂ. ಚುನಾವಣೆಯಲ್ಲಿ ಸ್ಪರ್ಧಿಸಲು ವಿರಾಜಪೇಟೆ ಬ್ಲಾಕ್ ನ ಅರ್ಹ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ವಿರಾಜಪೇಟೆಯಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತರ ಪ್ರಮುಖರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಕೋಳುಮಂಡ ರಫೀಕ್ ಅವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯ ಪುರಭವನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸೇರಿದ್ದ ಕಾಂಗ್ರೆಸ್ ಅಲ್ಪಸಂಖ್ಯಾತ ಪ್ರಮುಖರು ಚರ್ಚೆ ನಡೆಸಿ ಈ ನಿರ್ಣಯ ಕೈಗೊಂಡಿದ್ದಾರೆ. ಅಲ್ಲದೆ ಸಭೆಯ ನಿರ್ಣಯವನ್ನು ಕೂಡಲೇ ಶಾಸಕರಿಗೆ ಮತ್ತು ಡಿಸಿಸಿ ಅಧ್ಯಕ್ಷರಿಗೆ ಕಳಿಸಿಕೊಡುವಂತೆಯೂ ತೀರ್ಮಾನಿಸಲಾಗಿದೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೋಳುಮಂಡ ರಫೀಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಐದು ವರ್ಷ ಪೂರ್ಣಗೊಂಡ ಕೊಡಗಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆಗೊಳಿಸಲು ಕೆಪಿಸಿಸಿಯಿಂದ ನಿರ್ದೇಶನ ಬಂದಿದೆ ಎಂದು ಈಗಾಗಲೇ ಡಿಸಿಸಿ ಅಧ್ಯಕ್ಷರು ಘೋಷಿಸಿದ್ದಾರೆ.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಪಟ್ಟಡ ರಂಜಿ ಪೂಣಚ್ಚ ಅವರ ಅವಧಿ ಇದೀಗ ಪೂರ್ಣಗೊಂಡಿದೆ. ಬ್ಲಾಕ್ ನ ನೂತನ ಅಧ್ಯಕ್ಷರಾಗಿ ಅಲ್ಪಸಂಖ್ಯಾತರನ್ನೇ ನೇಮಿಸಬೇಕು ಎಂಬ ಗಟ್ಟಿ ಧ್ವನಿ ಕೇಳಿಬರುತ್ತಿದೆ. ಈ ಬೇಡಿಕೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುವಂತಾಗಬೇಕು ಎಂದು ತಿಳಿಸಿದರು.

ಸಭೆಯಲ್ಲಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಪಿ.ಎ. ಹನೀಫ್ ಮಾತನಾಡಿ, ಅಲ್ಪಸಂಖ್ಯಾತರು ಅತಿ ನಿರೀಕ್ಷೆಯಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ. ಪಕ್ಷದ ಸಾಂಪ್ರದಾಯಿಕ ಮತದಾರರಾಗಿರುವ ಅಲ್ಪಸಂಖ್ಯಾತರು ಯಾವುದೇ ಸಂದಿಗ್ದತೆ ಪರಿಸ್ಥಿತಿಯಲ್ಲೂ ಪಕ್ಷವನ್ನು ಕೈ ಬಿಟ್ಟಿಲ್ಲ. ಈ ಕಾರಣದಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಇಬ್ಬರು ಶಾಸಕರನ್ನು ಆರಿಸಿ ಕಳಿಸುವುದರ ಮೂಲಕ 25 ವರ್ಷಗಳ ಕನಸನ್ನು ನನಸು ಮಾಡಿದ್ದಾರೆ ಎಂದು ಹೇಳಿದರು.

ವಿರಾಜಪೇಟೆ ತಾಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷರಾದ ಆರ್. ಕೆ. ಅಬ್ದುಲ್ ಸಲಾಂ ಮಾತನಾಡಿ, ವಿರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಕಾರ್ಯವೈಖರಿಯಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮುನ್ನೆಲೆಗೆ ಬಂದಿದೆ. ಪಕ್ಷ ಇನ್ನಷ್ಟು ಬಲಗೊಳ್ಳಲು ಕ್ಷೇತ್ರದ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಬೇಕಾಗಿದೆ. ಕಾಂಗ್ರೆಸ್ನ ಅಲ್ಪಸಂಖ್ಯಾತರ ಘಟಕ ಪಕ್ಷದ ಎಲ್ಲಾ ಘಟಕಗಳಿಗಿಂತ ಶಕ್ತಿಶಾಲಿಯಾಗಿದೆ. ಆದ್ದರಿಂದ ಮುಖಂಡರಲ್ಲಿ ಎದುರಾಗಬಹುದಾದ ಸ್ವಾಭಾವಿಕವಾದ ಭಿನ್ನಾಭಿಪ್ರಾಯಗಳನ್ನು ಮರೆತು ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಅಲ್ಪಸಂಖ್ಯಾತರನ್ನೇ ನೇಮಿಸಲು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ವಿರಾಜಪೇಟೆ ಪುರಸಭಾ ಸದಸ್ಯರಾದ ಮೊಹಮ್ಮದ್ ರಾಫಿ, ಕಳೆದ ಬಾರಿಯಷ್ಟೇ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಬ್ಲಾಕ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರ ಬದಲಿಗೆ ಸಾಮಾನ್ಯ ವರ್ಗಕ್ಕೆ ಹೋಗಿತ್ತು. ಅದರಿಂದ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಇದೀಗ ಅನಿವಾರ್ಯವಾಗಿರುವುದರಿಂದ ನೂತನ ಅಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡಬೇಕು ಎಂದು ಒಮ್ಮತದಿಂದ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದು ವಿವರಿಸಿದರು.

ವಿರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಜಾನ್ಸನ್, ವಿರಾಜಪೇಟೆ ಪುರಸಭಾ ಸದಸ್ಯರಾದ ಮತೀನ್, ಪಕ್ಷದ ಪ್ರಮುಖರಾದ ವಿರಾಜಪೇಟೆಯ ಏಜಾಸ್ ಅಹಮದ್, ಮುಖಂಡರಾದ ಜೋಕಿಂ ರಾಡ್ರಿಗಸ್ ಮಾತನಾಡಿ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎ. ನಾಸರ್, ಪ್ರಮುಖರಾದ ಸಿದ್ದಾಪುರದ ಕೆ.ಸಿ. ಶುಕೂರ್, ವಿರಾಜಪೇಟೆಯ ಮಾರ್ವಿನ್ ಲೋಬೋ, ಬಿಳುಗುಂದ ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಾಸಿರ್ ಮೊದಲಾದವರು ಮಾತನಾಡಿದರು.

ಪುರಸಭಾ ಸದಸ್ಯರಾದ ಬೆನ್ನಿ ಆಗಸ್ಟಿನ್, ಆತಿಫ್ ಮನ್ನ, ಶಾಹುಲ್ ಹಮೀದ್, ಅಬ್ದುಲ್ ಜಲೀಲ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಎಂ.ಎಂ. ಇಸ್ಮಾಯಿಲ್, ಡಿಸಿಸಿ ಸದಸ್ಯರಾದ ಅಂದಾಯಿ, ಆರ್ಜಿ ಗ್ರಾ. ಪಂ. ಅಧ್ಯಕ್ಷರಾದ ಫಾತಿಮಾ ಸುಲೇಮಾನ್, ಬೇಟೋಳಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ವರ್ಗೀಸ್, ಪ್ರಮುಖರಾದ ಶಬೀರ್, ಮರ್ಲಿನ್ ಲೋಬೋ, ಎಂ. ವೈ. ಆಲಿ, ಎಂ. ಎ. ಮೊಯ್ದು, ಮುನಾವರ್ ಸೇರಿದಂತೆ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು, ವಿವಿಧ ಗ್ರಾ. ಪಂ. ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.