ಸಾರಾಂಶ
ಶಿವಕುಮಾರ ಕುಷ್ಟಗಿಕನ್ನಡಪ್ರಭ ವಾರ್ತೆ ಗದಗರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತಕ್ಕೆ ವೇಗ ನೀಡಿದ್ದೇವೆ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್. ಆದರೆ ಗದಗ ಜಿಪಂ ಸಿಇಒ ಹುದ್ದೆ ಖಾಲಿಯಾಗಿ 6 ತಿಂಗಳೇ ಗತಿಸಿದ್ದರೂ ಇದುವರೆಗೂ ನೇಮಕ ಮಾಡಲು ಆಗಿಲ್ಲ! ಜಿಲ್ಲಾಡಳಿತದ ಸುಸೂತ್ರ ನಿರ್ವಹಣೆಯಲ್ಲಿ ಜಿಪಂ ಸಿಇಒ ಹುದ್ದೆ ಅತ್ಯಂತ ಪ್ರಮುಖವಾಗಿದ್ದು, ಜಿಪಂ ಸಿಇಒ ಹುದ್ದೆ ಆರು ತಿಂಗಳಿಂದ ಖಾಲಿ ಇದೆ. ತೆರವಾದ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವ ಗೋಜಿಗೆ ಸರ್ಕಾರ ಹೋಗಿಲ್ಲ. ಕೆಲವರು ಉದ್ದೇಶ ಪೂರ್ವಕವಾಗಿಯೇ ನೇಮಕ ಮಾಡಿಲ್ಲ ಖಾಲಿ ಬಿಟ್ಟಿದ್ದಾರೆ ಎಂದರೆ, ಇನ್ನು ಕೆಲವರು ಸರ್ಕಾರ ಗದಗ ಜಿಲ್ಲೆಯ ಬಗ್ಗೆ ನಿರ್ಲಕ್ಷ್ಯ ಹೊಂದಿರುವುದಕ್ಕೆ ಇದೇ ಸಾಕ್ಷಿ ಎನ್ನುತ್ತಾರೆ. ಜುಲೈನಲ್ಲಿ ವರ್ಗಾವಣೆ: ಜಿಪಂ ಸಿಇಒ ಆಗಿದ್ದ ಡಾ. ಸುಶೀಲಾ ಬಿ. 8-7-2023ರಂದು ಜಿಲ್ಲೆಯಿಂದ ವರ್ಗಾವಣೆಯಾಗಿ ತೆರಳಿದರು. ಅಲ್ಲಿಂದ ಇಲ್ಲಿಯವರೆಗೆ 6 ತಿಂಗಳು ಗತಿಸಿದ್ದರೂ ಬೇರೊಬ್ಬ ಅಧಿಕಾರಿ ನೇಮಕವಾಗಿಲ್ಲ. ಡಾ. ಸುಶೀಲಾ ವರ್ಗಾವಣೆಯ ನಂತರ ರಾಜ್ಯದಲ್ಲಿ 4 ಬಾರಿ ಹಿರಿಯ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿಯೊಂದು ಜಿಲ್ಲೆಗೂ ಅಧಿಕಾರಿಗಳ ನೇಮಕ ಮಾಡಿದೆ. ಆದರೆ ಪ್ರತಿ ವರ್ಗಾವಣೆ ಸಂದರ್ಭ ಗದಗ ಜಿಲ್ಲೆಯನ್ನು ಮಾತ್ರ ಕಡೆಗಣಿಸಿದೆ.ಜಿಲ್ಲಾ ಪಂಚಾಯ್ತಿ ಅಡಿಯಲ್ಲಿ 25ಕ್ಕೂ ಹೆಚ್ಚು ಇಲಾಖೆಗಳಿದ್ದು, ಪ್ರತಿಯೊಂದು ಇಲಾಖೆಗಳು ಕೂಡಾ ಗ್ರಾಮೀಣ ಜನರ ಬದುಕಿಗೆ ಒಂದಿಲ್ಲೊಂದು ರೀತಿ ಸಂಪರ್ಕ ಹೊಂದಿವೆ. ಪ್ರಸ್ತುತ ಜಿಲ್ಲಾಧಿಕಾರಿಗಳಾಗಿರುವ ವೈಶಾಲಿ ಎಂ.ಎಲ್. ಅವರಿಗೆ ಜಿಪಂ ಸಿಇಒ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ. ಅವರು ಜಿಲ್ಲಾಧಿಕಾರಿಗಳಾಗಿ, ಜಿಪಂ ಸಿಇಒ ಆಗಿ ಎರಡೂ ಮಹತ್ವದ ಹುದ್ದೆಗಳನ್ನು ನಿಭಾಯಿಸುವಂತಾಗಿದ್ದು, ಇದರ ನೇರ ಪರಿಣಾಮ ಆಡಳಿತ ಮೇಲಾಗುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗೆ ಇದು ತೀವ್ರ ಪೆಟ್ಟು ನೀಡುತ್ತಿದೆ. ಸಂಪೂರ್ಣ ಬರಗಾಲ: ಜಿಲ್ಲೆಯ 7 ತಾಲೂಕುಗಳಲ್ಲಿ ಸಂಪೂರ್ಣ ಬರಗಾಲ ಆವರಿಸಿದೆ. ರೈತರ, ಕೃಷಿ ಕೂಲಿ ಕಾರ್ಮಿಕರು ದುಡಿಮೆಗಾಗಿ ಹಾತೊರೆಯುತ್ತಿದ್ದಾರೆ. ಉದ್ಯೋಗ ಖಾತ್ರಿ, ಗ್ರಾಮೀಣ ಕುಡಿವ ನೀರು, ಬರ ನಿರ್ವಹಣೆ, ಕೃಷಿ ಹೊಂಡಗಳ ನಿರ್ಮಾಣ, ಜಾನುವಾರುಗಳಿಗೆ ಮೇವು, ಅವುಗಳಿಗೆ ನೀರು ಹೀಗೆ ಗ್ರಾಮೀಣರ ಬದುಕಿನ ಅವಶ್ಯಕತೆಗಳನ್ನು ಪೂರೈಕೆ ಮಾಡುವಲ್ಲಿ ಜಿಪಂ ಸಿಇಒ ಜವಾಬ್ದಾರಿ ಪ್ರಮುಖವಾಗಿದೆ. ಕಳೆದ 6 ತಿಂಗಳಿಂದ ಗದಗ ಜಿಪಂ ಹುದ್ದೆ ಖಾಲಿ ಇದ್ದು ಯಜಮಾನನಿಲ್ಲದ ಮನೆಯಂತಾಗಿದೆ.
ಅಧಿಕಾರಿಗಳೇ ಸಿಗುತ್ತಿಲ್ಲವೇ?: ಗದಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳೇ ಸಿಗುತ್ತಿಲ್ಲವೇ ? ಅಥವಾ ಗದಗ ಜಿಲ್ಲೆಗೆ ಬರಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆಯೇ? ಇನ್ನು ಬೇರಾವುದೋ ಕಾರಣಕ್ಕೆ ಅದು ಖಾಲಿ ಉಳಿದಿದೆಯೋ? ಗೊತ್ತಿಲ್ಲ, ವಾಸ್ತವದಲ್ಲಿ ಹುದ್ದೆಯಂತೂ ಖಾಲಿ ಇದೆ. ಕಾನೂನು ಮಂತ್ರಿ, ಅತ್ಯಂತ ಪ್ರಭಾವಿ ಸಚಿವ ಎಚ್.ಕೆ. ಪಾಟೀಲರ ತವರು ಜಿಲ್ಲೆಯಲ್ಲಿ ಜಿಪಂ ಹುದ್ದೆ ಖಾಲಿ ಇದ್ದು 6 ತಿಂಗಳು ಕಳೆದಿದೆ ಎಂದರೆ ಸಹಜವಾಗಿಯೇ ಎಲ್ಲರೂ ಹುಬ್ಬೇರಿಸುವಂತಾಗಿದೆ.ದಾಖಲೆ ನಿರ್ಮಾಣ: ಗದಗ ಜಿಲ್ಲೆಯಾಗಿ ರೂಪುಗೊಂಡು 25 ವರ್ಷ ಪೂರ್ಣಗೊಂಡಿದೆ. ಜಿಲ್ಲೆಯ 25 ವರ್ಷಗಳ ಇತಿಹಾಸದಲ್ಲಿ ಜಿಪಂ ಸಿಇಒ ಹುದ್ದೆ ಇಷ್ಟೊಂದು ಸುದೀರ್ಘ ಅವಧಿಗೆ (6 ತಿಂಗಳು) ಖಾಲಿಯಾಗಿ ಉಳಿದಿರುವುದು ಇದೇ ಮೊದಲು. ಆಡಳಿತ ಪಕ್ಷದ ಇಬ್ಬರು, ವಿರೋಧ ಪಕ್ಷವಾದ ಬಿಜೆಪಿಯ ಇಬ್ಬರು ಶಾಸಕರಿದ್ದರೂ ಆಡಳಿತಾತ್ಮಕವಾಗಿ ಪ್ರಮುಖ ಹುದ್ದೆಯೊಂದು ಇಷ್ಟೊಂದು ತಿಂಗಳು ಖಾಲಿ ಇದ್ದರೆ ಹೇಗೆ? ಎಂದು ಚಿಂತಿಸಿದಂತೆ ಕಾಣುತ್ತಿಲ್ಲ.