ಶಿರನಾಲಾ ಗೋಕುಲ ಬಾನ್ಸುರಿ ಗುರುಕುಲ ಟ್ರಸ್ಟ್ ವಾರ್ಷಿಕೋತ್ಸವ, ಕೊಳಲು ವಾದನ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಯಲ್ಲಾಪುರ
ಕೊಳಲು ಕೃಷ್ಣನಿಗೆ ಪ್ರಿಯವಾದದ್ದು. ಅದು ಓಂಕಾರ ನಾದವನ್ನು ನೀಡುತ್ತದೆ. ಸಂಗೀತದಲ್ಲಿ ವೈಭವದ ಶಕ್ತಿ ಅಡಗಿದೆ. ಅದನ್ನು ಅನುಭವಿಸುವವರು ಮಾತ್ರ ಆನಂದ ಪಡೆಯಬಹುದು. ಬದಲಾದ ಕಾಲಘಟ್ಟದಲ್ಲಿ ಇಂತಹ ಶ್ರೇಷ್ಟ ಕಲೆ, ಸಂಗೀತ, ಸಾಹಿತ್ಯ ಇವೆಲ್ಲವುಗಳ ಆರಾಧನೆ ನಡೆಸುವುದು ಕಷ್ಟದ ಕೆಲಸವಾಗಿದೆ. ಯುವ ಜನಾಂಗ ದೂರಾಗುತ್ತಿರುವುದು ಆತಂಕದ ವಿಷಯ ಎಂದು ಹಿರಿಯ ಸಾಹಿತಿ ವನರಾಗ ಶರ್ಮ ಹೇಳಿದರು.ತಾಲೂಕಿನ ಹಾಸಣಗಿ ಗ್ರಾಪಂನ ಶಿರನಾಲಾ ಗೋಕುಲ ಬಾನ್ಸುರಿ ಗುರುಕುಲ ಟ್ರಸ್ಟ್‌ನ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಆ ನಿಟ್ಟಿನಲ್ಲಿ ಶಿರನಾಲಾದ ಇಡೀ ಕುಟುಂಬವೇ ತೀರಾ ಅಪರೂಪದ ಕುಟುಂಬವೆನ್ನಬೇಕು. ಐದಾರು ಜನ ಸಹೋದರರನ್ನು ಒಡಗೂಡಿ ಒಂದೇ ಮನೆಯಲ್ಲಿರುವುದು ಇಂದು ತೀರಾ ಅಪರೂಪ. ಅದರಲ್ಲೂ ಟ್ರಸ್ಟಿನ ಅಧ್ಯಕ್ಷ ನಾಗರಾಜ ಹೆಗಡೆ ರಾಷ್ಟ್ರೀಕೃತ ಬ್ಯಾಂಕಿನ ಉನ್ನತ ಹುದ್ದೆಯನ್ನು ಬಿಟ್ಟು ಕೃಷಿಯ ಜೊತೆ ತನ್ನ ಕೊಳಲ ವಾದನ ಅಧ್ಯಯನ ಮಾಡುತ್ತ ಗುರುಕುಲ ಸ್ಥಾಪಿಸಿ ಉಚಿತವಾಗಿ ಅನೇಕ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದು ಇಂದಿನ ಸಮಾಜದಲ್ಲಿ ಅಸಾಮಾನ್ಯವಾದುದು. ಈ ಕುಟುಂಬ ರಾಮರಾಜ್ಯದ ರಾಮನ ಚಿಂತನೆಯನ್ನು ಆದರ್ಶವಾಗಿಟ್ಟುಕೊಂಡು ಸಾಕಾರಗೊಳಿಸಿದೆ. ಇಂತಹ ಸುಂದರ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೂ ಪುಣ್ಯ ಬೇಕು. ಅದರಲ್ಲೂ ಈ ಮಂಚೀಕೇರಿ ಪ್ರದೇಶ ಕಲೆ, ಸಾಹಿತ್ಯ, ಸಂಗೀತಗಳ ಗಟ್ಟಿನೆಲ. ಸಂಗೀತದ ಆರಾಧನೆ ಎಂದರೇ ದೇವರ ಆರಾಧನೆ. ಅದು ಅಷ್ಟು ಪವಿತ್ರವಾದದ್ದು. ಭಗವಂತನು ಕೂಡ ಈ ಆರಾಧಕರನ್ನು ಅತಿ ಹೆಚ್ಚು ಪ್ರೀತಿಸುತ್ತಾನೆ ಎನ್ನುವುದಕ್ಕೆ ಕೃಷ್ಣನ ಕೊಳಲೇ ಸಾಕ್ಷಿ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ನಾಗರಾಜ ಹೆಗಡೆ ಶಿರನಾಲಾ ಮಾತನಾಡಿ, ಕಳೆದ ೧೭ ವರ್ಷಗಳಿಂದ ಗೋಕುಲ ಉತ್ಸವವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದೇವೆ. ಹಿರಿಯರು, ದಾನಿಗಳು ಮಾರ್ಗದರ್ಶನ ಮತ್ತು ನೆರವು ನೀಡುತ್ತಿದ್ದಾರೆ. ಇದಕ್ಕೆಲ್ಲ ಸಂಗೀತಾಸಕ್ತರ ಅಭಿಮಾನವೇ ಕಾರಣ ಎಂದರು.
ಟ್ರಸ್ಟಿನಲ್ಲೊಬ್ಬರಾದ ಶ್ರೀಪಾದ ಹೆಗಡೆ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಭಟ್ಟ ನಿರ್ವಹಿಸಿದರು. ಅಖಿಲಾ ನಾಗರಾಜ ಹೆಗಡೆ ವರದಿ ವಾಚಿಸಿದರು.
ನಂತರ ನಡೆದ ಕೊಳಲು ವಾದನದಲ್ಲಿ ಗೋಕುಲದ ವಿದ್ಯಾರ್ಥಿ ಕಾರ್ತಿಕ್ ಹೇಮಾದ್ರಿ ಅತ್ಯಂತ ಸೊಗಸಾಗಿ ಪೂರಿಯಾ ಧನಾಶ್ರೀ ರಾಗ ನುಡಿಸಿದರು. ಶಿರಸಿಯ ಯುವ ಕಲಾವಿದ ರಾಮದಾಸ ಭಟ್ಟ ತಬಲಾ ಸಾತ್ ನೀಡಿದರು. ಬೆಂಗಳೂರಿನ ಗೌತಮ ಹೆಬ್ಬಾರ್ ಮಾರುಬಿಹಾಗ, ಸರಸ್ವತಿ ಮತ್ತು ಪಹಾಡಿ ಧುನ್ ರಾಗದಲ್ಲಿ ಅತ್ಯಂತ ಪ್ರಭಾವಪೂರ್ಣವಾಗಿ ಕೊಳಲು ವಾದನ ನುಡಿಸಿ ಜನಮೆಚ್ಚುಗೆ ಪಡೆದರು. ಅವರಿಗೆ ಅಷ್ಟೇ ಸಮರ್ಥವಾಗಿ ಹೊನ್ನಾವರದ ಗುರುರಾಜ ಹೆಗಡೆ ಆಡುಕಳ ತಬಲಾ ಸಾತ್ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಅಂತಾರಾಷ್ಟ್ರೀಯ ಕಲಾವಿದ, ಕೋಲ್ಕತ್ತಾದ ಅಂಬರೀಶ್ ದಾಸ್ ರಾಗ ಪೂರಿಯಾ, ಮಾಲಕೌಂಸ ಮತ್ತು ಭೈರವಿ ರಾಗ ಹಾಡಿ ಜನಮನಸೂರೆಗೊಂಡರು. ತಬಲಾದಲ್ಲಿ ಬೆಂಗಳೂರಿನ ಯೋಗೀಶ ಭಟ್ಟ ಮತ್ತು ಹಾರ್ಮೋನಿಯಂನಲ್ಲಿ ಶಿರಸಿಯ ಗುರುಪ್ರಸಾದ ಹೆಗಡೆ ಗಿಳಿಗುಂಡಿ ಸಮರ್ಥವಾಗಿ ಸಾಥ್ ನೀಡಿದರು. ನವೀನ ಹೆಗಡೆ ಮತ್ತು ಭೂಮಿಕಾ ಭಟ್ಟ ತಂಬೂರಿಯಲ್ಲಿ ಸಹಕರಿಸಿದರು.------
ಫೆ.೯ ವೈ.ಎಲ್.ಪಿ. ೦೬ಶಿರನಾಲಾ ಗೋಕುಲ ಬಾನ್ಸುರಿ ಗುರುಕುಲ ಟ್ರಸ್ಟ್ ವಾರ್ಷಿಕೋತ್ಸವ ಮತ್ತು ಕೊಳಲು ವಾದನ ಕಾರ್ಯಕ್ರಮ ಉದ್ಘಾಟಿಸಲಾಯಿತು.