ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲೆಯ ಗ್ರಾಮೀಣ ಭಾಗದ ಪ್ರಗತಿಯ ರಥವನ್ನು ಮುನ್ನಡೆಸಬೇಕಾದ ಇಲ್ಲಿನ ಜಿಪಂ ಸಿಇಒ ಹುದ್ದೆ ಖಾಲಿಯಾಗಿ 9 ತಿಂಗಳು ಗತಿಸಿದ್ದರೂ ಸರ್ಕಾರ ಮಾತ್ರ ಇತ್ತ ಕಣ್ಣೆತ್ತಿ ನೋಡುತ್ತಿಲ್ಲ. ಇದರಿಂದಾಗಿ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನ ಕುಂಠಿತಗೊಂಡಿದೆ.ಗದಗ ಜಿಲ್ಲೆಯಾಗಿ 29 ವರ್ಷ ಪೂರೈಸಿದ್ದು, ಹಲವಾರು ಬಾರಿ ಜಿಪಂ ಹುದ್ದೆಗಳು ಖಾಲಿ ಇದ್ದರೂ ಇಷ್ಟೊಂದು ಸುದೀರ್ಘ ಅವಧಿಗೆ ಜಿಪಂ ಸಿಇಒ ಹುದ್ದೆ ಖಾಲಿ ಇರಲಿಲ್ಲ. ಕಳೆದ 2025ರ ಆ. 22ರಂದು ಜಿಪಂ ಸಿಇಒ ಆಗಿದ್ದ ಭರತ್ ಎಸ್. ಅವರು ಬೆಂಗಳೂರಿನ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆಗೊಂಡರು. ಅಂದಿನಿಂದ ತೆರವಾದ ಈ ಮಹತ್ವದ ಹುದ್ದೆಗೆ ಸರ್ಕಾರ ಹೊಸ ಅಧಿಕಾರಿಯನ್ನು ನೇಮಿಸಿಯೇ ಇಲ್ಲ. ಸದ್ಯ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರೇ ಜಿಪಂ ಸಿಇಒ ಹುದ್ದೆಯ ಹೆಚ್ಚುವರಿ ಉಸ್ತುವಾರಿಯನ್ನು ಹೊತ್ತುಕೊಂಡು ಎರಡೂ ಕೆಲಸ ನಿಭಾಯಿಸುತ್ತಿದ್ದಾರೆ.
ಗದಗ ಜಿಪಂಗೆ ಗರ: ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗದಗ ಜಿಪಂ ಆಡಳಿತ ವ್ಯವಸ್ಥೆಗೆ ಸಂಪೂರ್ಣ ಗರ ಬಡಿದಂತಾಗಿದೆ. ಕಳೆದ ಮೂರು ವರ್ಷಗಳ (36 ತಿಂಗಳ) ಅವಧಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜಿಲ್ಲೆ ಅನುಭವಿಸಿದ ಆಡಳಿತಾತ್ಮಕ ಹಿನ್ನಡೆ ಎದ್ದು ಕಾಣುತ್ತದೆ.2023 ರಲ್ಲಿ ಜಿಪಂ ಸಿಇಒ ಆಗಿದ್ದ ಡಾ. ಸುಶೀಲಾ ಬಿ. ಅವರು 2023ರ ಜು. 18ರಂದು ವರ್ಗಾವಣೆಗೊಂಡ ನಂತರ ಸುಮಾರು 8 ತಿಂಗಳ ಕಾಲ ಸಿಇಒ ನೇಮಕವೇ ಆಗಿರಲಿಲ್ಲ. ನಂತರ 2024ರ ಮಾ. 14ರಂದು ಭರತ್ ಎಸ್. ಅವರು ಸಿಇಒ ಆಗಿ ಅಧಿಕಾರ ವಹಿಸಿಕೊಂಡರೂ, ಕೇವಲ ಒಂದೂವರೆ ವರ್ಷದಲ್ಲೇ (22-08-2025) ಅವರು ವರ್ಗಾವಣೆಯಾದರು. ಅಲ್ಲಿಂದ ಇಂದಿನವರೆಗೆ ಮತ್ತೆ 9 ತಿಂಗಳು ಕಳೆಯುತ್ತ ಬಂದರೂ ಸರ್ಕಾರಕ್ಕೆ ಗದಗ ಜಿಪಂ ಆಗಿ ಒಬ್ಬ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಲು ಆಗಿಲ್ಲ. ಸರ್ಕಾರದ 36 ತಿಂಗಳ ಆಡಳಿತಾವಧಿಯಲ್ಲಿ ಬರೋಬ್ಬರಿ 17 ತಿಂಗಳುಗಳ ಕಾಲ ಜಿಪಂ ಸಿಇಒ ಹುದ್ದೆ ಖಾಲಿ ಉಳಿದಿದೆ.
ನನೆಗುದಿಗೆ: ಜಿಪಂ ಸಿಇಒ ಹುದ್ದೆ ಎಂದರೆ ಅದು ಕೇವಲ ಕಚೇರಿಯ ಕುರ್ಚಿಯಲ್ಲ, ಅದು ಗ್ರಾಮೀಣ ಭಾಗದ ಜೀವನಾಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೋಟ್ಯಂತರ ಅನುದಾನದ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನ, ಹಣಕಾಸು ನಿಯಂತ್ರಣ, ಜಿಪಂ ಸಾಮಾನ್ಯ ಸಭೆಗಳ ನಿರ್ವಹಣೆ, ಕುಡಿಯುವ ನೀರು, ನೈರ್ಮಲ್ಯ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಶಿಕ್ಷಣ ಹಾಗೂ ಆರೋಗ್ಯದ ಮೂಲ ಸೌಕರ್ಯಗಳ ಪ್ರಗತಿ ಪರಿಶೀಲನೆ ಮತ್ತು ಸಾರ್ವಜನಿಕರ ದೂರುಗಳಿಗೆ ತ್ವರಿತ ಪರಿಹಾರ ಒದಗಿಸುವ ಅತ್ಯಂತ ಜವಾಬ್ದಾರಿಯುತ ಸ್ಥಾನವಿದು. ಆದರೆ ಸಿಇಒ ಇಲ್ಲದ ಕಾರಣ ಕಡತಗಳ ವಿಲೇವಾರಿ ತೀವ್ರ ವಿಳಂಬವಾಗುತ್ತಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ.ಗದಗ ಜಿಪಂಗೆ ತಕ್ಷಣವೇ ಪೂರ್ಣಾವಧಿ ಸಿಇಒ ನೇಮಕ ಮಾಡಬೇಕೆಂದು ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳು ನಿರಂತರವಾಗಿ ಒತ್ತಾಯಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ವ್ಯಾಪಕ ಚರ್ಚೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ.
ಹಲವು ಅನುಮಾನ: ಸಾಮಾನ್ಯವಾಗಿ ಐಎಎಸ್ ಅಧಿಕಾರಿ ವರ್ಗಾವಣೆಗೊಂಡ ತಕ್ಷಣ ಅಥವಾ ಒಂದು ತಿಂಗಳ ಒಳಗಾಗಿ ಮತ್ತೊಬ್ಬ ಅಧಿಕಾರಿಯನ್ನು ನೇಮಿಸುವುದು ಆಡಳಿತದ ನಿಯಮ. ಆದರೆ ಜಿಲ್ಲೆಯ ವಿಷಯದಲ್ಲಿ 9 ತಿಂಗಳಾದರೂ ನೇಮಕಾತಿ ಪ್ರಕ್ರಿಯೆ ನಡೆಯದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಸರ್ಕಾರ ಕೂಡಲೇ ಜಿಪಂ ಸಿಇಒ ನೇಮಕ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದಗೌಡ ಪಾಟೀಲ ತಿಳಿಸಿದರು.