ಗಾಯತ್ರಿ ಜಪದ ಶಕ್ತಿ ಅನನ್ಯ: ಸ್ವರ್ಣವಲ್ಲಿ ಶ್ರೀ

| Published : Apr 22 2025, 01:48 AM IST

ಸಾರಾಂಶ

ಭಗವಂತ ಗೀತೆಯಲ್ಲಿ ಹೇಳಿರುವಂತೆ ಜಪ ಕೂಡ ಒಂದು ಯಜ್ಞ. ಅದನ್ನು ಎಲ್ಲರೂ ಮಾಡಬಹುದು.

ಯಲ್ಲಾಪುರ: ಭಗವಂತ ಗೀತೆಯಲ್ಲಿ ಹೇಳಿರುವಂತೆ ಜಪ ಕೂಡ ಒಂದು ಯಜ್ಞ. ಅದನ್ನು ಎಲ್ಲರೂ ಮಾಡಬಹುದು. ನಿರಂತರ ಶ್ರದ್ಧೆ, ನಿಷ್ಠೆಯಿಂದ ಮಾಡಿದ ಜಪದಿಂದ ಸಿದ್ಧಿ ಉಂಟಾಗುತ್ತದೆ. ಅದರಲ್ಲೂ ಗಾಯತ್ರಿ ಜಪಕ್ಕೆ ಇರುವ ಶಕ್ತಿ ಅನನ್ಯವಾದುದು ಎಂದು ಸೋಂದಾ ಸ್ವರ್ಣವಲ್ಲಿಯ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಶ್ರೀ ನುಡಿದರು.

ಅವರು ಪಟ್ಟಣದ ನಾಯಕನಕೆರೆಯ ಶಾರದಾಂಬಾ ಸಭಾಭವನದಲ್ಲಿ ಹನುಮಂತ ಗುಡಿ, ಶಾರದಾಂಬಾ ದೇವಸ್ಥಾನದ ವರ್ಧಂತಿ ಉತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಾವು ಸತತ ಪ್ರಯತ್ನ ಮಾಡಿದರೆ ಯಾವುದೇ ಸಾಧನೆ ಮಾಡಬಹುದು. ನಮಗೆ ಸಂತೃಪ್ತಿ, ಏಕಾಂತ, ಅಧ್ಯಯನದಿಂದ ಸಾಧನೆಯತ್ತ ಮುನ್ನಡೆಯಬಹುದು. ನಮ್ಮ ಬಾಲಾ ತ್ರಿಪುರಸುಂದರಿದೇವಿ ಒಂದು ಕೈಯಲ್ಲಿ ಅಮೃತಕಲಶ, ಇನ್ನೊಂದರಲ್ಲಿ ಪುಸ್ತಕ, ಮತ್ತೊಂದರಲ್ಲಿ ರುದ್ರಾಕ್ಷಿ ಮಾಲೆ ಇವನ್ನೆಲ್ಲ ಗಮನಿಸಿದರೆ ನಮಗೆ ಸ್ಪಷ್ಟವಾಗಿ ಅಧ್ಯಯನ, ಜಪದಿಂದ ಶ್ರೇಷ್ಠತೆಯ ದಾರಿಯನ್ನು ತೋರಿಸುತ್ತದೆ. ಸ್ವರ್ಣವಲ್ಲಿಯಲ್ಲಿ ಪರಿಪೂರ್ಣ ಅಧ್ಯಯನ ಮಾಡಿದ ಘನಪಾಠಿ ಮಹೇಶ ಭಟ್ಟ ಹಿತ್ತಲಕಾರಗದ್ದೆ, ಶಾರದಾಂಬಾ ದೇವಸ್ಥಾನದಲ್ಲಿ ೧೦ ವರ್ಷಗಳ ಕಾಲ ಕಾರ್ಯದರ್ಶಿಯಾಗಿದ್ದ ನಿರಂತರ ಸೇವೆ ಮಾಡುತ್ತಾ ಪರಮಭಕ್ತ ಅಶೋಕ ಶೆಟ್ಟಿ, ಸದಾ ಸೇವಕನಾದ ಕೃಷ್ಣ ಭಟ್ಟ ನಾಯಕನಕೆರೆ ಅವರನ್ನು ಸನ್ಮಾನಿಸಿದರು.

ದೇವಸ್ಥಾನದ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ನಾವು ಆಧುನಿಕತೆಗೆ ಒಳಗಾಗಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಇದರಿಂದ ನಮ್ಮ ಸಂಸ್ಕೃತಿ, ಮೌಲ್ಯ, ಪರಂಪರೆಗೆ ಧಕ್ಕೆಯಾಗುತ್ತಿದೆ. ಸಮಾಜದಲ್ಲಿಂದು ಬ್ರಾಹ್ಮಣ್ಯತ್ವಕ್ಕೆ ತೀವೃ ಆಘಾತ ಉಂಟಾಗುತ್ತಿದೆ. ಮೊನ್ನೆ ನಡೆದ ಜನಿವಾರ ಪ್ರಕರಣ ತೀವ್ರ ಘಾಸಿಗೊಳಿಸಿದೆ. ಧರ್ಮ, ಜಾತಿ ನಿಂದನೆ ಯಾವ ಸಮಾಜಕ್ಕೂ ಒಳಿತಾಗದು. ಬ್ರಾಹ್ಮಣರು ತೀರಾ ಬಡತನದಿಂದಲೇ ಬದುಕಿ ಸಾತ್ವಿಕತನ ಉಳಿಸಿಕೊಂಡು, ಎಲ್ಲ ಸಮಾಜದವರೊಂದಿಗೆ ಒಂದಾಗಿ ಬದುಕಿ ಬಂದಿದ್ದಾರೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು. ಮಹೇಶ ಭಟ್ಟ ಹಿತ್ತಲಕಾರಗದ್ದೆ, ಕವಿ ಕೃಷ್ಣ ಭಟ್ಟ ನಾಯಕನಕೆರೆ ಅವರನ್ನು ಸನ್ಮಾನಿಸಲಾಯಿತು.

ಶಿಬಿರಾರ್ಥಿಗಳು ವೇದಘೋಷ ಪಠಿಸಿದರು. ಆದ್ಯಾ ಪಟೇಲ್ ಸಂಗಡಿಗರು ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷ ಉಮೇಶ ಭಾಗ್ವತ ಸ್ವಾಗತಿಸಿದರು. ಪಾಠಶಾಲಾ ಅಧ್ಯಾಪಕ ಡಾ.ಶಿವರಾಮ ಭಾಗ್ವತ ನಿರ್ವಹಿಸಿದರು. ದೇವಸ್ಥಾನದ ಜಂಟಿ ಕಾರ್ಯದರ್ಶಿ ನರಸಿಂಹ ಗೇರಗದ್ದೆ ವಂದಿಸಿದರು.

ಶಾರದಾಂಬಾ ದೇವಸ್ಥಾನದ ವರ್ಧಂತಿ ಉತ್ಸವದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.