ಕುಂಬಾರ ಸಮಾಜ ಸಂಘಟಿತರಾಗಿ ಪ್ರಗತಿ ಹೊಂದಬೇಕು: ಸಚ್ಚಿದಾನಂದ

| Published : Oct 07 2025, 01:02 AM IST

ಸಾರಾಂಶ

ಕುಂಬಾರ ಸಮುದಾಯ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಪುರುಷರು ಕೂಡ ಸ್ವ ಸಹಾಯ ಸಂಘ ರಚಿಸಿಕೊಂಡು ಹಣ ಉಳಿತಾಯ ಮಾಡಬೇಕು. ತಮ್ಮ ಕೌಶಲ್ಯಕ್ಕೆ ಪೂರಕವಾದ ವ್ಯಾಪಾರ, ವ್ಯವಹಾರ ನಡೆಸಿದರೆ ಮಾತ್ರ ಸ್ವಾವಲಂಬನೆ ಸಾಧಿಸಲು ಸಾಧ್ಯ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕುಂಬಾರ ಸಮಾಜ ಸಂಘಟಿತರಾಗಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಸಲಹೆ ನೀಡಿದರು.

ತಾಲೂಕಿನ ಮಜ್ಜಿಗೆಪುರ ಗ್ರಾಮದಲ್ಲಿ ಆಂಜನೇಯಸ್ವಾಮಿ ಕುಂಬಾರರ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಕುಂಬಾರ ಸಮುದಾಯ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಪುರುಷರು ಕೂಡ ಸ್ವ ಸಹಾಯ ಸಂಘ ರಚಿಸಿಕೊಂಡು ಹಣ ಉಳಿತಾಯ ಮಾಡಬೇಕು. ತಮ್ಮ ಕೌಶಲ್ಯಕ್ಕೆ ಪೂರಕವಾದ ವ್ಯಾಪಾರ, ವ್ಯವಹಾರ ನಡೆಸಿದರೆ ಮಾತ್ರ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದರು.

ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ಗ್ರಾಮ ಘಟಕದ ಅಧ್ಯಕ್ಷ ವೆಂಕಟೇಶ್ ಮಾತನಾಡಿದರು. ಈ ವೇಳೆ ಸಂಘದ ಉಪಾಧ್ಯಕ್ಷ ಕೃಷ್ಣ, ಕಾರ್ಯದರ್ಶಿ ರಾಜು, ನಿರ್ದೇಶಕ ಹಾಗೂ ಗ್ರಾ.ಪಂ. ಮಾಜಿ ಸದಸ್ಯ ಪ್ರಭಾಕರ್, ಮುಖಂಡರಾದ ನರಸಪ್ಪ, ಚಿನ್ನಸ್ವಾಮಿ, ಗವಿಸ್ವಾಮಿ, ಬಸವರಾಜು, ರಾಮು, ರೋಹಿತ್ ಇತರರು ಇದ್ದರು.

ಗ್ರಾಪಂ ಪ್ರಭಾರ ಅಧ್ಯಕ್ಷರಾಗಿ ಜಿ.ಕೆ.ಕುಮಾರ್ ಅಧಿಕಾರ ಸ್ವೀಕಾರ

ಮೇಲುಕೋಟೆ:

ಗ್ರಾಮ ಪಂಚಾಯ್ತಿ ಪ್ರಭಾರ ಅಧ್ಯಕ್ಷರಾಗಿ ಉಪಾಧ್ಯಕ್ಷ ಜಿ.ಕೆ.ಕುಮಾರ್ ಅಧಿಕಾರ ಸ್ವೀಕರಿಸಿದರು.

ಗ್ರಾಪಂ ವರಿಷ್ಠರ ಆಯ್ಕೆ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಸಮಕ್ಷಮದಲ್ಲಿ ಆಗಿದ್ದ ಒಡಂಬಡಿಕೆಯಂತೆ ತಮ್ಮ ಸ್ಥಾನಕ್ಕೆ ಅಧ್ಯಕ್ಷೆ ಮಣಿ ಮುರುಗನ್ ರಾಜೀನಾಮೆ ನೀಡಿದ್ದರು. ಇವರ ರಾಜೀನಾಮೆ ಅಂಗೀಕರಿಸಿದ ಪಾಂಡವಪುರ ಉಪವಿಭಾಗಾಧಿಕಾರಿ ಮುಂದಿನ ಅಧ್ಯಕ್ಷರ ಆಯ್ಕೆ ನಡೆಯುವವರೆಗೆ ಗ್ರಾಪಂ ಆಡಳಿತ ಸುಸೂತ್ರವಾಗಿ ನಡೆಯಲು ಪ್ರಭಾರಿ ಅಧ್ಯಕ್ಷರಾಗಿ ಉಪಾಧ್ಯಕ್ಷರು ಮುಂದುವೆರಯಬೇಕು ಎಂದು ಆದೇಶಿದ್ದರು.

ಈ ಹಿನ್ನೆಲೆಯಲ್ಲಿ ಜಿ.ಕೆ ಕುಮಾರ್ ಸೋಮವಾರ ಅಧಿಕಾರವಹಿಸಿಕೊಂಡರು. ಈ ವೇಳೆ ನಿರ್ಗಮಿತ ಅಧ್ಯಕ್ಷೆ ಮಣಿ ಮುರುಗನ್ ಸದಸ್ಯರಾದ ಲಕ್ಷ್ಮಮ್ಮ, ಜಯರಾಮೇಗೌಡ, ಪಿಡಿಒ ರಾಜೇಶ್ವರ್ ನರೇಗ ಎಂಜಿನಿಯರ್ ಇದ್ದರು.